ತುಳುವರ ಮನೆಗಳಲ್ಲಿ ತುಳು ಗ್ರಂಥಗಳ ಸಂಗ್ರಹವಾಗಬೇಕು
ಮಂಗಳೂರು: ತುಳುಭಾಷೆ, ಸಾಹಿತ್ಯ ಕ್ಷೇತ್ರದ ಬೆಳವಣಿಗೆಗಾಗಿ ಗ್ರಂಥಗಳ ಪ್ರಕಟಣೆ ಹಾಗೂ ಮಾರಾಟದ ವ್ಯವಸ್ಥೆಯನ್ನು ಬಲಪಡಿಸಬೇಕು ಹಾಗೂ ತುಳುವರು ತಮ್ಮ ಮನೆಮನೆಗಳಲ್ಲಿ ತುಳು ಗ್ರಂಥಗಳ ಸಂಗ್ರಹದ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯವತಿಯಿಂದ ಹಮ್ಮಿಕೊಂಡ ತುಳುನಾಡಿನ ಪ್ರಮುಖ ದೇವಸ್ಥಾನ, ದೈವಸ್ಥಾನಗಳಲ್ಲಿ ತುಳುಪುಸ್ತಕ ಪ್ರದರ್ಶನ ಮತ್ತು ಮಾರಾಟ ಅಭಿಯಾನಕ್ಕೆ ಮಂಗಳಾದೇವಿ ದೇವಸ್ಥಾನದಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಇತ್ತೀಚೆಗಿನ ವರ್ಷಗಳಲ್ಲಿ ಅಕಾಡೆಮಿವತಿಯಿಂದ ಅನೇಕ ಮೌಲಿಕ ಕಾರ್ಯಕ್ರಮಗಳು ಜರಗುತ್ತಿದ್ದು ತುಳುಭಾಷೆ – ಸಂಸ್ಕೃತಿಯ ಅಭಿವೃದ್ಧಿಗಾಗಿ ವಿಶೇಷ ಪ್ರಯತ್ನಗಳಾಗುತ್ತಿದೆ. ಜಗತ್ತಿನಾದ್ಯಂತ ನೆಲೆಸಿರುವ ತುಳುವರು ತಮ್ಮ ಸಂಸ್ಕೃತಿ ಉಳಿವಿಗಾಗಿ ಕೊಡುಗೆ ನೀಡುತ್ತಿದ್ದಾರೆ. ತುಳು ಜನರು ಎಲ್ಲರೊಂದಿಗೆ ಬೆರೆತು ಎಲ್ಲಾ ಭಾಷೆಗಳನ್ನು ಕಲಿತು ಸರ್ವರನ್ನೂ ಪ್ರೀತಿಸುವ ಗುಣ ಹೊಂದಿದ್ದಾರೆ ಎಂದು ಪಿ. ರಮಾನಾಥ ಹೆಗ್ಡೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಎ. ಸಿ. ಭಂಡಾರಿ ಮಾತನಾಡಿ ಕರ್ನಾಟಕ ಸರಕಾರವು ತುಳುಭಾಷೆಗಾಗಿ ಅಕಾಡೆಮಿ ನೀಡಿ ಮಾನ್ಯತೆ ನೀಡಿದೆ. ಶಾಲೆಗಳಲ್ಲಿ ತುಳು ಕಲಿಕೆಗಾಗಿ ಅವಕಾಶ ಕಲ್ಪಿಸಿದೆ. ಮಂಗಳೂರು ವಿಶ್ವವಿದ್ಯಾಲಯದ ಮೂಲಕ ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ತುಳುವನ್ನು ಅಳವಡಿಸಿ ಪೆÇ್ರೀತ್ಸಾಹ ನೀಡಲಾಗುತ್ತಿದೆ. ತುಳು ಭಾಷೆ – ಸಂಸ್ಕೃತಿಯ ಬಗ್ಗೆ ಅಧ್ಯಯನಕಾರರು ಹಾಗೂ ಸಂಶೊಧಕರು ಹೆಚ್ಚುತ್ತಿದ್ದಾರೆ. ಉದಯೋನ್ಮುಖ ಬರಹಗಾರರು ಹೆಚ್ಚು ಹೆಚ್ಚು ತುಳು ಕೃತಿಗಳನ್ನು ಹೊರತರುತ್ತಿದ್ದಾರೆ. ಅಕಾಡೆಮಿಯು ತುಳು ಗ್ರಂಥಗಳ ಪ್ರಕಟಣೆಗೆ ವಿಶೇಷ ಅನುಕೂಲ ಕಲ್ಪಿಸುತ್ತಿದೆ. ಇದರ ಪ್ರಯೋಜನ ಪ್ರತಿಯೊಬ್ಬ ತುಳುವರಿಗೂ ದೊರಕಬೇಕೆಂಬ ಪ್ರಯತ್ನದ ಭಾಗವಾಗಿ ತುಳು ಪುಸ್ತಕಗಳ ಮಾರಾಟ ಅಭಿಯಾನ ಕೈಗೊಂಡಿದೆ ಎಂದು ಹೇಳಿದರು. 12 ದಿನಗಳ ಕಾಲ ಮಂಗಳಾದೇವಿಯಲ್ಲಿ ಮಾರಾಟ ಮಳಿಗೆ ಇರುವುದು. ತುಳು ಪುಸ್ತಕಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ನುಡಿದರು.
ತುಳು ಅಕಾಡೆಮಿ ಸದಸ್ಯರಾದ ಶಿವಾನಂದ ಕರ್ಕೇರಾ, ಬೆನೆಟ್ ಅಮ್ಮನ್ನ, ತಾರಾನಾಥ್ ಕಾಪಿಕಾಡ್, ಮಾಜಿ ಸದಸ್ಯರಾದ ಡಿ. ಎಂ ಕುಲಾಲ್ ಪುಸ್ತಕ ಮಾರಾಟ ವ್ಯವಸ್ಥೆಯ ಪ್ರಮುಖರಾದ ದೀಪಕ್ ಮಂಜೇಶ್ವರ ಉಪಸ್ಥಿತರಿದ್ದರು.