ಡೆಡ್ ಲೈನ್ ಬೆದರಿಕೆಗೆ ಬಗ್ಗೊಲ್ಲ, ಕೆಲಸ ಮಾಡಲು ಬಿಡಿ – ಎಬಿವಿಪಿ ಕಾರ್ಯಕರ್ತರಿಗೆ ಅಣ್ಣಾಮಲೈ ಸ್ಪಷ್ಟ ಎಚ್ಚರಿಕೆ
ಚಿಕ್ಕಮಗಳೂರು: ಎಬಿವಿಪಿ ವಿದ್ಯಾರ್ಥಿ ಅಭಿಷೇಕ್ ಪ್ರಕರಣದ ಆರೋಪಿಗಳ ಬಂಧನಕ್ಕೆ ಸಂಬಂಧಿಸಿ ಯಾವುದೇ ರೀತಿಯ ಡೆಡ್ ಲೈನ್, ಚಿಕ್ಕಮಗಳೂರು ಚಲೋ ಬೆದರಿಕೆಯನ್ನು ಪೋಲಿಸ್ ಇಲಾಖೆಗೆ ನೀಡಬೇಡಿ ಇಂತಹ ಗಡವು ಬೆದರಿಕೆಗೆ ನಾವು ಸೊಪ್ಪು ಹಾಕುವುದಿಲ್ಲ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಎಬಿವಿಪಿ ಸಂಘಟನೆಯ ಮುಖಂಡರಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಶ್ರಂಗೇರಿಯ ಜೆಸಿಬಿಎಂ ಕಾಲೇಜು ವಿದ್ಯಾರ್ಥಿ ಹಾಗೂ ಎಬಿವಿಪಿ ಕಾರ್ಯಕರ್ತ ಅಭಿಷೇಕ್ ಆತ್ಮಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಎಬಿವಿಪಿ ಸಂಘಟನೆ 48 ಗಂಟೆಗಳ ಗಡುವು ನೀಡಿರುವುದನ್ನು ಆಕ್ಷೇಪಿಸಿದ ಅವರು ಪೋಲಿಸ್ ಇಲಾಖೆ ಇಂತಹ ಬ್ಲ್ಯಾಕ್ ಮೇಲ್ ತಂತ್ರಗಳಿಗೆ ಸೊಪ್ಪು ಹಾಕುವುದಿಲ್ಲ.
ಪ್ರತಿಭಟನೆ ಮಾಡಲು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ ಆದರೆ ಪ್ರತಿಭಟನೆಯ ಹೆಸರಿನಲ್ಲಿ ಕಾನೂನು ಉಲ್ಲಂಘಿಸಲು, ಶಾಲಾ, ಕಾಲೇಜು ಆಸ್ತಿಪಾಸ್ತಿಗೆ ಹಾನಿ ಮಾಡಲು ಅವಕಾಶ ನೀಡುವುದಿಲ್ಲ. ಶಾಂತಿಯುತ ಪ್ರತಿಭಟನೆಗೆ ಪೋಲಿಸ್ ಇಲಾಖೆಯೇ ಸ್ವತಃ ರಕ್ಷಣೆ ನೀಡುತ್ತದೆ. ಅದೇ ಕಾನೂನು ಉಲ್ಲಂಘಿಸಿದರೆ ಪೋಲಿಸ್ ಇಲಾಖೆ ಮಾದರಿಯಾದ ಕ್ರಮ ಕೈಗೊಳ್ಳುತ್ತದೆ. ಒಂದು ಸಾವಿರ ವಿದ್ಯಾರ್ತಿಗಳ ಮೇಲೆ ಪ್ರಕರಣ ದಾಖಲಿಸಬೇಕಾಗಿ ಬಂದರೂ ಅದಕ್ಕೂ ನಾವು ಸಿದ್ದರಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಪೋಲಿಸರು ಕಾನೂನು ಪಾಲನೆಗೆ ಸದಾ ಸಿದ್ದರಿದ್ದೇವೆ ಆದ್ದರಿಂದ ಹೊರಗಿನಿಂದ ಬಂದು ಬೆದರಿಕೆ ಹಾಕಿ ಹೋಗಲು ಬಿಡುವುದಿಲ್ಲ ನಾವು ಈಗಾಗಲೇ ಬಂಧಿಸಿರುವ 19 ಮಂದಿ ಪದೇ ಪದೇ ಅಪರಾಧ ಎಸಗಿವದವರಾಗಿದ್ದು ನಾಲ್ಕು ಮಂದಿ ಆಲ್ದೂರಿನವರಿದ್ದು ಕೋಮು ಭಾವನೆ ಕೆರಳಿಸಿದ ಆರೋಪದಲ್ಲಿ ಅವರು ಭಾಗಿಯಾಗಿದ್ದಾರೆ ಎಂದರು.
ಕಾಲೇಜುಗಳಿಗೆ ತೆರಳಿ ಬಲವಂತದಿಂದ ತರಗತಿ ಬಂದ್ ಮಾಡಿಸಿ, ಕಲ್ಲು ತೂರಿದರೆ, ಪ್ರಾಂಶುಪಾಲರ ಜೊತೆ ಜಗಳ ಮಾಡಿ ಕೆಲವೇ ಕಾಲೇಜುಗಳನ್ನು ಗುರಿಯಾಗಿಸಿ ಪ್ರತಿಭಟನೆ ಮಾಡಿದರೆ ಒಬ್ಬರನ್ನೂ ನಾವು ಬಿಡುವುದಿಲ್ಲ. ಈಗಾಗಲೇ 19 ವಿದ್ಯಾರ್ಥಿಗಳ ವಿರುದ್ದ ಎಫ್ ಐ ಆರ್ ಹಾಕಿದ್ದೇವೆ ಅವರಲ್ಲಿ ಕೆಲವರು ಕಲ್ಲು ಹೊಡೆದು ಎಂಇಎಸ್ ಕಾಲೇಜಿನ ಕಿಟಕಿ ಗಾಜು ಒಡೆದಿರುವ ಸಿಸಿ ಟಿವಿ ಕ್ಯಾಮಾರ ಫೂಟೆಜ್ ನಮ್ಮ ಬಳಿ ಇದ್ದು ಅವರನ್ನೂ ಕೂಡ ಬಂಧಿಸುತ್ತೇವೆ ಎಂದರು.
ಮೃತ ಅಭಿಷೇಕ್ ಪ್ರಕರಣ ತನಿಖೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದ್ದು, ತನಿಖಾ ವಿವರ ದೂರುದಾರರಿಗೆ ತೋರಿಸಲು ಯಾವಾಗಲೂ ನಾವು ಸಿದ್ದರಿದ್ದೇವೆ. ತನಿಖೆಯಲ್ಲಿ ಯಾವುದೇ ಮುಚ್ಚಿಡುವ ಅಗತ್ಯ ಇಲ್ಲ. ಪ್ರಕರಣದಲ್ಲಿ ಒಟ್ಟು 22 ಆರೋಪಿಗಳ ಹೆಸರಿಸಲಾಗಿದೆ. ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿಲಾಗಿದೆ. ವಿದ್ಯಾರ್ಥಿ ಮರಣಪೂರ್ವ ಪತ್ರದಲ್ಲಿ ಯಾರ ಹೆಸರನ್ನು ಕೂಡ ಉಲ್ಲೇಖಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್ ತಂದೆ ಕಾಲೇಜು ಪ್ರಾಂಶುಪಾಲರು, ಕಾಲೇಜು ಆಡಳಿತ ಮಂಡಳಿ ಹಾಗೂ ಇಬ್ಬರು ಎನ್ ಎಸ್ ಯು ಐ ಕಾರ್ಯಕರ್ತರು ಸೇರಿ ನಾಲ್ವರ ವಿರುದ್ದ ದೂರು ನೀಡಿದ್ದಾರೆ. ಎಬಿವಿಪಿ ವಿದ್ಯಾರ್ಥಿಗಳು 11 ಮಂದಿ ವಿರುದ್ದ ದೂರು ನೀಡಿದ್ದು ಇದರಲ್ಲಿ ಕೆಲವು ಕಾಂಗ್ರೆಸ್ ಮುಖಂಡರಿದ್ದಾರೆ. ಇದೇ ರೀತಿ ಕಾಂಗ್ರೆಸ್ ಮುಖಂಡರು 8 ಮಂದಿ ವಿರುದ್ದ ದೂರು ನೀಡಿದ್ದು ಎಲ್ಲರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದರು.