ಟಿಪ್ಪು ವಿವಿ ಸ್ಥಾಪನೆಯಾಗಲಿ : ಇಂಡಿಯನ್ ಸೋಶಿಯಲ್ ಫೋರಮ್
ದಮಾಮ್ : ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ನ್ಯಾಯದ ಸಂಸ್ಥಾಪಕ, ಆಧುನಿಕ ತಂತ್ರಜ್ಞಾನದ ಹರಿಕಾರ ಮೈಸೂರು ಹುಲಿ ಟಿಪ್ಪುಸುಲ್ತಾನರ ಕುರಿತ ಇನ್ನಷ್ಟು ಅಧ್ಯಯನ ನಡೆಸಿ ಮುಂದಿನ ತಲೆಮಾರಿಗೆ ಮಾರ್ಗದರ್ಶನವಾಗುವಂತೆ ಟಿಪ್ಪುಸುಲ್ತಾನ್ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಇದು ಸಕಾಲ. ಕರ್ನಾಟಕ ಸರಕಾರವು ಶೀಘ್ರವೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಚುನಾವಣಾಪೂರ್ವ ನೀಡಿದ್ದ ಭರವಸೆಯನ್ನು ಸರಕಾರ ಉಳಿಸಿಕೊಳ್ಳಬೇಕು ಎಂದು ಇಂಡಿಯನ್ ಸೋಶಿಯಲ್ ಫೋರಮ್ ಆಗ್ರಹಿಸುತ್ತದೆ.
ಟಿಪ್ಪುಸುಲ್ತಾನ್ ಜಯಂತಿಯು ಕೇವಲ ಒಂದು ಪಕ್ಷದ ಕಾರ್ಯಕ್ರಮವಾಗಿ ಸಂಕುಚಿತಗೊಳ್ಳುತ್ತಿದೆ. ಟಿಪ್ಪುವಿನ ಸಾಧನೆ, ಹೋರಾಟವನ್ನು ಜಗತ್ತಿನ ಖ್ಯಾತ ಇತಿಹಾಸಕಾರರು ಗುರುತಿಸಿದ್ದಾರೆ. ಇಂತಹ ಇತಿಹಾಸವನ್ನು ತಿರುಚಿ; ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರನಿಗೆ ಅಪಚಾರವೆಸಗುವ ಫ್ಯಾಷಿಸ್ಟರ ಷಡ್ಯಂತ್ರಗಳನ್ನು ವಿಫಲಗೊಳಿಸಲು ಟಿಪ್ಪು ಅಧ್ಯಯನ ಕೇಂದ್ರ ಅತ್ಯಗತ್ಯವಾಗಿದೆ.
ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸಲು ಅಂದಿನ ಸುಮಾರು 200 ರಷ್ಟು ಪಾಳೇಗಾರರ ವಿರುದ್ಧ ಸಮರ ಸಾರಿದ್ದ ಟಿಪ್ಪುಸುಲ್ತಾನರು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದಿದ್ದರು. ಅವರ ಭೂಸುಧಾರಣೆ, ಆಡಳಿತ ವ್ಯವಸ್ಥೆ, ನೀರಾವರಿ ಯೋಜನೆ, ಅತ್ಯಾಧುನಿಕ ಯುದ್ಧ ತಂತ್ರ, ಕೃಷಿ ಮಾರುಕಟ್ಟೆ ವ್ಯವಸ್ಥೆ, ಧಾರ್ಮಿಕ ಸಹಿಷ್ಣುತೆ ಇವೆಲ್ಲವೂ ಪ್ರಸಕ್ತ ಸನ್ನಿವೇಶದಲ್ಲಿ ಮಾದರಿ ಯೋಗ್ಯವಾಗಿವೆ. ನಮ್ಮ ನಾಡು ಅಂತಹ ಗತ ವೈಭವವನ್ನು ಮರಳಿ ಪಡೆಯುವಂತಾಗಲಿ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಸಮಿತಿ-ದಮಾಮ್ ಹಾರೈಸುತ್ತದೆ.