ತೈಲ ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲ; ಉಡುಪಿ ಜಿಲ್ಲಾ ಎನ್.ಎಸ್.ಎಸ್‍ಯು.ಐ ಖಂಡನೆ
ಉಡುಪಿ: ಕೇಂದ್ರ ಸರ್ಕಾರ ದಿನೇ ದಿನೇ ಪೆಟ್ರೋಲ್–ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುತ್ತಿರುವುದರಿಂದ ಜನಸಾಮ್ಯಾನರಿಗೆ ತೊಂದರೆ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಉಡುಪಿ ಜಿಲ್ಲಾ ಎನ್.ಎಸ್.ಎಸ್‍ಯು.ಐ ಖಂಡಿಸಿದೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಉಡುಪಿ ಜಿಲ್ಲಾ ಎನ್.ಎಸ್.ಎಸ್‍ಯು.ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ’ಆಲ್ಮೇಡಾ ಅವರು ನರೇಂದ್ರ ಮೋದಿಯವರು ಪ್ರಧಾನಿಯಾದಾಗ “ಅಚ್ಛೇದಿನ್”ತರುವುದಾಗಿ ಹೇಳಿದ್ದರು. ಅವರು ಪ್ರಧಾನಿಯಾಗಿ ನಾಲ್ಕು ವರ್ಷಗಳಾದರೂ ಜನರಿಗೆ ಅಚ್ಛೇ ದಿನ್ ಬರಲೇ ಇಲ್ಲ ಬದಲಿಗೆ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸರಕು ಸಾಗಾಣೆಕೆಯೂ ದುಬಾರಿಯಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರ ದೈನಂದಿನ ಜೀವನ ಕಷ್ಟವಾಗುತ್ತಿದೆ.
ನೋಟ್ ಬ್ಯಾನ್‍ನಂತಹ ಕ್ರಮಗಳಿಂದಾಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿ ಜನಸಾಮಾನ್ಯರ ಮೇಲೆ ಆರ್ಥಿಕ ಗದಾಪ್ರಹಾರ ನಡೆಸಿದ ಕೇಂದ್ರ ಸರ್ಕಾರ ಮತ್ತೂ ಜನಸಾಮಾನ್ಯರ ಮೇಲೆ ಹೊರೆ ಹೊರಿಸುತ್ತಿದೆ. ಕೂಡಲೇ ಸರ್ಕಾರ ತನ್ನ ಆರ್ಥಿಕ ನೀತಿಗಳನ್ನು ಬದಲಿಸಿಕೊಳ್ಳಬೇಕು. ಪೆಟ್ರೋಲ್ ಡೀಸೆಲ್ ಬೆಲೆಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಯ ದರಕ್ಕನುಗುಣವಾಗಿ ನಿಯಂತ್ರಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ.
ಅದೇ ರೀತಿ ಒಂದೆಡೆ “ಉರುವಲು ಬದಲಿಗೆ ಎಲ್‍ಪಿಜಿ ಬಳಸಿ” ಎಂದು ಪ್ರಚಾರ ಮಾಡುತ್ತಲೇ ಗ್ಯಾಸ್ ಬೆಲೆಯನ್ನೂ ದಿನೇ ದಿನೇ ಹೆಚ್ಚಿಸುತ್ತಿದೆ. ಅಲ್ಲದೆ, ಗ್ಯಾಸ್‍ಗೆ ನೀಡುತ್ತಿದ್ದ ಸಬ್ಸಿಡಿ ರದ್ದುಗೊಳಿಸಲು ಮುಂದಾಗಿರುವುದು ಖಂಡನೀಯ ಕೂಡಲೇ ಕೇಂದ್ರ ಸರ್ಕಾರ ಇಂತಹ ಕ್ರಮಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.