Home Mangalorean News Kannada News ತೆಂಕನಿಡಿಯೂರು ಗ್ರಾಪಂನಲ್ಲಿ ಪ್ರತಿಭಟನೆ; ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ – ಅಧ್ಯಕ್ಷೆ ಶೋಭಾ ಡಿ ನಾಯ್ಕ್...

ತೆಂಕನಿಡಿಯೂರು ಗ್ರಾಪಂನಲ್ಲಿ ಪ್ರತಿಭಟನೆ; ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ – ಅಧ್ಯಕ್ಷೆ ಶೋಭಾ ಡಿ ನಾಯ್ಕ್ ಆರೋಪ

Spread the love

ತೆಂಕನಿಡಿಯೂರು ಗ್ರಾಪಂನಲ್ಲಿ ಪ್ರತಿಭಟನೆ; ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ – ಅಧ್ಯಕ್ಷೆ ಶೋಭಾ ಡಿ ನಾಯ್ಕ್ ಆರೋಪ

ಉಡುಪಿ: ತೆಂಕನಿಡಿಯೂರು ಪಂಚಾಯತ್ ನಲ್ಲಿ ಬುಧವಾರ ನಡೆದ ಪ್ರತಿಭಟನೆಗೆ ಹಿಂದಿನ ಎರಡು ಅವಧಿಯಲ್ಲಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಆಡಳಿತವೇ ನೇರವಾಗಿ ಹೊಣೆಯಾಗಿದ್ದು ತಾವು ಮಾಡಿದ ತಪ್ಪನ್ನು ಮುಚ್ಚಿಹಾಕಲು ನನ್ನ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಬೆಂಬಲಿತ ಸದಸ್ಯರು ಮಾಡುತ್ತಿದ್ದಾರೆ ಎಂದು ಪಂಚಾಯತ್ ಅಧ್ಯಕ್ಷೆ ಶೋಭಾ ಡಿ ನಾಯ್ಕ್ ಹೇಳಿದರು.

ಅವರು ಗುರುವಾರ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 2019 ರಿಂದ 2024 ರ ಜುಲೈ 2 ರ ತನಕ ಎಸ್ ಎಲ್ ಆರ್ ಎಮ್ ಘಟಕದಲ್ಲಿ ಜಮೆಯಾದ ತ್ಯಾಜ್ಯವನ್ನು ವಿಲೇವಾರಿ ಮಾಡದೆ ಬಿಜೆಪಿ ಬೆಂಬಲಿತ ಸದಸ್ಯರು ಕಾಲಹರಣ ಮಾಡಿ ಈಗ ಅವರ ಕಿರುಕುಳದಿಂದ ಬೇಸತ್ತು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಅಧ್ಯಕ್ಷೆಯಾದ ನನ್ನ ವಿರುದ್ದ ಅನಾವಶ್ಯಕ ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ. ತಾನು ಪರಿಶಿಷ್ಠ ಪಂಗಡಕ್ಕೆ ಸೇರಿದ ಮಹಿಳೆಯಾಗಿದ್ದರಿಂದ ಹೇಗಾದರೂ ಮಾಡಿ ಅಧಿಕಾರವನ್ನು ಕಿತ್ತುಕೊಳ್ಳುವ ಪ್ರಯತ್ನದಿಂದ ತನ್ನ ವಿರುದ್ದ ಹಲ್ಲೆ ಜಾತಿ ನಿಂದನೆ ಮಾಡಿದ್ದು ಈ ಬಗ್ಗೆ ಈಗಾಗಲೇ ಮಲ್ಪೆ ಠಾಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ಇತರರ ವಿರುದ್ದ ಪ್ರಕರಣ ಕೂಡ ದಾಖಲಾಗಿದೆ ಎಂದರು.

ಪಂಚಾಯತ್ ಸದಸ್ಯ ಪ್ರಖ್ಯಾತ್ ಶೆಟ್ಟಿ ಮಾತನಾಡಿ2010ರಲ್ಲಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಗೆ ಗ್ರಾಮ ವಿಕಾಸ ಯೋಜನೆಯಡಿ ರೂ. 75,00,000 ಅನುದಾನ ಮಂಜೂರಾಗಿದ್ದು ಅದರಲ್ಲಿ 10% ಅನುದಾನ ತ್ಯಾಜ್ಯ ನಿರ್ವಹಣೆಗಾಗಿ ಮೀಸಲಾಗಿಡಲಾಗಿತ್ತು. 2013 ರಲ್ಲಿ ಪಂಚಾಯತಿ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಪೊರೈಕೆ ಹಿನ್ನಲೆಯಲ್ಲಿ ಕೆಳಾರ್ಕಳಬೆಟ್ಟು ವಾರ್ಡ್ ನಲ್ಲಿ ಬೋರ್ ವೆಲ್ ನಿರ್ಮಾಣ ಮಾಡಲಾಗಿತ್ತು.

2015 ರಿಂದ ತೆಂಕನಿಡಿಯೂರು ಗ್ರಾಮಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಆಡಳಿತವಿದ್ದು 2019 ರಲ್ಲಿ ಕೆಳಾರ್ಕಳಬೆಟ್ಟು ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರ, ಸ್ಥಳೀಯ ಗ್ರಾಮಸ್ಥರ ವಿರೋಧದ ನಡುವೆಯೇ ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಎಸ್ ಎಲ್ ಆರ್ ಎಮ್ ಘಟಕವನ್ನು ನಿರ್ಮಾಣ ಮಾಡಲಾಗಿತ್ತು. ಅಂದಿನಿಂದ 2024 ರ ಜುಲೈ 2 ರ ತನಕ ತೆಂಕನಿಡಿಯೂರು ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ ಆಡಳಿತವಿತ್ತು. ಈ ಸಂದರ್ಭದಲ್ಲಿ ಹಲವಾರು ಬಾರಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಎಸ್ ಎಲ್ ಆರ್ ಎಮ್ ಘಟಕದ ಕುರಿತು ವಿರೋಧ ಮಾಡುತ್ತಾ ಬಂದರೂ ಕೂಡ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

ಬೋರ್ ವೆಲ್ ಇರುವ ಸ್ಥಳದ ಪಕ್ಕದಲ್ಲಿಯೇ ಮೆಡಿಕಲ್ ಫ್ಯಾಕ್ಟರಿ ಇದ್ದು ಅದರ ತ್ಯಾಜ್ಯ ಸೂಕ್ತವಾಗಿ ಹೋಗಲು ಚರಂಡಿ ಮುಚ್ಚಿದ್ದರ ಪರಿಣಾಮ ನೀರು ಕಲುಷಿತಗೊಂಡಿದೆ. ಅಲ್ಲದೆ ಮಳೆಗಾಲ ಆರಂಭವಾದ ಬಳಿಕ ಬೋರ್ ವೆಲ್ ನೀರನ್ನು ಗ್ರಾಮದ ಜನರಿಗೆ ಪೊರೈಕೆ ಮಾಡುವುದದನ್ನು ನಿಲ್ಲಿಸಲಾಗಿದ್ದು ಬಾವಿ ನೀರನ್ನು ಪೊರೈಸಲಾಗುತ್ತದೆ. ನೀರು ಕಲುಷಿತಗೊಂಡಿದೆ ಎಂದು ಕೇವಲ ಪ್ರಚಾರದ ನಿಟ್ಟಿನಲ್ಲಿ ತನ್ನ ಪಕ್ಷದ ಕಾರ್ಯಕರ್ತರನ್ನು ಕೂಡಿಸಿಕೊಂಡು ಪ್ರತಿಭಟನೆಯ ನಾಟಕವನ್ನು ಬಿಜೆಪಿ ಆಡುತ್ತಿದೆ. ಇಲ್ಲಿಯ ವರೆಗೆ ಆಡಳಿತ ನಡೆಸಿದ ಬಿಜೆಪಿ ಯಾಕೆ ಎಸ್ ಎಲ್ ಆರ್ ಎಮ್ ಘಟಕದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕೆಲಸ ಮಾಡಿಲ್ಲ ಎನ್ನುವುದಕ್ಕೆ ಉತ್ತರಬೇಕಾಗಿದೆ. ಜನರಿಗೆ ದಾರಿ ತಪ್ಪಿಸಿ ತನ್ನ ಬೆಳೆ ಬೇಯಿಸುವ ಪ್ರಯತ್ನಕ್ಕೆ ಹೊರಟಿರುವ ಬಿಜೆಪಿಗರ ನಿಜ ಬಣ್ಣವನ್ನು ಸದ್ಯದಲ್ಲಿಯೇ ಬಯಲು ಮಾಡಲಾಗುವುದು. ಪ್ರಸ್ತುತ ನಮ್ಮ ಕಾಂಗ್ರೆಸ್ ಬೆಂಬಲಿತ ಆಡಳಿತ ತೆಂಕನಿಡಿಯೂರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಎಸ್ ಎಲ್ ಆರ್ ಎಮ್ ಘಟಕದ ಸಮಸ್ಯೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಬದ್ದರಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಂಚಾಯತ್ ಸದಸ್ಯರಾದ ಸುರೇಶ್ ನಾಯಕ್, ಶರತ್ ಶೆಟ್ಟಿ, ಸತೀಶ್ ನಾಯಕ್, ರವಿರಾಜ್, ವೆಂಕಟೇಶ್ ಉಪಸ್ಥೀತರಿದ್ದರು.


Spread the love

Exit mobile version