Home Mangalorean News Kannada News ಡಾ| ಹೆಗ್ಗಡೆಯವರೊಂದಿಗೆ ಡಾ| ಆಸ್ಟಿನ್ ಪ್ರಭು ಭೇಟಿ

ಡಾ| ಹೆಗ್ಗಡೆಯವರೊಂದಿಗೆ ಡಾ| ಆಸ್ಟಿನ್ ಪ್ರಭು ಭೇಟಿ

Spread the love

ಡಾ| ಹೆಗ್ಗಡೆಯವರೊಂದಿಗೆ ಡಾ| ಆಸ್ಟಿನ್ ಪ್ರಭು ಭೇಟಿ

ಮಂಗಳೂರು : ವಿಶ್ವವ್ಯಾಪಿ ಲಯನ್ಸ್ ಸಂಘಟನೆಯ ಉದಯವಾದ ಮತ್ತು ಪ್ರಧಾನ ಕಾರ್ಯಾಲಯವಿರುವ ಅಮೇರಿಕಾ ಸಂಯುಕ್ತ ಸಂಸ್ಥಾನದ ಚಿಕಾಗೊಲ್ಯಾಂಡ್ ಪ್ರದೇಶವನ್ನೊಳಗೊಂಡ ಲಯನ್ಸ್ 1ಎ (ಲಯನ್ಸ್ ಮಾತೃ ಜಿಲ್ಲೆ)ಯ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ ಪ್ರಥಮ ಭಾರತೀಯ ಮೂಲದವರು ಎಂಬ ಕೀರ್ತಿಗೆ ಪಾತ್ರರಾಗಿರುವ ಡಾ| ಆಸ್ಟಿನ್ ಡಿಸೋಜಾ ಪ್ರಭು ಅವರು ಧರ್ಮಸ್ಥಳದ ಧರ್ಮಾದಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಜನವರಿ 2ರಂದು ಅವರ ನಿವಾಸದಲ್ಲಿ ಭೇಟಿಯಾದರು. 1981ರಿಂದ ಚಿಕಾಗೊ ನಿವಾಸಿಯಾಗಿರುವ ಡಾ| ಆಸ್ಟಿನ್ ಅವರು ಸದ್ಯ ಮಂಗಳೂರು ಭೇಟಿಯಲ್ಲಿದ್ದಾರೆ.

ಡಾ| ಹೆಗ್ಗಡೆಯವರು ಲಯನ್ಸ್ ಸಂಸ್ಥೆಯ ಮೂಲಕ ಡಾ| ಆಸ್ಟಿನ್ ಅವರು ನಡೆಸುತ್ತಿರುವ ಚಟುವಟಿಕೆಗಳನ್ನು ಶ್ಲಾಘಿಸಿದರು. ‘ಅಬೋಡ್ ಆಫ್ ಧರ್ಮ – ಧರ್ಮಸ್ಥಳ’ ಹೆಸರಿನ ಮಾಹಿತಿ ಪುಸ್ತಕ ಮತ್ತು ಸ್ಮರಣಿಕಾ ಮೆಡಲ್ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಂಗಳೂರಿನ ಎಸ್‍ಡಿಎಂ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿಯೂ ಆಗಿರುವ ಮರಿಯಾ ಜಾಹೀರಾತು ಸಂಸ್ಥೆಯ ಮ್ಹಾಲಕ ಎಚ್. ಆರ್. ಆಳ್ವ ಅವರು ಉಪಸ್ಥಿತರಿದ್ದರು.

ಮಂಗಳೂರಿನ ನಂತೂರಿನಲ್ಲಿ 1950ರಲ್ಲಿ ಜನಿಸಿದ್ದ ಆಸ್ಟಿನ್ ಅವರು 1970ರ ದಶಕದಲ್ಲಿ ಅನೇಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮಂಗಳೂರು ಧರ್ಮಪ್ರಾಂತ್ಯದ ಕೆಥೋಲಿಕ್ ಯುವ ಸಂಚಾಲನ (ಈಗಿನ ಐಸಿವೈಎಂ)ದ ಅಧ್ಯಕ್ಷರಾಗಿ ಸತತ 5 ಅವದಿಗೆ ಸೇವೆ ಸಲ್ಲಿಸಿದ್ದ ಆಸ್ಟಿನ್ ಅವರು 4 ಕೊಂಕಣಿ (ಸಾಪ್ತಾಹಿಕ, ಪಾಕ್ಷಿಕ, ಮಾಸಿಕ ಮತ್ತು ತ್ರೈಮಾಸಿಕ)ನಿಯತಕಾಲಿಕೆಗಳನ್ನು ಸಂಪಾದಿಸಿ ಮುನ್ನಡೆಸಿದ್ದರು. ನಟನೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಕೊಂಕಣಿ ನಾಟಕಗಳನ್ನೂ ರಚಿಸಿದ್ದರು. ಕೊಂಕಣಿ ಭಾಷಾ ಮಂಡಳ, ಕರ್ನಾಟಕ (ನೋಂದಾಯಿತ)ದ ಸ್ಥಾಪಕ ಕಾರ್ಯದರ್ಶಿಯಾಗಿ ದುಡಿದಿದ್ದರು. ಆಗಿನ ಯುವ ಜನತಾ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

ಡಾ| ಆಸ್ಟಿನ್ ಅವರ ಬಳಿಕ ಅವರ ಧರ್ಮಪತ್ನಿ ಟ್ರೀಜಾ ಡಿಸೋಜಾ ಅವರೂ ಲಯನ್ಸ್ 1ಎ ರಾಜ್ಯಪಾಲರಾಗಿ ದುಡಿದಿದ್ದಾರೆ.


Spread the love

Exit mobile version