ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿಯವರ ವರ್ಗಾವಣೆಯನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯನ್ನು ದುರುಪಯೋಗಪಡಿಸಲು ಹೊರಟ ರಾಜ್ಯದ BJP ಸರಕಾರದ ನಿರ್ಧಾರವನ್ನು ಪ್ರಬಲವಾಗಿ ವಿರೋಧಿಸಿ ಕಟ್ಟಡ ಕಾರ್ಮಿಕರ ಪರವಾಗಿ ಧ್ರಢವಾಗಿ ನಿಂತ ದಕ್ಷ ಅಧಿಕಾರಿಣಿ ಶ್ರೀಮತಿ ರೋಹಿಣಿ ಸಿಂಧೂರಿಯವರನ್ನು ಏಕಾಏಕಿ ವರ್ಗಾವಣೆ ಮಾಡಿದ ರಾಜ್ಯ ಸರಕಾರದ ಕುತಂತ್ರವನ್ನು ಖಂಡಿಸಿ CITU ನೇತ್ರತ್ವದಲ್ಲಿ ನಗರದಲ್ಲಿಂದು ದ.ಕ.ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
DYFI ದ.ಕ.ಜಿಲ್ಲಾಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್ ರವರು ಮಾತನಾಡುತ್ತಾ, *ಕೇಂದ್ರದ ನರೇಂದ್ರ ಮೋದಿ ಸರಕಾರವು ಈಗಾಗಲೇ ಕಲ್ಪವ್ರಕ್ಷದಂತಿದ್ದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿರುವುದು ಮಾತ್ರವಲ್ಲ,ಕಾರ್ಮಿಕರ ಬೆವರಿನ ಪಾಲಾದ PF,ESI ಹಣವನ್ನು ಲಪಟಾಯಿಸಲು ಹೊಂಚು ಹಾಕುತ್ತಿದೆ.ಅದರಂತೆ ರಾಜ್ಯದ BJP ಸರಕಾರವೂ ಕೂಡ ಕಟ್ಟಡ ಕಾರ್ಮಿಕರ ಮೀಸಲು ನಿಧಿಯನ್ನು ದುರ್ಬಳಕೆ ಮಾಡಲು ಹೊರಟಿರುವುದು ಯಥಾ ರಾಜಾ ತಥಾ ಪ್ರಜಾ ಎಂಬಂತೆ ವರ್ತಿಸುತ್ತಿದೆ* ಎಂದು ಹೇಳಿದರು.
ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ರವರು ಮಾತನಾಡುತ್ತಾ, *ಕಟ್ಟಡ ಕಾರ್ಮಿಕರ ನೊಂದಾವಣೆ ಶುಲ್ಕ ಹಾಗೂ ಸೆಸ್ ಮೂಲಕ ಸಂಗ್ರಹ ವಾಗುತ್ತಿರುವ ಕೋಟ್ಯಾಂತರ ರೂಪಾಯಿ ಹಣವಿರುವ ಇಲಾಖೆಗೆ ಇಷ್ಟವರೆಗೆ ಪ್ರಮುಖ ಅಧಿಕಾರಿಯೊಬ್ಬರನ್ನು ನೇಮಕ ಮಾಡದಿರುವ ಸರಕಾರದ ಕ್ರಮವೇ ಸಂಶಯಾಸ್ಪದವಾಗಿದೆ.ಕಳೆದ 5 ತಿಂಗಳ ಹಿಂದೆ ಕಾರ್ಯದರ್ಶಿ ಯಾಗಿ ನೇಮಕಗೊಂಡ ಶ್ರೀಮತಿ ರೋಹಿಣಿ ಸಿಂಧೂರಿಯವರು ಕಟ್ಟಡ ಕಾರ್ಮಿಕರ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿದಿರುತ್ತಾರೆ.ಕಟ್ಟಡ ಕಾರ್ಮಿಕರಿಗಾಗಿ ಮೀಸಲಿರಿಸಿದ ಹಣವನ್ನು ತನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಅನ್ಯ ಕೆಲಸಗಳಿಗೆ ಉಪಯೋಗಿಸಲು ಬಿಡಲಾರೆ ಎಂದು ಹೇಳಿರುವುದು ನಿಜಕ್ಕೂ ಶ್ಲಾಘನೀಯ ವಾಗಿದೆ* ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ದ.ಕ.ಜಿಲ್ಲಾ ಸಮಿತಿ ಸದಸ್ಯರಾದ ರವಿಚಂದ್ರ ಕೊಂಚಾಡಿಯವರು, *ಕಟ್ಟಡ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಸಮರಧೀರ ಹೋರಾಟವನ್ನು ಮೆಲುಕು ಹಾಕುತ್ತಾ,ಕಲ್ಯಾಣ ಮಂಡಳಿ ರಚನೆಯಿಂದ ಸಿಗುತ್ತಿರುವ ಸವಲತ್ತುಗಳನ್ನು ಮುಂದಿನ ದಿನಗಳಲ್ಲಿ ಇಲ್ಲವಾಗಿಸಲು BJP ಸರಕಾರ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ* ಎಂದು ಹೇಳಿದರು.
ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಜೆ.ಬಾಲಕ್ರಷ್ಣ ಶೆಟ್ಟಿ, ವಸಂತ ಆಚಾರಿ,ಜಯಂತಿ ಶೆಟ್ಟಿ,ದಿನೇಶ್ ಶೆಟ್ಟಿ,ಇತರ ಸಂಘಟನೆಗಳ ನಾಯಕರಾದ ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ಭಾರತಿ ಬೋಳಾರ,ತಿಮ್ಮಯ್ಯ ಕೊಂಚಾಡಿ,ಕ್ರಷ್ಣಪ್ಪ ಕೊಂಚಾಡಿ ಮುಂತಾದವರು ಹಾಜರಿದ್ದರು.