ಡಿಕೆಶಿ ಬಂಧನ ನೆಪದಲ್ಲಿ ಮೋದಿ, ಶಾ ಪ್ರತಿಕೃತಿ ದಹಿಸಿದರೆ ಸಹಿಸುವುದಿಲ್ಲ – ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಡಿಕೆಶಿ ಬಂಧನ ನೆಪದಲ್ಲಿ ಮೋದಿ, ಶಾ ಪ್ರತಿಕೃತಿ ದಹನ ಖಂಡನೀಯ ಎಂದು ರಾಜ್ಯದ ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಗುರುವಾರ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಡಿಕೆ ಶಿವಕುಮಾರ್ ಬಂಧನ ಒಂದು ಕಾನೂನು ಸಂಬಂಧಿಸಿದ ಪ್ರಕ್ರಿಯ ಆಗಿದ್ದು, ಪ್ರತಿಭಟನೆ ಧರಣಿ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಸ್ವಾತಂತ್ರ್ಯ ಇದೆ. ಅದನ್ನು ನಾನಾಗಲಿ ಅಥವಾ ನಮ್ಮ ಬಿಜೆಪಿ ಪಕ್ಷವಾಗಲಿ ಎಂದಿಗೂ ಪ್ರಶ್ನಿಸುವುದಿಲ್ಲ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿಯನ್ನು ದಹಿಸಿ ಅವಮಾನಗಳಿಸಿರುವುದು ಖಂಡನೀಯವಾಗಿದೆ ಎಂದರು.
ಇಡಿಯಿಂದ ಡಿಕೆ ಶಿವಕುಮಾರ್ ಅವರಿಗೆ ಅನ್ಯಾಯವಾದರೆ ಅದನ್ನು ಅವರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಿ. ಡಿ ಕೆ ಶಿವಕುಮಾರ್ ಯಾವುದೇ ಸ್ವಾತಂತ್ರ್ಯ ಹೋರಾಟ ಮಾಡಿಕೊಂಡು, ತುರ್ತು ಪರಿಸ್ಥಿತಿ ಎದುರಿಸಿಕೊಂಡು ಜೈಲಿಗೆ ಹೋಗಿಲ್ಲ. ವಿನಾಕಾರಣ ಪ್ರಧಾನಿ, ಗೃಹ ಸಚಿವರಿಗೆ ಅವಮಾನ ಮಾಡಿದರೆ ಅದಕ್ಕೆ ಪ್ರತಿರೋಧ ಮಾಡಲು ಬಿಜೆಪಿ ಪಕ್ಷಕ್ಕೂ ತಿಳಿದಿದೆ. ಕಾಂಗ್ರೆಸಿಗರ ವರ್ತನೆ ನಾಗರಿಕ ಸಮಾಜಕ್ಕೆ ಶೋಭೆ ತರುವಂತದಲ್ಲ ಎಂದರು.
ಡಿಕೆ ಶಿವಕುಮಾರ್ ರೀತಿಯೇ ಈ ಹಿಂದೆ ಜಗನ್ ಮೋಹನ್ ರೆಡ್ಡಿ, ಜನಾರ್ದನ ರೆಡ್ಡಿಯವರ ಬಂಧನ ಕೂಡ ಆಗಿತ್ತು ಹಾಗಂತ ಯಾರೂ ಕೂಡ ಸರಕಾರಿ ಬಸ್ಸುಗಳಿಗೆ ಕಲ್ಲು ಹೊಡೆದು ಯಾರೂ ಕೂಡ ಹಾನಿ ಮಾಡಿಲ್ಲ. ಪ್ರತಿಭಟನೆ ಹೆಸರಿನಲ್ಲಿ ಬಸ್ಸುಗಳಿಗೆ ಕಲ್ಲು ಹೊಡೆದರೆ ಬಿಜೆಪಿ ಕೂಡ ಸಹಿಸುವುದಿಲ್ಲ. ಡಿಕೆ ಶಿವಕುಮಾರ್ ಜೈಲಿಗೆ ಹೋಗಲು ಬಿಜೆಪಿ ಪಕ್ಷ ಕಾರಣವಲ್ಲ ಇಂತಹ ವರ್ತನೆ ಮುಂದುವರೆದಲ್ಲಿ ನಮ್ಮ ಪಕ್ಷ ಸಹಿಸುವುದಿಲ್ಲ ಎಂದರು.