ತಲಪಾಡಿ ಕೆ.ಸಿ.ರೋಡ್ ಸಹಕಾರಿ ಸಂಘ ದರೋಡೆ ಪ್ರಕರಣ| ಮೂವರ ಬಂಧನ
ಮಂಗಳೂರು: ಕೋಟೆಕಾರ್ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಗೆ ಕಳೆದ ಶುಕ್ರವಾರ ನುಗ್ಗಿದ ದರೋಡೆಕೋರರು ಸಿಬ್ಬಂದಿಯನ್ನು ಬೆದರಿಸಿ ದರೋಡೆಗೈದು ಪರಾರಿಯಾದವರ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.
ಬಂಧಿತರು ಮುರುಗನ್, ಪ್ರಕಾಶ್ ಅಲಿಯಾಸ್ ಜೈಸ್ವಾ, ಮಣಿವಣ್ಣನ್ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳು ತಮಿಳುನಾಡಿನ ತಿರುನೆಲ್ವೇಲಿ ಮೂಲದವರು ಎನ್ನಲಾಗಿದೆ.
ಕಾರೊಂದರಲ್ಲಿ ಬಂದ ಐವರು ಮುಸುಕುಧಾರಿಗಳ ತಂಡ ಬ್ಯಾಂಕ್ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ಈ ದರೋಡೆ ನಡೆಸಿದ್ದರು.
ದರೋಡೆ ಮಾಡಿದ ನಂತರ ಆರೋಪಿಗಳು ತಮಿಳುನಾಡಿನ ತಿರುವನ್ವೇಲಿಗೆ ತೆರಳಿದ್ದರು. ಬಂಧಿತರಿಂದ ತಲ್ವಾರ್, 2 ಪಿಸ್ತೂಲ್ ಹಾಗು ಇತರ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕು ಕೆ.ಸಿ.ರೋಡ್‌ನ ಶಾಖೆಯಲ್ಲಿ ಜನವರಿ 17ರಂದು ಕೋಟೆಕಾರು ಬ್ಯಾಂಕ್ನಲ್ಲಿ ದರೋಡೆ ಮಾಡಿದ್ದರು. ಮಹಾರಾಷ್ಟ್ರದ ಕಾರು ಬಳಸಿ ಕೋಟೆಕಾರು ಬ್ಯಾಂಕ್ನಲ್ಲಿ ಕೃತ್ಯವೆಸಗಿದ್ದರು. ಬ್ಯಾಂಕ್ ದರೋಡೆ ಬಳಿಕ ತಮಿಳುನಾಡಿನ ತಿರುನೆಲ್ವೇಲಿಗೆ ಪರಾರಿ ಆಗಿದ್ದರು.