ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಅವೈಜ್ಞಾನಿಕ – ಸಚಿವ ಯು.ಟಿ.ಖಾದರ್
ಮಂಗಳೂರು: ‘ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಅವೈಜ್ಞಾನಿಕವಾಗಿದೆ. ಇದರಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ 10 ರಂದು ಉದ್ಘಾಟನೆಗೆ ಸಿದ್ಧವಾಗಿರುವ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳ ಜತೆಗೆ ಸೋಮವಾರ ವೀಕ್ಷಿಸಿದ ಅವರು, ಸ್ಥಳೀಯರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸುವಂತೆ ನವಯುಗ ಸಂಸ್ಥೆ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
‘ತೊಕ್ಕೊಟ್ಟುವಿನಿಂದ ಮಂಗಳೂರು ವಿಶ್ವವಿದ್ಯಾಲಯ, ಉಳ್ಳಾಲದಿಂದ ತೊಕ್ಕೊಟ್ಟು ಬರುವ ವಾಹನ ಸವಾರರು ಸುಗಮವಾಗಿ ತೆರಳುವಂತೆ ಹಾಗೂ ಪಾದಚಾರಿಗಳು ನಡೆದುಕೊಂಡು ಹೋಗುವ ವ್ಯವಸ್ಥೆಯನ್ನು ಸರಿಪಡಿಸಬೇಕು. ಸರ್ವಿಸ್ ರಸ್ತೆ ವಿಸ್ತರಣೆ ಮಾಡಿ ಜನರಿಗೆ ಸುರಕ್ಷಿತವಾಗಿ ನಡೆದುಕೊಂಡು ಹೋಗುವ ಸ್ಥಿತಿಯನ್ನು ನವಯುಗ ಸಂಸ್ಥೆ ನಿರ್ಮಿಸಬೇಕಿದೆ. ದರ್ಗಾ, ಚರ್ಚ್, ದೇವಸ್ಥಾನ, ಶೈಕ್ಷಣಿಕ ಸಂಸ್ಥೆಗಳು ಹೊಂದಿರುವ ಉಳ್ಳಾಲ ಭಾಗಕ್ಕೆ ತೆರಳುವ ವಾಹನ ದಟ್ಟಣೆ ಹೆಚ್ಚಿರುತ್ತದೆ. ಈಗಿರುವ ಕಾಮಗಾರಿ ಅವೈಜ್ಞಾನಿಕವಾಗಿದೆ. ಉಳ್ಳಾಲಕ್ಕೆ ತೆರಳುವವರಿಗೆ ಅಪಾಯ ಖಚಿತ. ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನಲ್ಲಿ ಶಾಶ್ವತ ಪರಿಹಾರ ಕ್ರಮ ಆಗಬೇಕಿದೆ’ ಎಂದರು.
ಉಳ್ಳಾಲಕ್ಕೆ ಹೋಗುವವರು ರಾಷ್ಟ್ರೀಯ ಹೆದ್ದಾರಿಯಲ್ಲಿ 150 ಮೀಟರ್ ಮುಂದೆ ಹೋಗಿ ಅಲ್ಲಿ ತಿರುಗಿಬರುವಂತೆ ವ್ಯವಸ್ಥೆ ಕಲ್ಪಿಸಬೇಕಿದೆ. ಕಾಪಿಕಾಡು ಗಟ್ಟಿ ಸಮಾಜ ಭವನದ ಎದುರು ರಸ್ತೆ ವಿಭಜಕವನ್ನು ತೆರೆದು ಕೊಡಲು ಸ್ಥಳಾವಕಾಶ ಬಹಳಷ್ಟಿದೆ ಎಂದು ಸಲಹೆ ನೀಡಿದರು. ಜನಸಾಮಾನ್ಯರ ಸಹಕಾರದಂತೆ ಸ್ಪೀಡ್ ಬ್ರೇಕರ್ ಅಳವಡಿಸಬೇಕು. ಎಂದರು.
ಸಿಗ್ನಲ್ ಅಳವಡಿಸಿ, ಉದ್ಘಾಟನೆಗೆ ಮುಂಚೆ ಸ್ಥಳೀಯ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ. ಇಲ್ಲವಾದಲ್ಲಿ ಉದ್ಘಾಟನೆ ನಡೆಸಿಯೂ ಪ್ರಯೋಜನವಿಲ್ಲ ಎಂದು ಸಚಿವ ಖಾದರ್ ಸಲಹೆ ನೀಡಿದರು.