ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಮತ್ತೆ ಅನುಮತಿ ನಿರಾಕರಿಸಿದ ರಾಜ್ಯ ಸರ್ಕಾರ
ಬೆಂಗಳೂರು: ಡಿಕೆ ಶಿವಕುಮಾರ್ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪದಗ್ರಹಣ ಕಾರ್ಯಕ್ರಮ ಆಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ಮತ್ತೆ ಬ್ರೇಕ್ ಬಿದ್ದಿದ್ದು, ಯಾವುದೇ ಕಾರಣಕ್ಕೂ ಪದಗ್ರಹಣ ಮಾಡಬಾರದು ಎಂದು ರಾಜ್ಯ ಸರ್ಕಾರ ಪತ್ರ ಬರೆಯುವ ಮೂಲಕ ಅನುಮತಿ ನಿರಾಕರಿಸಿದೆ. ಈ ಬಗ್ಗೆ ಸರ್ಕಾರವೇ ಅಧಿಕೃತವಾಗಿ ಡಿಕೆ ಶಿವಕುಮಾರ್ಗೆ ಪತ್ರದ ಮುಖೇನ ಸ್ಪಷ್ಟನೆ ನೀಡಿದೆ ಎಂದು ತಿಳಿದುಬಂದಿದೆ.
ಇದೇ ಜೂನ್ 14ನೇರಂದು ಪದಗ್ರಹಣಕ್ಕೆ ಮುಂದಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಆದರೀಗ, ರಾಜ್ಯ ಸರ್ಕಾರ ಯಾವುದೇ ರಾಜಕೀಯ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಮತ್ತು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಕೇಂದ್ರ ಸರ್ಕಾರ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮದುವೆ, ಶವಸಂಸ್ಕಾರಕ್ಕೆ ಮಾತ್ರ ಅವಕಾಶ ನೀಡಿದೆ. ಆದರೆ ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ನೀಡಿಲ್ಲ. ಹೀಗಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಪತ್ರದಲ್ಲಿ ಉಲ್ಲೇಖಿಸಿದೆ.
ಲಾಕ್ಡೌನ್ನಿಂದಲೇ ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ಮುಂದೂಡಲಾಗುತ್ತಿದೆ. ಈ ಸಂಬಂಧ ಅನುಮತಿ ಕೋರಿ ಡಿಕೆಶಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಪತ್ರವೂ ಬರೆದಿದ್ದರು. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಅವಕಾಶ ನೀಡುವ ನಿರೀಕ್ಷೆಯೂ ಇತ್ತು. ಆದರೀಗ ನಾಲ್ಕನೇ ಬಾರಿಗೆ ಸರ್ಕಾರ ಅನುಮತಿ ನಿರಾಕರಿಸಿದೆ.