ಟಿಪ್ಪು ಸಮರ್ಥ ಹಾಗೂ ಜನಪರ ಆಡಳಿತಗಾರ : ಜಿಲ್ಲಾಧಿಕಾರಿ ಟಿ ವೆಂಕಟೇಶ್
ಉಡುಪಿ:- ಭಾರತದ ಇತಿಹಾಸದಲ್ಲಿ ಸ್ಥಾನಪಡೆದಿರುವ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ ಸಮರ್ಥ ಹಾಗೂ ಜನಪರ ಆಡಳಿತಗಾರ ಎಂದು ಜಿಲ್ಲಾಧಿಕಾರಿ ಟಿ ವೆಂಕಟೇಶ್ ಹೇಳಿದರು.
ಅವರಿಂದು ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾದ ಟಿಪ್ಪು ಸುಲ್ತಾನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಟಿಪ್ಪು ದೂರದೃಷ್ಟಿಯುಳ್ಳ ಆಡಳಿತಗಾರನಾಗಿದ್ದು, ಜನರಿಗಾಗಿ ಹತ್ತು ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಮೈಸೂರು ಸಂಸ್ಥಾನವನ್ನು ಕೃಷಿ, ನೀರಾವರಿ, ಕೈಗಾರಿಕೀಕರಣದ ಮೂಲಕ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಸರ್ವಧರ್ಮ ಸಹಿಷ್ಣುತೆಯ ಮೂಲಕ ನಾಡಿನ ಅಭಿವೃದ್ಧಿಗೆ ಪಣತೊಟ್ಟು, ಬ್ರಿಟಿಷರ ವಿರುದ್ಧ ಹೋರಾಡಿದ್ದರು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನವೀನ್ ಕೊರೆಯಾ ಅವರು, ತಾಂತ್ರಿಕತೆ, ಟಂಕಸಾಲೆ, ವಾಣಿಜ್ಯ ವ್ಯವಹಾರ ಪ್ರೋತ್ಸಾಹ, ರಫ್ತು ಉದ್ಯಮ, ಸಾಂಬಾರ ಪದಾರ್ಥಗಳ ಏಕಸ್ವಾಮ್ಯತೆ, ಟಂಕಸಾಲೆ, ಮಿಲಿಟರಿ ತಂತ್ರಜ್ಞಾನ ಅಭಿವೃದ್ಧಿ, ಬಂದೂಕು ನಿರ್ಮಾಣ ಎಲ್ಲದರಲ್ಲೂ ಸ್ವಾವಲಂಬನೆ ಸಾಧಿಸಿ ಅತ್ಯುತ್ತಮ ರಾಜನೀತಿಜ್ಞ ಎಂದು ಟಿಪ್ಪು ಹೆಸರುಗಳಿಸಿದ್ದ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಟಿ ಬಾಲಕೃಷ್ಣ, ತಹಸೀಲ್ದಾರ್ ಮಹೇಶ್ಚಂದ್ರ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕ ಯೋಗೇಶ್ವರ್, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಹರೀಶ್ ಗಾಂವ್ಕರ್, ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.