ಡಿ. 1ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ – ಹೆಜಮಾಡಿಯಲ್ಲಿ ಟೋಲ್ ಪ್ರತಿಭಟನೆ ಮುಕ್ತಾಯ
ಉಡುಪಿ: ಸಾರ್ವಜನಿಕ ಬೇಡಿಕೆಗಳನ್ನು ಕಡೆಗಣಿಸಿ ಸೋಮವಾರದಿಂದ ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಸ್ಥಳೀಯ(ಕೆಎ-20) ವಾಹನಗಳಿಂದ ಟೋಲ್ ಸಂಗ್ರಹ ಆರಂಭಿಸಿದ್ದನ್ನು ವಿರೋಧಿಸಿ ಮಂಗಳವಾರ ಬೆಳಿಗ್ಗೆ ಟೋಲ್ ಪ್ಲಾಝಾ ಬಳಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ನೇತೃತ್ವದಲ್ಲಿ ಉಭಯ ಜಿಲ್ಲಾ ರಾಹೆ ಹೋರಾಟ ಸಮಿತಿ ವತಿಯಿಂದ 500ಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸಿದ್ದು, ಡಿಸೆಂಬರ್ ಒಂದರವರೆಗೆ ಕಾದು ನೋಡಲು ನಿರ್ಧರಿಸಿ, ಪ್ರತಿಭಟನೆ ಮುಕ್ತಾಯ ಗೊಳಿಸಲಾಯಿತು.
ಡಿ.ಒಂದರಂದು ಜಲ್ಲಾಧಿಕಾರಿ ಕಛೇರಿಯಲ್ಲಿ ಉಸ್ತುವಾರಿ ಸಚಿವೆ ಡಾ. ಜಯಮಾಲಾರವರು ರಾಹೆ ಮತ್ತು ಟೋಲ್ ಸಂಬಂಧ ಕರೆದಿರುವ ಸಭೆಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಡಿ.3ರಂದು ಉಭಯ ಜಲ್ಲಾ ಬಂದ್ ಆಚರಿಸಲಾಗುವುದು ಮತ್ತು ಅದೇ ದಿನ ಹೆಜಮಾಡಿ ಟೋಲ್ ಪ್ಲಾಝಾ ಬಳಿ ಹತ್ತು ಸಾವಿರ ಜನರನ್ನು ಸೇರಿಕೊಂಡು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ನಿರ್ಧರಿಸಲಾಗಿದೆ.
ಇದೇ ಸಂದರ್ಭ ಪ್ರತಿಭಟನಾ ನಿರತರಲ್ಲಿಗೆ ಆಗಮಿಸಿದ ಉಡುಪಿ ಅಪರ ಜಿಲ್ಲಾಧಿಕಾರಿ ಕೆ. ವಿದ್ಯಾ ಕುಮಾರಿಯವರು ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು. ಮನವಿಯನ್ನು ಜಿಲ್ಲಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖಾ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರುವುದಾಗಿ ಹೇಳಿದರು. ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು. ಡಿ.1ರಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾ.ಹೆ ಕುರಿತು ಕರೆದ ಸಭೆಯಲ್ಲಿಯೂ ಈ ವಿಷಯವನ್ನು ಮಂಡಿಸಲಾಗುವುದು ಎಂದರು.
ಪ್ರತಿಭಟನೆಯ ಒಂದು ಹಂತದಲ್ಲಿ ಯುವ ಪಡೆ ಟೋಲ್ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಒತ್ತಾಯಿಸಿದರೂ, ಹಿರಿಯರ ಸಂಯಮದಿಂದ ಮುತ್ತಿಗೆ ನಡೆಯಲಿಲ್ಲ. ಈ ಹಂತದಲ್ಲಿ ಸಮಗ್ರ ಪೋಲೀಸ್ ಪಡೆ ತಕ್ಷಣ ಕಾರ್ಯಾಚರಣೆ ನಡೆಸಿ ಪ್ರತಿಭಟನಾಕಾರರನ್ನು ಬಂಧಿಸಲು ತಯಾರಿ ನಡೆಸಿತ್ತು.
ಪ್ರತಿಭಟನೆಗೆ ಸಾಥ್ ನೀಡಿದ ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಟೋಲ್ ಸಂಗ್ರಹ ಕಾನೂನು ಬಾಹಿರ. ನಮ್ಮ ಹಕ್ಕನ್ನು ಕಸಿಯಲಾಗುತ್ತಿದೆ. ಖಂಡಿತವಾಗಿಯೂ ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಂಡಿಸುತ್ತೇನೆ. ಹೆಜಮಾಡಿ ಟೋಲ್ನಲ್ಲಿ ಸ್ಥಳೀಯ ಎಲ್ಲರಿಗೂ ಟೋಲ್ ವಿನಾಯತಿ ನೀಡಬೇಕು. ನಮ್ಮ ಹೋರಾಟ ಜಯ ಗಳಿಸುವ ವರೆಗೆ ನಡೆಯಲಿದೆ. ಕೆಎ-19 ಮತ್ತು 20 ವಾಹನಗಳಿಗೆ ಹೆಜಮಾಡಿ ಟೋಲ್ನಲ್ಲಿ ವಿನಾಯಿತಿ ನೀಡಲೇಬೇಕು. ಬೇಡಿಕೆ ಈಡೇರದಿದ್ದಲ್ಲಿ ಮುಂದೆ ನಡೆಯುವ ಎಲ್ಲಾ ಪ್ರತಿಭಟನೆಯಲ್ಲಿ ಸಕ್ರಿಯ ಭಾಗವಹಿಸುತ್ತೇನೆ ಎಂದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ನಮ್ಮ ಬೇಡಿಕೆಗೆ ಜಿಲ್ಲಾಧಿಕಾರಿ ಸ್ಪಂದಿಸಿಲ್ಲ. ಈ ಹಿಂದೆ ಹಲವು ಬಾರಿ ಈ ಬಗ್ಗೆ ಸಭೆ ನಡೆದರೂ ನಮ್ಮ ಬೇಡಿಕೆಯನ್ನು ಮನ್ನಿಸಲಿಲ್ಲ. ಡಿ.1ರಂದು ಉಸ್ತುವಾರಿ ಸಚಿವರು ಕರೆದಿರುವ ಸಭೆಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಲೇಬೇಕು. ತಪ್ಪಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಹೋರಾಟ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ನಮ್ಮ ಹಕ್ಕನ್ನು ಕಸಿಯುವ ಪ್ರಯತ್ನ ಜಿಲ್ಲಾಡಳಿತದಿಂದ ನಡೆಯುತ್ತಿದೆ. ಹತ್ತಾರು ವರ್ಷದಿಂದ ರಾ.ಹೆ ಬಗ್ಗೆ ಹೋರಾಟಗಳು ನಡೆಯುತ್ತಿದೆ. ನಮ್ಮ ಹೋರಾಟ ಇನ್ನೂ ಜೀವಂತವಿದೆ. ಇಂದು ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದ್ದು, ಡಿ.1 ರಂದು ನಡೆಯುವ ಸಭೆಯಲ್ಲಿ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ನಮ್ಮ ಪರವಾಗಿ ಧ್ವನಿ ಎತ್ತಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನಿರ್ಣಾಯಕ ಹೋರಾಟ ನಡೆಸಲಾಗುವುದು. ಮುಂದೆ ನಡೆಯುವ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ಪೊಲೀಸ್ ಸರ್ಪಗಾವಲು: ಸೋಮವಾರದಂತೆ ಮಂಗಳವಾರವೂ ಪೊಲೀಸ್ ಸರ್ಪಗಾವಲಿನಲ್ಲಿ ಟೋಲ್ ಸಂಗ್ರಹ ಮುಂದುವರೆದಿತ್ತು. ಕಾರ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ಕೆಯು, ಸಿಪಿಐ ಮಹೇಶ್ ಪ್ರಸಾದ್, ಪಡುಬಿದ್ರಿ ಠಾಣಾಧಿಕಾರಿ ಸತೀಶ್.ಪಿ, ಕಾರ್ಕಳ ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಆರ್ಟಿಒ ಸಂತೋಷ್ ಶೆಟ್ಟಿ ಉಸ್ತುವಾರಿಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಠಾಣೆಗಳಿಂದ ನೂರಾರು ಪೊಲೀಸರು, ಮಹಿಳಾ ಪೋಲೀಸರು, ಕೆಎಸ್ಆರ್ಪಿ ತುಕಡಿ, ಡಿ.ಆರ್ ತುಕಡಿ, ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ನಿಯೋಜಿಸಲಾಗಿತ್ತು. ಬಂಧನ ನಡೆದಲ್ಲಿ ಬಂಧಿತರನ್ನು ಸಾಗಿಸಲು ಹಲವಾರು ಕೆಎಸ್ಆರ್ಟಿಸಿ ಬಸ್ಸುಗಳು, ಆ್ಯಂಬುಲೆನ್ಸ್, ಜೆಸಿಬಿ ಕಾದಿರಿಸಲಾಗಿತ್ತು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ದಿವಾಕರ ಶೆಟ್ಟಿ, ರವೀಂದ್ರನಾಥ ಹೆಗ್ಡೆ, ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ.ಅಮೀನ್, ಬಿಜೆಪಿ ಕಾಪು ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಸುವರ್ಣ, ಮಾಜಿ ಅಧ್ಯಕ್ಷ ನವೀನ್ಚಂದ್ರ ಜೆ.ಶೆಟ್ಟಿ, ಬೆಳಣ್ಣು ಟೋಲ್ ಹೋರಾಟ ಸಮಿತಿಯ ಅಧ್ಯಕ್ಷ ಸುಹಾಸ್ ಹೆಗ್ಡೆ, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಮಿಥುನ್ ಆರ್.ಹೆಗ್ಡೆ, ಗುಲಾಂ ಮೊಹಮ್ಮದ್, ಶೇಖರ್ ಹೆಜ್ಮಾಡಿ, ಉದಯ ಶೆಟ್ಟಿ ಇನ್ನ, ಜಿಪಂ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ರೇಷ್ಮಾ ಶೆಟ್ಟಿ ಮತ್ತು ಗಣೇಶ್ ಕೋಟ್ಯಾನ್ ಕಾರ್ಕಳ, ತಾಪಂ ಸದಸ್ಯರಾದ ರೇಣುಕಾ ಪುತ್ರನ್, ನೀತಾ ಗುರುರಾಜ್, ಯುಸಿ ಶೇಖಬ್ಬ, ಶರತ್ ಕುಬೆವೂರು ಮತ್ತು ದಿನೇಶ್ ಕೋಟ್ಯಾನ್, ಮೂಲ್ಕಿ ನಪಂ ಅಧ್ಯಕ್ಷ ಸುನಿಲ್ ಆಳ್ವ, ಮಧು ಆಚಾರ್ಯ, ದೇವಣ್ಣ ನಾಯಕ್, ಗ್ರಾಪಂ ಅಧ್ಯಕ್ಷರುಗಳಾದ ವಿಶಾಲಾಕ್ಷಿ ಪುತ್ರನ್, ದಮಯಂತಿ ಅಮೀನ್, ಡೇವಿಡ್ ಡಿಸೋಜಾ ಮತ್ತು ಜಿತೇಂದ್ರ ಫುರ್ಟಾಡೋ, ರಾಜೇಶ್ ಕೋಟ್ಯಾನ್, ಜಿಲ್ಲಾ ಕಾರು ಚಾಲಕ ಸಂಘದ ರಮೇಶ್ ಕೋಟ್ಯಾನ್, ಲೋಕೇಶ್ ಕಂಚಿನಡ್ಕ,ಶರಣ್ ಮಟ್ಟು,ಹರೀಶ್ ಶೆಟ್ಟಿ, ರವಿ ಶೆಟ್ಟಿ, ಸಂತೋಷ್ ಶೆಟ್ಟಿ, ಶಶಿಕಾಂತ್ ಶೆಟ್ಟಿ, ಧನಂಜಯ ಮಟ್ಟು, ದೀಪಕ್ ಎರ್ಮಾಳು, ಸುಧೀರ್ ಕರ್ಕೇರ, ವಿನೋದ್ ಸಾಲ್ಯಾನ್, ಸತೀಶ್ ಅಂಚನ್, ಹರಿದಾಸ್ ಭಟ್ ಪಾಂಗಾಳ, ಸಂದೇಶ್ ಶೆಟ್ಟಿ, ಪಾಂಡುರಂಗ ಕರ್ಕೇರ, ರಮಾಕಾಂತ ದೇವಾಡಿಗ, ಅನ್ಸಾರ್, ರಮೀಝ್ ಹುಸೈನ್, ಬುಡಾನ್ ಸಾಹೇಬ್, ಹನೀಫ್ ಮೂಳೂರು, ಮಜೀದ್ ಪೊಲ್ಯ, ಶರೀಫ್ ಕರೀಂ, ಕಿಶೋರ್ ಎರ್ಮಾಳ್ ಮತ್ತಿತರರು ಭಾಗವಹಿಸಿದ್ದರು.