ಡಿಸೆಂಬರ್ 15 ಮತ್ತು 16 ರಂದು ಜಿಲ್ಲೆಯಲ್ಲಿ ಸಾಗರ ಕವಚ ಅಣಕು ಕಾರ್ಯಚರಣೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಡಿಸೆಂಬರ್ 15 ಮತ್ತು 16 ರಂದು ಸಾಗರ ಕವಚ ಅಣಕು ಕಾರ್ಯಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾಧಿಕರಿಗಳ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಭಯೋತ್ಪಾದನ ಚಟುವಟಿಕೆ ನಡೆಯುವ ಸಂಭವವಿರುವುದರಿಂದ ಗೃಹ ಇಲಾಖೆಯ ನಿರ್ದೇಶನದಂತೆ, ಮುನ್ನೆಚ್ಚರಿಕೆ ಕ್ರಮವಾಗಿ ಈ ಅಣಕು ಕಾರ್ಯಾಚರಣೆ ನಡೆಯಲಿದ್ದು, ಜಿಲ್ಲೆಯ ಒಟ್ಟು 24 ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಬಹುದಾದ ಸ್ಥಳಗಳನ್ನು ಗುರುತಿಸಿದ್ದು ಈ ಎಲ್ಲಾ ಪ್ರದೇಶಗಳಲ್ಲಿ ಸೂಕ್ತ ಭದ್ರತೆ ಒಗದಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಅಣಕು ಕಾರ್ಯಾಚರಣೆ ಅವಧಿಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ತೆರಳುವ ಮೀನುಗಾರರು, ಸಮುದ್ರದಲ್ಲಿ ಸಂಶಯಾಸ್ಪದ ದೋಣಿ, ಬೋಟ್ ಗಳು ಅಪರಿಚಿತ ವ್ಯಕ್ತಿಗಳು , ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಕರಾವಳಿ ರಕ್ಷಣಾ ಪಡೆ ದೂರವಾಣಿ ಸಂಖ್ಯೆ 1093 ಅಥವಾ ಪೊಲೀಸ್ ಕಂಟ್ರೋಲ್ ರೂಂ 100 ಅಥವಾ ಜಿಲ್ಲಾಧಿಕಾರಿ ಕಛೇರಿ ಕಂಟ್ರೋಲ್ ರೂಂ ಸಂಖ್ಯೆ 1077 ಗೆ ಮಾಹಿತಿ ನೀಡುವಂತೆ ಹಾಗೂ ಅಪರಿಚಿತ ವ್ಯಕ್ತಿಗಳನ್ನು ಬೋಟ್ ಗಳಲ್ಲಿ ಹತ್ತಿಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ.
ಈ ಕುರಿತಂತೆ ಮೀನುಗಾರರ ಸಭೆ ನಡೆಸಿ ಮಾಹಿತಿ ನೀಡಲಾಗಿದೆ ಅಲ್ಲದೇ ಕಾರ್ಯಾಚರಣೆ ಮುಗಿಯುವರೆಗೂ ಸಾರ್ವಜನಿಕವಾಗಿ ಮೈಕ್ ಮೂಲಕ ಮಾಹಿತಿ ನೀಡಲಾಗುವುದು ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಕರಾವಳಿಯ 5 ನಾಟಿಲ್ ಮೈಲಿ ದೂರದ ವರೆಗೆ ಕರಾವಳಿ ಕಾವಲು ಪಡೆಯಿಂದ ಬೋಟ್ ಮೂಲಕ ಗಸ್ತು ಹಾಗೂ ಬೀಚ್ ಪ್ರದೇಶಗಳಲ್ಲಿ ಪೊಲೀಸರಿಂದ ಗಸ್ತು ವ್ಯವಸ್ಥೆ ಮಾಡಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಭಯೋತ್ಪಾದಕರು ರಸ್ತೆಯ ಮೂಲಕ ಸಹ ಬರುವ ಸಾಧ್ಯತೆಯಿದ್ದು, ಜಿಲ್ಲೆಯ ಹೆಜಮಾಡಿಯಿಂದ ಶಿರೂರು ವರೆಗೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದ್ದು, ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಸಂಶಯಾಸ್ಪದ ವಸ್ತುಗಳು ಮತ್ತು ವ್ಯಕ್ತಿಗಳು ಹಾಗೂ ಜಿಲ್ಲೆಗೆ ಬರುವ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ, ಬಸ್ ನಿಲ್ದಾಣಗಳಲ್ಲಿ ಸಂಶಯಾಸ್ಪದ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಸಿಬ್ಬಂದಿ ನಿಯೋಜಿಸಲಾಗಿದೆ, ಅಲ್ಲದೇ ಈಗಾಗಲೇ ಗುರುತಿಸಲಾಗಿರುವ 24 ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿದೆ, ಅಲ್ಲದೇ ತಪಾಸಣೆಗಾಗಿ ಮೊಬೈಲ್ ಟೀಂ ಗಳು ಹಾಗೂ ಕ್ಷಿಪ್ರ ಕಾರ್ಯಚರಣೆ ಪಡೆಯನ್ನು ಸಿದ್ದವಾಗಿರಿಸಲಾಗಿದ್ದು, ಯಾವುದೇ ಭಯೋತ್ಪಾದನಾ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್.ಪಿ. ಕೆ.ಟಿ ಬಾಲಕೃಷ್ಣ ತಿಳಿಸಿದರು.
ಮಣಿಪಾಲ ಕ್ಯಾಂಪಸ್ ನಲ್ಲಿ 500 ಮಂದಿ ಖಾಸಗಿ ಭದ್ರತಾ ಸಿಬ್ಬಂದಿ ಈಗಾಗಲೇ 3 ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರೆಲ್ಲರಿಗೂ ದಾಳಿ ತಡೆಯುವ ಬಗ್ಗೆ ತರಭೇತಿ ನೀಡಲಾಗಿದೆ, ಅಲ್ಲದೇ ಅನಾಟಮಿ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಮೇಲೂ ಸಹ ನಿಗಾ ಇಡಲಾಗಿದೆ, ಮೊಬೈಲ್ ಟೀಂ ಕಾರ್ಯ ನಿರ್ವಹಿಸುತ್ತಿದ್ದು, ನಿಯಮಿತವಾಗಿ ಪ್ರಾಟ್ರೋಲಿಂಗ್ ನಡೆಸಲಾಗುತ್ತಿದೆ ಎಂದು ಡಾ.ಪ್ರಭುದೇವ ಮಾನೆ ಮಾಹಿತಿ ನೀಡಿದರು.
ಕೊಲ್ಲೂರು ದೇವಾಲಯದಲ್ಲಿ 29 ಖಾಸಗಿ ಭದ್ರತಾ ಸಿಬ್ಬಂದಿ ಇದ್ದು, ಸ್ಥಳೀಯ ಪೊಲೀಸರ ಸಹಕಾರ ಪಡೆದು ದೇವಾಲಯದ ಭದ್ರತೆ ವ್ಯವಸ್ಥೆ ಮಾಡಲಾಗುವುದು ಎಂದು ಧಾರ್ಮಿಕ ಧತ್ತಿ ಇಲಾಖೆ ಆಯುಕ್ತ ಯೋಗೇಶ್ವರ್ ತಿಳಿಸಿದರು.
ಈ ಅಣಕು ಕಾಯಾಚರಣೆ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ವಾಹನಗಳ ವ್ಯಾಪಕ ತಪಾಸಣೆ ಕಾರ್ಯ ಹಾಗೂ ಭದ್ರತಾ ವ್ಯವಸ್ಥೆ ನಡೆಯಲಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡದೇ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಸಂಶಯಾಸ್ಪದ ವ್ಯಕ್ತಿಗಳು, ವಸ್ತುಗಳು ಕಂಡುಬಂದಲ್ಲಿ ಮೇಲೆ ತಿಳಿಸಿದ ಸಂಖ್ಯೆಗಳಿಗೆ ಮಾಹಿತಿ ನೀಡುವಂತೆ ಹಾಗೂ ಜಿಲ್ಲೆಯಲ್ಲಿ ಈ ಹಿಂದೆಯೂ ಸಹ ಈ ಅಣಕು ಕಾರ್ಯಚರಣೆ ನಡೆದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿ, ವಂದಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.