ತುಂಬೆಯಲ್ಲಿ 5 ಮೀಟರ್ ನೀರು ಸಂಗ್ರಹ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ನೇತ್ರಾವತಿ ನದಿ ಮೈದುಂಬಿ ಹರಿಯುತ್ತಿದೆ. ನೇತ್ರಾವತಿ ನದಿಯುದ್ದಕ್ಕೂ ನಿರ್ಮಿಸಲಾಗಿರುವ ಜಲ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿದೆ.
ಏಪ್ರಿಲ್ ಕೊನೆಯ ವಾರದಿಂದಲೇ ನೇತ್ರಾವತಿ ಸಂಪೂರ್ಣ ಬರಿದಾಗಿದ್ದು, ತುಂಬೆ ಅಣೆಕಟ್ಟೆಯಲ್ಲಿ ಸಂಗ್ರಹವಾಗಿದ್ದ ನೀರನ್ನೇ ರೇಷನಿಂಗ್ ಮೂಲಕ ನಗರದ ಜನರಿಗೆ ಪೂರೈಕೆ ಮಾಡಲಾಗಿತ್ತು. ಜೂನ್ ಮೊದಲ ವಾರದವರೆಗೆ ಮಳೆಯ ಲಕ್ಷಣಗಳು ಗೋಚರಿಸದೇ ಇದ್ದುದರಿಂದ ನೀರಿನ ಬವಣೆ ಮತ್ತಷ್ಟು ಹೆಚ್ಚಾಗುವ ಆತಂಕ ಉಂಟಾಗಿತ್ತು. ಆದರೆ ವಾಯು ಚಂಡಮಾರುತದಿಂದ ಮಳೆ ಸುರಿದು, ನೀರಿನ ಆತಂಕ ವನ್ನು ಸ್ವಲ್ಪ ಕಡಿಮೆ ಮಾಡಿತ್ತು.
ಜೂನ್ ಎರಡನೇ ವಾರದಿಂದ ಮುಂಗಾರು ಮಳೆ ಆರಂಭವಾಗಿದ್ದು, ನೇತ್ರಾವತಿ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಇದರಿಂದಾಗಿ ನೇತ್ರಾವತಿ ನದಿಯಲ್ಲಿ ಒಳಹರಿವು ಆರಂಭವಾಗಿದೆ. ನದಿಯುದ್ದಕ್ಕೂ ನಿರ್ಮಿಸಿರುವ ಜಲ ವಿದ್ಯುತ್ ಸ್ಥಾವರಗಳಲ್ಲಿ ನೀರಿನ ಸಂಗ್ರಹ ಆಗುತ್ತಿದ್ದು, ವಿದ್ಯುತ್ ಉತ್ಪಾದನೆ ಆರಂಭವಾಗಿದೆ.
ಗೇಟ್ ಮೂಲಕ ನೀರು ಹೊರಕ್ಕೆ: ಇದೇ ಮೊದಲ ಬಾರಿಗೆ ತುಂಬೆ ಕಿಂಡಿ ಅಣೆಕಟ್ಟೆಯ ಗೇಟ್‌ಗಳನ್ನು ತೆರೆದಿದ್ದು, ನೀರನ್ನು ನದಿಗೆ ಬಿಡಲಾಗುತ್ತಿದೆ. ಇದುವರೆಗೆ ನೀರಿನ ಸಂಗ್ರಹ ಮಾಡುವುದರಲ್ಲಿಯೇ ನಿರತರಾಗಿದ್ದ ಅಧಿಕಾರಿಗಳು, ಇದೀಗ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿದ್ದಾರೆ.
ತುಂಬೆ ಅಣೆಕಟ್ಟೆಯಲ್ಲಿ ಸದ್ಯಕ್ಕೆ 5 ಮೀಟರ್ ನೀರು ಸಂಗ್ರಹ ಮಾಡಲಾಗಿದ್ದು, 5 ನೇ ಗೇಟ್ ಅನ್ನು ಒಂದು ಮೀಟರ್ ಎತ್ತರಕ್ಕೆ ತೆರೆಯುವ ಮೂಲಕ ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿದೆ.