ಡಿ.1: ‘ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್-2024

Spread the love

ಡಿ.1: ‘ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್-2024

ಉಡುಪಿ: ಉಡುಪಿಯ ಲೊಂಬಾರ್ಡ್ ಆಸ್ಪತ್ರೆ (ಮಿಷನ್ ಆಸ್ಪತ್ರೆ)ಯ 101ನೇ ವಾರ್ಷಿಕೋತ್ಸವ ಹಾಗೂ ಉಡುಪಿ ರನ್ನರ್ ಕ್ಲಬ್ನ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಡಿ.1ರಂದು ‘ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್-2024’ ಅನ್ನು ಮಲ್ಪೆ ಸೀವಾಕ್ ನಲ್ಲಿ ಆಯೋಜಿಸಲಾಗಿದೆ ಎಂದು ಮಿಷನ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಹೇಳಿದ್ದಾರೆ.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮ್ಯಾರಥಾನ್ ಮಲ್ಪೆಯ ಸೀ-ವಾಕ್ನಿಂದ ಬೆಳಿಗ್ಗೆ 5 ಗಂಟೆಗೆ ಆರಂಭಗೊಳ್ಳಲಿದೆ. ಸೀ-ವಾಕ್ನಿಂದ ಪಡುಕೆರೆ ಮಾರ್ಗವಾಗಿ ಉದ್ಯಾವರ-ಮಟ್ಟು ತನಕ ತಲುಪಿ ಬಳಿಕ ಅಲ್ಲಿಂದ ಹಿಂದಿರುಗಿ ಸೀ-ವಾಕ್ ನಲ್ಲೇ ಸಮಾಪನಗೊಳ್ಳಲಿದೆ ಎಂದು ತಿಳಿಸಿದರು.

ಪುರುಷರು ಹಾಗೂ ಮಹಿಳೆಯರಿಗಾಗಿ 21ಕಿ.ಮೀ.ಗಳ ಹಾಫ್ ಮ್ಯಾರಥಾನ್ ನಡೆಯಲಿದೆ. ಅಲ್ಲದೇ 10ಕಿ.ಮೀ., 5ಕಿ.ಮೀ. ಸ್ಪರ್ಧೆಯೂ ಇರಲಿದೆ. ಜಿಲ್ಲೆಯ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ 5ಕಿ.ಮೀ, 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ 3 ಕಿ.ಮೀ. ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ಓಪನ್ ವಿಭಾಗದಲ್ಲಿ 3ಕಿ.ಮೀ.ಗಳ ‘ಫನ್ ರನ್’(ಖುಷಿ ಓಟ) ಕೂಡಾ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಐವರು ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದರು.

ನೊಂದಾಣಿ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದ್ದು, ಈಗಾಗಲೇ 2000 ಓಟಗಾರರು ಮ್ಯಾರಥಾನ್ಗೆ ನೊಂದಾಯಿಸಿಕೊಂಡಿದ್ದಾರೆ. ಜರ್ಮನಿ ಇಥಿಯೋಪಿಯಾ ದೇಶದ ಓಟಗಾರರು ಕೂಡ ಭಾಗವಹಿಸುತ್ತಿದ್ದಾರೆ ಎಂದರು.

ಮ್ಯಾರಥಾನ್ನಲ್ಲಿ ಭಾಗವಹಿಸುವ ಎಲ್ಲಾ ಓಟಗಾರರಿಗೆ ನ. 29 ಮತ್ತು 30ರಂದು ಬೆಳಿಹ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಬಿಬ್ ಹಾಗೂ ರೇಸ್ ಕಿಟ್ನ್ನು ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ ವಿತರಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ರನ್ನರ್ ಕ್ಲಬ್ನ ಅಧ್ಯಕ್ಷ ತಿಲಕ್ ಚಂದ್ರಪಾಲ್, ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ, ಸಹಕಾರ್ಯದರ್ಶಿ ದಿವ್ಯೇಶ್ ಶೆಟ್ಟಿ, ಮಿಷನ್ ಆಸ್ಪತ್ರೆಯ ಪಿಆರ್ ಒ ರೋಹಿ ರತ್ನಾಕರ್ ಉಪಸ್ಥಿತರಿದ್ದರು.


Spread the love