ಡಿಸೆಂಬರ್ 15ರೊಳಗೆ ಅನಿಲಭಾಗ್ಯ ವಿತರಣೆಗೆ ಕ್ರಮ- ಪ್ರಮೋದ್ ಮಧ್ವರಾಜ್
ಉಡುಪಿ: ರಾಜ್ಯ ಸರ್ಕಾರದ ಜನಪರ ಯೋಜನೆ ‘ಮುಖ್ಯಮಂತ್ರಿ ಅನಿಲಭಾಗ್ಯ’ವನ್ನು ಅರ್ಹರಿಗೆ ಒದಗಿಸುವ ನಿಟ್ಟಿನಲ್ಲಿ ಫಲಾನುಭವಿಗಳ ಪಟ್ಟಿಯನ್ನು ನವೆಂಬರ್ 20ರೊಳಗೆ ಅಂತಿಮಪಡಿಸಿ ಒದಗಿಸಲು ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್‍ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಸರ್ಕಾರ ಬಡವರಿಗಾಗಿ ರೂಪಿಸಿರುವ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಪ್ರತಿ ಫಲಾನುಭವಿಗೆ 4,040 ರೂ. ಮೌಲ್ಯದ ಅನಿಲ ಸಂಪರ್ಕ ದೊರೆಯಲಿದೆ. ಹಾಗಾಗಿ ಅರ್ಹರು ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ ಎಂದ ಸಚಿವರು, ಅಧಿಕಾರಿಗಳಿಗೆ ಸಮರ್ಪಕ ವಿತರಣೆಗೆ ಕ್ರಮ ಕೈಗೊಳ್ಳಿ ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದ ಎಲ್ಲ ಕುಟುಂಬಗಳಿಗೆ ಅನಿಲ ಸಂಪರ್ಕವನ್ನು ಒದಗಿಸಿ ರಾಜ್ಯವನ್ನು ಪರಿಸರ ಸ್ನೇಹಿ ರಾಜ್ಯವಾಗಿಸಲು ಆಹಾರ ಇಲಾಖೆ, ಕಾರ್ಮಿಕ ಇಲಾಖೆ, ಅರಣ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಿಂದ ಗುರುತಿಸಲ್ಪಟ್ಟಿರುವ ಜಿಲ್ಲೆಯ ಒಟ್ಟು 34763 ಗ್ಯಾಸ್ ಇಲ್ಲದ ಮನೆಗಳಲ್ಲಿ ಪ್ರಥಮ ಹಂತದಲ್ಲಿ 11059 ಫಲಾನುಭವಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ಈಗಾಗಲೇ ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್ ಪಡೆದ ಫಲಾನುಭವಿಗಳ ಮಾಹಿತಿಯನ್ನು ಎಚ್‍ಪಿಸಿಎಲ್ ಕಂಪೆನಿಯವರಿಂದ ನಾಳೆಯೊಳಗಾಗಿ ಪಡೆದು ಅನಿಲಭಾಗ್ಯ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಬೈಂದೂರಿನಲ್ಲಿ 3484, ಕುಂದಾಪುರದಲ್ಲಿ 2245, ಉಡುಪಿಯಲ್ಲಿ 874, ಕಾಪುವಿನಲ್ಲಿ 1563, ಕಾರ್ಕಳದಲ್ಲಿ 2893 ಫಲಾನುಭವಿಗಳ ಗುರಿ ನಿಗದಿ ಪಡಿಸಲಾಗಿದ್ದು, 20ರೊಳಗೆ ಪಟ್ಟಿಯನ್ನು ಅಂತಿಮಪಡಿಸಿ ಡಿಸೆಂಬರ್ 15ರೊಳಗಾಗಿ ಗ್ಯಾಸ್ ವಿತರಿಸಬೇಕೆಂದು ಸಚಿವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ತೋನ್ಸೆ, ಆಹಾರ ಮತ್ತು ನಾಗರೀಕರ ಪೂರೈಕೆ ಇಲಾಖೆ ಅಧಿಕಾರಿ ಎಂ ಆರ್ ಭಟ್ ಉಪಸ್ಥಿತರಿದ್ದರು.