ಡಿಸಿ ಕೊಲೆ ಯತ್ನ ಖಂಡಿಸಿದ ಪೇಜಾವರ ಸ್ವಾಮೀಜಿ; ಪ್ರಮೋದ್ ಪರ ಸೊರಕೆ ಬ್ಯಾಟಿಂಗ್
ಉಡುಪಿ: ಮರಳು ಮಾಫಿಯಾದವರಿಂದ ಉಡುಪಿ ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್ ಹಾಗೂ ಇತರರ ಮೇಲೆ ನಡೆದ ಘಟನೆಯನ್ನು ಉಡುಪಿ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿಗಳು, ಶೈಕ್ಷಣಿಕವಾಗಿ ಪ್ರಜ್ಞಾವಂತರನ್ನು ಹೊಂದಿರುವ ಉಡುಪಿಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿರುವುದು ವಿಷಾದನೀಯ ಸಂಗತಿಯಾಗಿದೆ. ನಿಷ್ಠಾವಂತ ಮಹಿಳಾ ಅಧಿಕಾರಿಗಳ ಮೇಲೆ ನಡೆದಿರುವ ಇಂತಹ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಇದನ್ನು ತೀವೃ ನೋವಿನಿಂದ ಈ ಘಟನೆಯನ್ನು ಖಂಡಿಸುತ್ತೇನೆ. ಜಿಲ್ಲೆಯಲ್ಲಿ ಇಂತಹ ಗೂಂಡಾಗಿರಿಯನ್ನು ಬೆಳೆಯಲು ಬಿಡುವುದನ್ನು ಆರಂಭದಲ್ಲೇ ಚಿವುಟಿ ಹಾಕಬೇಕಾಗಿದೆ ಇಂತಹ ಹಿಂಸಾತ್ಮಕ ಪ್ರವೃತ್ತಿ ನಿಜಕ್ಕೂ ಖಂಡನೀಯ. ನೂರಾರು ಮಂದಿ ಜೊತೆಯಾಗಿ ಸೇರಿ ಜಿಲ್ಲಾಧಿಕಾರಿ ಮತ್ತು ಇತರರ ಮೇಲೆ ಹಲ್ಲೆ ಮಾಡಿದರೂ ಇದುವರೆಗೆ ನಿಜವಾದ ಆರೋಪಿಗಳು ಪತ್ತೆಯಾಗದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಪೋಲಿಸ್ ಇಲಾಖೆ ಮತ್ತು ಸರಕಾರ ಕೂಡಲೇ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ.
ಈ ನಡುವೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಾತನಾಡಿ ಉಡುಪಿ ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣದ ಬಳಿಕ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕಾಣೆಯಾಗಿದ್ದಾರೆ. ಜಿಲ್ಲೆಯಲ್ಲಿ ಇಷ್ಟೋಂದು ಗಂಭೀರ ಪ್ರಕರಣ ನಡೆದರೂ ಕೂಡ ಅವರಿಗೆ ಉಪಚುನಾವಣೆಯೇ ಮುಖ್ಯವಾಗಿದೆ.ಸಚಿವರ ಇಂತಹ ಬೇಜವ್ದಾರಿ ನಡವಳಿಕೆ ಖಂಡನೀಯ. ಘಟನೆ ನಡೆದು ಮೂರು ದಿನವಾದರೂ ಜಿಲ್ಲೆಗೆ ಬರಲು ಸಚಿವರಿಗೆ ಸಮಯ ಸಿಕ್ಕದೆ ಇರುವುದು ನಾಚಿಕೆಗೇಡು. ಜಿಲ್ಲೆಯ ಮರಳು ಮಾಫಿಯಾವನ್ನು ಕಾಂಗ್ರೆಸ್ ಪಕ್ಷದ ಕೈಯಲ್ಲಿದ್ದು, ಇದಕ್ಕೆ ಉಸ್ತುವಾರಿ ಸಚಿವರೇ ನಿಯಂತ್ರಿಸುತ್ತಿದ್ದಾರೆ. ಅಧಿಕಾರಿಗಳ ರಕ್ಷಣೆಗೆ ನಿಲ್ಲಲು ಅಸಾಧ್ಯವಾದ ಸಚಿವ ಪ್ರಮೋದ್ ಕೂಡಲೇ ರಾಜೀನಾಮೆ ನೀಡಬೇಕು ಇಲ್ಲದವಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂತ್ರಿ ಹುದ್ದೆಯಿಂದ ತೆಗೆದು ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಿಜೆಪಿ ಅಧ್ಯಕ್ಷರ ಮಾತಿಗೆ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಪ್ರತಿಕ್ರಿಯಿಸಿ ಪ್ರಮೋದ್ ಪರ ಬ್ಯಾಟಿಂಗ್ ನಡೆಸಿದ್ದಾರೆ. ಪ್ರಮೋದ್ ಮಧ್ವರಾಜ್ ಅವರಿಗೆ ಉಪಚುನಾವಣೆಯ ಜವಾಬ್ದಾರಿ ನೀಡಿರುವುದರಿಂದ ಜಿಲ್ಲೆಗೆ ಬರಲು ಸಾಧ್ಯವಾಗಿಲ್ಲ ಇದಕ್ಕೆ ಯಾರೂ ಬೇರೆ ಅರ್ಥವನ್ನು ಕಲ್ಪಿಸುವ ಅಗತ್ಯವಿಲ್ಲ. ಉಸ್ತುವಾರಿ ಸಚಿವರಾಗಿ ಪ್ರಮೋದ್ ಎಲ್ಲಾ ಕೆಲಸಗಳನ್ನು ಸುಸೂತ್ರವಾಗಿ ಮಾಡುತ್ತಿದ್ದಾರೆ. ಜಿಲ್ಲೆಯ ಜವಾಬ್ದಾರಿಯೊಂದಿಗೆ ಉಪಚುನಾವಣೆಯ ಕೆಲಸವೂ ಮುಖ್ಯವಾಗಿದ್ದು ಎರಡನ್ನು ಸಹ ಸರಿಯಾಗಿ ನಿಭಾಯಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಕೆಲಸಕ್ಕೆ ಚ್ಯುತಿ ಬಾರದಂತೆ ಫೋನ್ ಮೂಲಕ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಕೂಡಲೇ ಅವರು ಜಿಲ್ಲೆಗೆ ಬರಲಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.