ತೋಟಬೆಂಗ್ರೆಯಲ್ಲಿ ಸಾಮೂಹಿಕ ಅತ್ಯಾಚಾರ ಘಟನೆ -ಕರ್ತವ್ಯ ನಿರ್ಲಕ್ಷ: ಬಂಟ್ವಾಳ ಠಾಣೆಯ ಎಎಸ್ಸೈ ಅಮಾನತು
ಮಂಗಳೂರು: ನಗರದ ಹೊರವಲಯ ತೋಟಬೆಂಗ್ರೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಸಂತ್ರಸ್ತೆ ನೀಡಿದ ದೂರನ್ನು ಸ್ವೀಕರಿಸದ ಆರೋಪದಲ್ಲಿ ಬಂಟ್ವಾಳ ಠಾಣೆಯ ಎಎಸ್ಸೈ ರಘುರಾಮ್ ಹೆಗ್ಡೆ ಅವರನ್ನು ಅಮಾನತುಗೊಳಿಸಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.
ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ನ. 26ರಂದು ದಾಖಲಾದ ಪ್ರಕರಣದ ಸಂತ್ರಸ್ತೆಯು ತನ್ನ ಮೇಲೆ ನ.18ರಂದು ತಣ್ಣೀರುಬಾವಿ ಪರಿಸರದಲ್ಲಿ ಏಳು ಮಂದಿ ಯುವಕರ ತಂಡದಿಂದ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ನ.20ರಂದು ದೂರು ನೀಡಲು ತೆರಳಿದ್ದರು.
ಪೊಲೀಸ್ ಠಾಣೆಯಲ್ಲಿ ಹಗಲು ಠಾಣಾ ದಿನಚರಿ ಕರ್ತವ್ಯದಲ್ಲಿದ್ದ ಎಎಸ್ಸೈ ರಘುರಾಮ ಹೆಗ್ಡೆ ತಕ್ಷಣಕ್ಕೆ ದೂರನ್ನು ದಾಖಲಿಸಲು ನಿರಾಕರಿಸಿದ್ದು, ‘ಘಟನೆ ಎಲ್ಲಿ ಸಂಭವಿಸಿದೆಯೋ ಅದೇ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿ’ ಸಂತ್ರಸ್ತೆಯನ್ನು ಹಿಂದೆ ಕಳುಹಿಸಿದ್ದರು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಘುರಾಮ ಹೆಗ್ಡೆ ಅವರನ್ನು ಕರ್ತವ್ಯ ನಿರ್ಲಕ್ಷ ಆರೋಪದಡಿ ಸೇವೆಯಿಂದ ಅಮಾನತುಗೊಳಿಸಿ, ವಿಚಾರಣೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.