ತುಂಬೆ ನೂತನ ಅಣೆಕಟ್ಟು ಸದ್ಯ 5 ಮೀಟರ್ ಎತ್ತರಕ್ಕೆ: ಮುಖ್ಯ ಕಾರ್ಯದರ್ಶಿಗಳ ಸೂಚನೆ
ಮ0ಗಳೂರು : ಮಂಗಳೂರು ಮಹಾನಗರಪಾಲಿಕೆಗೆ ಕುಡಿಯುವ ನೀರು ಸರಬರಾಜು ಮಾಡಲು ತುಂಬೆಯಲ್ಲಿ ನೂತನವಾಗಿ ನಿರ್ಮಿಸಿರುವ ವೆಂಟೆಡ್ ಡ್ಯಾಂನಲ್ಲಿ ನೀರು ನಿಲ್ಲಿಕೆ ಪ್ರಮಾಣವನ್ನು ಸದ್ಯ 5 ಮೀಟರ್ವರೆಗೆ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಸೂಚಿಸಿದ್ದಾರೆ.
ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೂತನ ವೆಂಟೆಡ್ಡ್ಯಾಂನಲ್ಲಿ 5 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸಿದರೆ ಮುಳುಗಡೆಯಗಲಿರುವ ಜಮೀನಿನ ಭೂಸ್ವಾಧೀನಕ್ಕೆ ಅಗತ್ಯವಿರುವ ಜಮೀನಿಗೆ ಪರಿಹಾರಕ್ಕೆ ಕೂಡಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಅವರು ನೂತನ ಅಣೆಕಟ್ಟು 7 ಮೀಟರ್ ಎತ್ತರಕ್ಕೇರಿಸುವ ಬಗ್ಗೆ ಮುಳುಗಡೆ ಪ್ರದೇಶ ಜಮೀನಿಗೆ ಪರಿಹಾರ ಪಾವತಿ ಸಂಬಂಧ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದರು. ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಮಾಹಿತಿ ನೀಡಿ, ಅಣೆಕಟ್ಟಿನಲ್ಲಿ 7 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸಿದರೆ 450 ಎಕರೆ ಜಮೀನು ಮುಳುಗಡೆಯಾಗಲಿದೆ. ಹಾಲಿ ಅಣೆಕಟ್ಟಿನಲ್ಲಿ 4 ಮೀಟರ್ವರೆಗೆ ನೀರು ನಿಲ್ಲುತ್ತಿದೆ. ನೂತನ ಅಣೆಕಟ್ಟಿನಲ್ಲಿ 5 ಮೀಟರ್ ಎತ್ತರದವರೆಗೆ ನೀರು ನಿಲ್ಲಿಸಿದರೆ 56 ಎಕರೆ ಜಮೀನು ಮುಳುಗಡೆಯಾಗಲಿದೆ ಎಂದು ತಿಳಿಸಿದರು.
ಮುಖ್ಯ ಕಾರ್ಯದರ್ಶಿಗಳು ಮಾತನಾಡಿ, ಸದ್ಯ 5 ಮೀಟರ್ವರೆಗೆ ನೀರು ನಿಲ್ಲಿಸಿ, ಮುಂದೆ ಹಂತಹಂತವಾಗಿ ಅಣೆಕಟ್ಟಿನ ಎತ್ತರ ಏರಿಸುವಂತೆ ಸೂಚಿಸಿದರು. ಅಲ್ಲದೇ, 56 ಎಕರೆ ಜಮೀನಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರಕಾರ ಅನುದಾನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಅಪಘಾತ ನಡೆಯುವ ಪ್ರಮುಖ ಸ್ಥಳಗಳನ್ನು ಪೊಲೀಸ್ ಇಲಾಖೆಯೊಂದಿಗೆ ಸಮೀಕ್ಷೆ ನಡೆಸಿ ಗುರುತಿಸಿ, ಅಲ್ಲಿ ಅಪಘಾತ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೂಚಿಸಿದರು.
ರಾಜ್ಯ ಸರಕಾರದ ಎಲ್ಲಾ ಫಲಾನುಭವಿ ಆಧಾರಿತ ಯೋಜನೆಗಳಿಗೆ ಆಧಾರ್ ಲಿಂಕಿಂಗ್ ಮಾಡಿ ಜಾರಿಗೊಳಿಸಬೇಕು. ಆಧಾರ್ ಕಾರ್ಡ್ ನೀಡಿಕೆ ಪ್ರಕ್ರಿಯೆಯನ್ನು ವಿಶೇಷ ಅಭಿಯಾನ ನಡೆಸಿ ತ್ವರಿತಗೊಳಿಸಬೇಕು. ಸರಕಾರದ ವಿವಿಧ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸುವಾಗ ಶೌಚಾಲಯ ನಿರ್ಮಾಣವನ್ನು ಕಡ್ಡಾಯಗೊಳಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಎಲ್ಲಾ ಹೆರಿಗೆಗಳನ್ನು ಆಸ್ಪತ್ರೆಯಲ್ಲಿ ಶೇಕಡಾ 100ರಷ್ಟು ಆಗುವಂತೆ ಗಮನಹರಿಸಬೇಕು. ಲೇಡಿಘೋಷನ್ ಆಸ್ಪತ್ರೆಯಲ್ಲಿ ನೂತನ ಕಟ್ಟಡಕ್ಕೆ ಬಾಕಿ ಉಳಿದಿರುವ ಕಾಮಗಾರಿಗೆ ಅಗತ್ಯವಿರುವ ರೂ. 8 ಕೋಟಿಗಳನ್ನು ಬಿಡುಗಡೆ ಮಾಡಲಾಗುವುದು. ಎಂಡೋಸಲ್ಫಾನ್ ಸಂತ್ರಸ್ತ ಪ್ರದೇಶಗಳಲ್ಲಿ ಹುಟ್ಟುವ ನವಜಾತ ಶಿಶುಗಳಲ್ಲೂ ಕಂಡುಬರುವ ಎಂಡೋಸಲ್ಫಾನ್ ಅಂಶ ನಿಯಂತ್ರಿಸಲು ತಜ್ಞರಿಂದ ಅಧ್ಯಯನ ನಡೆಸುವಂತೆ ಮುಖ್ಯ ಕಾರ್ಯದರ್ಶಿಗಳು ಆರೋಗ್ಯ ಇಲಾಖೆಗೆ ಸೂಚಿಸಿದರು.
ಜಿಲ್ಲೆಯಲ್ಲಿ ಏಕೋಪಾಧ್ಯಾಯ ಶಾಲೆಗಳಲ್ಲಿ ಇನ್ನೊಬ್ಬರು ಶಿಕ್ಷಕರನ್ನು ನೇಮಿಸಬೇಕು ಅಥವಾ ಅಲ್ಲಿನ ವಿದ್ಯಾರ್ಥಿಗಳಿಗೆ ಸಾರಿಗೆ ಭತ್ಯೆ ನೀಡಿ ಸಮೀಪದ ಶಾಲೆಯಲ್ಲಿ ಆ ಶಾಲೆಯನ್ನು ವಿಲೀನಗೊಳಿಸಬೇಕು. ಶಾಲಾ ಮಕ್ಕಳಿಗೆ 2 ಜತೆ ಸಮವಸ್ತ್ರಗಳನ್ನು ಒಟ್ಟಿಗೆ ನೀಡಬೇಕು. ಶಾಲಾ ಶೌಚಾಲಯಗಳನ್ನು ಸ್ವಚ್ಛತೆಯಿಂದ ನಿರ್ವಹಿಸಲು ಗಮನಹರಿಸುವಂತೆ ಸುಭಾಶ್ ಚಂದ್ರ ಖುಂಟಿಆ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಸಮಾಜಕಲ್ಯಾಣ ಇಲಾಕೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಆಗಿಂದಾಗ್ಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಬೇಕು ಎಂದು ಅವರು ಸೂಚಿಸಿದರು.
ಮಂಗಳೂರು ಹಳೇಬಂದರಿನಲ್ಲಿ 3ನೇ ಹಂತದ ಮೀನುಗಾರಿಕಾ ಬಂದರು ನಿರ್ಮಾಣದ ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ಜಿಲ್ಲಾಧಿಕಾರಿಯವರು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದರು. 3ನೇ ಹಂತದಲ್ಲಿ ಆಂತರಿಕ ರಸ್ತೆ, ವಿದ್ಯುದ್ದೀಕರಣ, ನೀರು ಸರಬರಾಜು, 2 ಮತ್ತು 3ನೇ ಹಂತದ ಬಂದರು ನಡುವೆ ಸೇತುವೆ ಸೇರಿದಂತೆ ತುರ್ತು ಕಾಮಗಾರಿ ನಡೆಸಲು 2 ಕೋಟಿ ರೂ. ಅಗತ್ಯವಿದೆ. ಕೇಂದ್ರ ಸರಕಾರದಿಂದ ರೂ. 32 ಕೋಟಿ ರೂ. ಬಿಡುಗಡೆಯಾಗಬೇಕಿದೆ ಎಂದು ಅವರು ತಿಳಿಸಿದರು. ಅಳಿವೆ ಬಾಗಿಲಿನಲ್ಲಿ ಹೂಳೆತ್ತಲು ಡ್ರೆಜ್ಜಿಂಗ್ ಕಾಮಗಾರಿ ನಡೆಸಲು ರಾಜ್ಯ ಸರಕಾರದಿಂದ 1 ಕೋಟಿ ರೂ. ಬಿಡುಗಡೆಯಾಗಿದೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ನವೆಂಬರ್ ಅಂತ್ಯದೊಳಗೆ ಹೂಳೆತ್ತುವ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಂದರು ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್, ಕಮಿಷನರೇಟ್ ವ್ಯಾಪ್ತಿಯಲ್ಲಿ ಅಪರಾಧ ನಿಯಂತ್ರಿಸಲು 13 ಮಂದಿಯನ್ನು ಗೂಂಡಾ ಕಾಯಿದೆಯಡಿ ಸೇರಿಸಲಾಗಿದೆ ಎಂದರು. ರಾಜ್ಯದ ಉಳಿದ ಕಮಿಷನರೇಟ್ ವ್ಯಾಪ್ತಿಗೆ ಹೋಲಿಸಿದರೆ, ಮಂಗಳೂರಿನಲ್ಲಿ ಪೊಲೀಸರ ಸಂಖ್ಯೆ ಕಡಿಮೆ ಇದ್ದು, ಇದನ್ನು ಹೆಚ್ಚಿಸಬೇಕಾಗಿದೆ ಎಂದು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದರು.
ಸಭೆಯಲ್ಲಿ ಪೊಲೀಸ್ ಆಯುಕ್ತ ಚಂದ್ರಶೇಖರ್, ಉಡುಪಿ ಜಿಲ್ಲಾಧಿಕಾರಿ ವೆಂಕಟೇಶ್, ಪೊಲೀಸ್ ಅಧೀಕ್ಷಕ ಭೂಷನ್ ಗುಲಾಭ್ರಾವ್ ಬೊರಸೆ ಇದ್ದರು.