ಟಿಪ್ಪು ಜಯಂತಿಗೆ ಹೋಗದಂತೆ ತಡೆದಿದ್ದ ದೇವರೇ ಪ್ರಮೋದ ರನ್ನು ಚುನಾವಣೆಯಲ್ಲಿ ಸೋಲಿಸಿದ್ದಾರೆ – ಅನ್ಸಾರ್ ಅಹ್ಮದ್
ಉಡುಪಿ: ಕಾಂಗ್ರೆಸ್ ಮುಖಂಡರು ಹಾಗೂ ಉಡುಪಿ ಜಿಲ್ಲಾ ಮಾಜಿ ಉಸ್ತುವಾರಿ ಮಂತ್ರಿಯಾಗಿರುವ ಪ್ರಮೋದ್ ಮಧ್ವರಾಜ್ ರವರು ತಮ್ಮ ಅಧಿಕಾರಾವಧಿಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದನ್ನು ಸಮರ್ಥಿಸಿಕೊಂಡಿದ್ದಾರೆ ಹಾಗೂ ದೇವರೇ ನನ್ನನ್ನು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ತಡೆದಿದ್ದಾರೆ ಎಂಬಂತಹ ಹೇಳಿಕೆಯನ್ನು ನೀಡಿದ್ದಾರೆ. ಅದೇ ರೀತಿ ಪ್ರಮೋದ್ ಮಧ್ವರಾಜ್ ರವರನ್ನು ಟಿಪ್ಪು ಜಯಂತಿಗೆ ಹೋಗದಂತೆ ತಡೆದಿದ್ದ ದೇವರೇ ನಂತರ ನಡೆದ ಚುನಾವಣೆಯಲ್ಲಿ ಸೋಲಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹಮ್ಮದ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಕಳೆದ ಬಾರಿ ಶ್ರೀಯುತ ಪ್ರಮೋದ್ ಮಧ್ವರಾಜ್ ಉಡುಪಿಯಲ್ಲಿದ್ದುಕೊಂಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದನ್ನು ಮಾಧ್ಯಮದ ಮೂಲಕ ಅವರನ್ನು ಪ್ರಶ್ನಿಸಿದ್ದೆ.
ತಾನು ಹೊರಜಗತ್ತಿಗೆ ತೋರುವ ವ್ಯಕ್ತಿತ್ವವೇ ಬೇರೆ ಹಾಗೂ ತನ್ನೊಳಗಿರುವ ವ್ಯಕ್ತಿತ್ವವೇ ಬೇರೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಬಿಜೆಪಿ ಪಕ್ಷದ ಕೆಲವು ವಿಚಾರಧಾರೆಯನ್ನು ಇವರು ಹೊಂದಿರುವುದು ಯಾರಿಗೂ ತಿಳಿಯದ ವಿಚಾರವೇನಲ್ಲ.
ಯಾವ ರೀತಿ ಇವರನ್ನು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಹೋಗದಂತೆ ದೇವರು ತಡೆದಿದ್ದಾರೆಯೋ ಅದೇ ರೀತಿ ಸಮಯ ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಪ್ರಮೋದ್ ಮಧ್ವರಾಜ್ ಅವರನ್ನು ಸಹ ಚುನಾವಣೆಯಲ್ಲಿ ಗೆಲ್ಲದಂತೆ ದೇವರೇ ತಡೆದಿದ್ದಾರೆ.
ಇವರು ಮರಳಿನ ವಿಚಾರದಲ್ಲಿ ಬಡವರ ಪರವಾಗಿ ನಿಲ್ಲುತ್ತಿದ್ದರೆ ಖಂಡಿತವಾಗಿಯೂ ಬಡವರು ನಂಬಿದ ದೇವರ ದಯೆಯಿಂದ ಇವರು ಚುನಾವಣೆಯಲ್ಲಿ ಗೆಲ್ಲುತ್ತಿದ್ದರು.
ಮರಳುಗಾರಿಕೆ ನಿಷೇಧವಾಗಿದ್ದ ಸಮಯ ಕಾಳಸಂತೆಯಲ್ಲಿ ಮೂರು ಪಟ್ಟು ಬೆಲೆಗೆ ಮರಳು ಮಾರಾಟವಾಗುತ್ತಿದೆ, ದಯವಿಟ್ಟು ಮರಳು ಗಾರಿಕೆಯನ್ನು ಆರಂಭಿಸಿ ಬಡವರಿಗೆ ಕಡಿಮೆ ಬೆಲೆಯಲ್ಲಿ ಮರಳು ಸಿಗುವಂತೆ ಮಾಡಿ ಎನ್ನುವಂತಹ ನಮ್ಮ ಬೇಡಿಕೆಗೆ ಉಸ್ತುವಾರಿ ಮಂತ್ರಿಯಾಗಿದ್ದ ಪ್ರಮೋದ್ ಮಧ್ವರಾಜ್ ಅವರು ಈಗ ದುಡ್ಡಿದ್ದವರು ಮಾತ್ರ ಮನೆ ಕಟ್ಟಲಿ. ಬಡವರು ಮರಳುಗಾರಿಕೆ ಆರಂಭವಾದ ಮೇಲೆ ಮನೆ ಕಟ್ಟಿದರೆ ಸಾಕು ಎಂಬಂತಹ ಮಾತನ್ನು ಆಡಿದ್ದು ಅದನ್ನು ನಾವಿನ್ನೂ ಮರೆತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ