ತಲಪಾಡಿ ಬಳಿ ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆ; ಸಂಚಾರ ಅಸ್ತವ್ಯಸ್ತ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿ ಹಳೆ ಆರ್ ಟಿ ಒ ಬಳಿ ಗ್ಯಾಸ್ ಟ್ಯಾಂಕರ್ ಒಂದರಿಂದ ಗ್ಯಾಸ್ ಸೋರಿಕೆ ಉಂಟಾದ ಘಟನೆ ಮಂಗಳವಾರ ಸಂಜೆ 6 ಗಂಟೆಯ ಸುಮಾರಿಗೆ ನಡೆದಿದೆ.
ತಲಪಾಡಿ ಆರ್ಟಿಒ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದ ಟ್ಯಾಂಕರ್ನಲ್ಲಿದ್ದ ಗ್ಯಾಸ್ ಸೋರಿಕೆ ಉಂಟಾಗಿತ್ತು. ಸಂಜೆ 6 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಟ್ಯಾಂಕರಿನ ಮೇಲ್ಭಾಗದಿಂದ ಗ್ಯಾಸ್ ಮೇಲಕ್ಕೆ ಸ್ಪ್ರೇ ಆಗುತ್ತಿತ್ತು.
ಕೂಡಲೇ ಕೇರಳ ರಾಜ್ಯದ ಮಂಜೇಶ್ವರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಆಗಮಿಸಿ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ.
ಕಾಸರಗೋಡು ಭಾಗದಿಂದ ಆಗಮಿಸುತ್ತಿರುವ ವಾಹನಗಳನ್ನು ತೂಮಿನಾಡಿನಲ್ಲಿ ತಡೆದು ಒಳ ರಸ್ತೆಯಿಂದಾಗಿ ತಲಪಾಡಿ ಭಾಗಕ್ಕೆ ಕಳುಹಿಸಲಾಗಿತ್ತು. ಕೇರಳ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆಯಿಂದ ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ಘಟನಾ ಸ್ಥಳದಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಗಿಸಲಾಗಿದೆ.