ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಭ್ರಾತೃತ್ವದ ಭಾನುವಾರ ಆಚರಣೆ
ಮಲ್ಪೆ: ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಚರ್ಚಿನಲ್ಲಿ ವಾರ್ಷಿಕ ಮಹೋತ್ಸವದ ಪ್ರಯುಕ್ತ ಭ್ರಾತೃತ್ವದ ಭಾನುವಾರವನ್ನು ಆಚರಿಸಲಾಯಿತು.
ಪರಮ ಪ್ರಸಾದದ ಅಡಿಪಾಯದಲ್ಲಿ ನಮ್ಮ ಚರ್ಚಿನ ಕುಟುಂಬಗಳನ್ನು ಬಲಿಷ್ಠಗೊಳಿಸೋಣ ಎಂದ ಸಂದೇಶದೊಂದಿಗೆ ಭ್ರಾತೃತ್ವದ ಭಾನುವಾರ ಹಾಗೂ ಪರಮಪ್ರಸಾದ ಆರಾಧನೆಯ ಪವಿತ್ರ ಬಲಿಪೂಜೆಯ ನೇತೃತ್ವವನ್ನು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಸಹಾಯಕ ಧರ್ಮಗುರು ವಂ|ಸ್ಟೀಫನ್ ರೊಡ್ರಿಗಸ್ ವಹಿಸಿದ್ದರು.
ಅವರು ತಮ್ಮ ಪ್ರವಚನದಲ್ಲಿ ಕ್ರೈಸ್ತರಿಗೆ ಪರಮ ಪ್ರಸಾದದ ಗೌರವ ಹಾಗೂ ಅಗತ್ಯತೆಯನ್ನು ವಿವರಿಸಿ ಪರಮಪ್ರಸಾದವಿಲ್ಲದ ಜೀವನ ಬರಡು ಭೂಮಿಯಂತೆಯಾಗಿದ್ದು ಅದು ನಮ್ಮೆಲ್ಲರ ಜೀವನದ ಕೇಂದ್ರವಾಗಿದೆ. ಪರಮ ಪ್ರಸಾದದ ಮೇಲೆ ನಮ್ಮ ಭರವಸೆ ಇಡುವಂತವರಾಗಬೇಕು. ಪರಮ ಪ್ರಸಾದವನ್ನು ಸೇವಿಸುವುದರಿಂದ ಕ್ರೈಸ್ತರ ಆಧ್ಯಾತ್ಮಿಕ ಜೀವನ ಬಲಗೊಳ್ಳಲು ಸಹಕಾರಿಯಾಗಿದೆ ಎಂದರು.
ದಿವ್ಯ ಬಲಿಪೂಜೆಯ ಬಳಿಕ ಪವಿತ್ರ ಪರಮ ಪ್ರಸಾದದ ಆರಾಧನೆಯನ್ನು ನೇರವೇರಿಸಿ ಚರ್ಚ್ ವಠಾರದಲ್ಲಿ ಪರಮ ಪ್ರಸಾದವನ್ನು ಸಾರ್ವಜನಿಕವಾಗಿ ಮೆರವಣಿಗೆಯಲ್ಲಿ ಕೊಂಡೊಯ್ದು ಆಶೀರ್ವಚನ ನೀಡಲಾಯಿತು.
ಚರ್ಚಿನ ಪ್ರಧಾನ ಧರ್ಮಗುರು ವಂ|ಡೆನಿಸ್ ಡೆಸಾ, ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್ ಹಾಗೂ ಇತರರು ಉಪಸ್ಥಿತರಿದ್ದರು.
ಚರ್ಚಿನ ವಾರ್ಷಿಕ ಮಹೋತ್ಸವ ಡಿಸೆಂಬರ್ 10 ಮತ್ತು 11 ರಂದು ನಡೆಯಲಿದ್ದು, 11 ರಂದು ಬುಧವಾರ ಮಹೋತ್ಸವದ ಬಲಿಪೂಜೆಯಲ್ಲಿ ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಫ್ರಾನ್ಸಿಸ್ ಸೆರಾವೊ ಭಾಗವಹಿಸಲಿದ್ದಾರೆ.