Home Mangalorean News Kannada News ಡೆಂಗ್ಯು ಲಾರ್ವಾ ನಿಯಂತ್ರಣ: ವಾರ್ಡ್ ಮಟ್ಟದಲ್ಲಿ ತಂಡಗಳ ರಚನೆಯಾಗಲಿ – ವೇದವ್ಯಾಸ್ ಕಾಮತ್

ಡೆಂಗ್ಯು ಲಾರ್ವಾ ನಿಯಂತ್ರಣ: ವಾರ್ಡ್ ಮಟ್ಟದಲ್ಲಿ ತಂಡಗಳ ರಚನೆಯಾಗಲಿ – ವೇದವ್ಯಾಸ್ ಕಾಮತ್

Spread the love

ಡೆಂಗ್ಯು ಲಾರ್ವಾ ನಿಯಂತ್ರಣ: ವಾರ್ಡ್ ಮಟ್ಟದಲ್ಲಿ ತಂಡಗಳ ರಚನೆಯಾಗಲಿ – ವೇದವ್ಯಾಸ್ ಕಾಮತ್

ಮಂಗಳೂರು : ನಗರದ ವಾರ್ಡ್‍ಗಳಲ್ಲಿ ವಿಶೇಷ ಗುಂಪುಗಳನ್ನು ರಚಿಸಿ, ಅವರಿಗೆ ಡೆಂಗೆ ಕುರಿತು ಸೂಕ್ತ ಮಾಹಿತಿಗಳನ್ನು ನೀಡಿ ನಂತರ ಆ ಗುಂಪಿನ ಸದಸ್ಯರು ಮನೆ ಮನೆಗಳಿಗೆ ತೆರಳಿ ಡೆಂಗೆ ಕುರಿತು ಜಾಗೃತಿಯನ್ನು ಮೂಡಿಸುವ ಕಾರ್ಯ ಆರಂಭವಾಗಬೇಕು ಎಂದು ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಹೇಳಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ, ಕೋರ್ಟ್ ಹಾಲ್‍ನಲ್ಲಿ ನಡೆದ ಡೆಂಗ್ಯೂ ಪ್ರಕರಣಗಳ ವಿಚಾರದ ಕುರಿತ ಸಭೆಯಲ್ಲಿ ಮಾತಾನಾಡಿದ ಅವರು ಮಂಗಳೂರು ನಗರದಲ್ಲಿ ಹಲವಾರು ರೋಗಗಳು ಬಂದು ಹೋಗಿವೆ, ಇವೆಲ್ಲವನ್ನೂ ಗಮನಿಸಿದರೆ ಸಾರ್ವಜನಿಕರಿಗೆ ರೋಗಗಳು ತಗುಲಿದ ಮೇಲೆ ಎಚ್ಚೆತ್ತುಕೊಳ್ಳುವ ಬದಲು ಆ ರೋಗ ಲಕ್ಷಣಗಳು ತಿಳಿಯುತ್ತಿದ್ದಂತೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಪ್ರಕರಣಗಳ ಕಾರ್ಯ ಸೂಚಿಗಳು ಕ್ರಮವನ್ನು ಸಂಬಂಧ ಪಟ್ಟ ಅಧಿಕಾರಿಗಳಿಂದ ವಿವರಣೆಯನ್ನು ಪಡೆದುಕೊಂಡರು.

ಡೆಂಗ್ಯೂ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಬೇಕಾದರೆ, ಸಾರ್ವಜನಿಕರ ಬೆಂಬಲ ಅತೀ ಮುಖ್ಯವಾಗಿರಬೇಕು. ಜನರ ಸಹಕಾರ ದೊರೆತರೆ, ಜನರಿಂದಲೇ ಲಾರ್ವ ನಾಶ ಪಡಿಸಬಹುದು, ಈ ತಿಳುವಳಿಕೆಯ ಬಗ್ಗೆ ನಗರದ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ಹೇಳಿದರು.

ಡೆಂಗ್ಯೂ ನಿಯಂತ್ರಣೆಗೆ ಜಿಲ್ಲಾಡಳಿತ 4 ವಿಭಾಗಗಳನ್ನು ರಚಿಸಿ ಕಾರ್ಯ ನಿರ್ವಹಿಸುತ್ತಿದೆ. ಮೊದಲನೇ ವಿಭಾಗ ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್‍ಗಳಿಂದ ದಾಖಲಾದ ಡೆಂಗ್ಯೂ ಪ್ರಕರಣಗಳ ಕುರಿತ ಮಾಹಿತಿ ಕಲೆ ಹಾಕುವುದು, ಎರಡನೇ ವಿಭಾಗ ಗ್ರಿಡ್‍ಗಳಿಗೆ ಹೋಗಿ ಮನೆ ಮನೆ ಭೇಟಿ ನೀಡಿ ಲಾರ್ವ ಪತ್ತೆ ಹಚ್ಚಿ ಅದನ್ನು ನಾಶ ಪಡಿಸುವುದು, ಮೂರನೇ ವಿಭಾಗ ಜನತೆಗೆ ಲಾರ್ವದ ಕುರಿತು ಮಾಹಿತಿ ನೀಡುವುದು, ಮತ್ತು ನಾಲ್ಕನೇ ವಿಭಾಗವೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ವಿವರಣೆ ನೀಡಿದರು.

ಡೆಂಗ್ಯೂ ಪ್ರಕರಣಕ್ಕೆ ಒಳಗಾದ ವ್ಯಕ್ತಿಯ ಮನೆಗಳಿಗೆ ಭೇಟಿ ನೀಡಿ ಅವರಿಗೆ ಲಾರ್ವ ಉತ್ಪತ್ತಿಯ ಮಾಹಿತಿ ನೀಡುವುದರ ಮೂಲಕ ಕಡ್ಡಾಯವಾಗಿ ಫಾಗಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಲಾರ್ವ ನಾಶದ ಮಾಹಿತಿ ನೀಡಿದ ನಂತರ, ಆ ಸ್ಥಳಗಳಲ್ಲಿ ಲಾರ್ವಗಳು ಕಂಡು ಬಂದರೆ ದಂಡ ವಿಧಿಸಲಾಗುವುದು. ಡೆಂಗ್ಯೂ ಮಾಹಿತಿ ಇಲ್ಲಿಗೆ ಕೊನೆಯಾಗದೇ ದೀರ್ಘಾವಧಿಯವರೆಗೂ ಇದು ಮುಂದುವರಿಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಮಹಾನಗರಪಾಲಿಕೆ ಆಯುಕ್ತರಾದ ಮಹಮ್ಮದ್ ನಝೀರ್, ಜಂಟಿ ಆಯುಕ್ತರಾದ ಗಾಯತ್ರಿ ನಾಯಕ್, ಜಿಲ್ಲಾ ಆರೋಗ್ಯಧಿಕಾರಿ ಡಾ| ರಾಮಕೃಷ್ಣ ರಾವ್, ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಸಿಖಂದರ್ ಪಾಷಾ, ಸಹಾಯಕ ಆಯುಕ್ತರಾದ ರವಿಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version