ದಕ ಜಿಲ್ಲೆಗೆ ಮೋದಿ,ನಳಿನ್‌ ಕೊಡುಗೆ ಏನು? -ರಮಾನಾಥ ರೈ

Spread the love

ದಕ ಜಿಲ್ಲೆಗೆ ಮೋದಿ,ನಳಿನ್‌ ಕೊಡುಗೆ ಏನು? -ರಮಾನಾಥ ರೈ

ಮಂಗಳೂರು: ‘ಸಂಸದ ನಳಿನ್‌ಕುಮಾರ್‌ ಕಟೀಲ್‌ ಹೆಸರಿನಲ್ಲಿ ಮತ ಕೇಳಲಾಗದ ಬಿಜೆಪಿಯವರು ಈಗ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳುತ್ತಿದ್ದಾರೆ. ಜಿಲ್ಲೆಗೆ ಇವರಿಬ್ಬರ ಕೊಡುಗೆ ಏನು’ ಎಂದು ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟದ ಜಂಟಿ ಚುನಾವಣಾ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆನಗಲ್‌ ಶಿವರಾಯರಿಂದ ಬಿ.ಜನಾರ್ದನ ಪೂಜಾರಿ ಅವರವರೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸದರಾದವರು ಜಿಲ್ಲೆಗೆ ಮಹತ್ವದ ಕೊಡುಗೆ ನೀಡಿದರು. ಬಿಜೆಪಿ ಸಂಸದರ ಕೊಡುಗೆ ಏನಿದೆ ಎಂಬುದನ್ನು ಬಹಿರಂಗಪಡಿಸಲಿ. ನಮ್ಮ ಜಿಲ್ಲೆಗಾಗಿ ಮೋದಿ ಏನು ಮಾಡಿದ್ದಾರೆ ಎಂಬುದನ್ನೂ ಹೇಳಲಿ’ ಎಂದು ಸವಾಲು ಹಾಕಿದರು. ಕೆಲವರು ಸತ್ಯಾಂಶ ಅರಿಯದೇ ‘ಮೋದಿ, ಮೋದಿ’ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ, ಜಿಲ್ಲೆಗೆ ಅವರ ಕೊಡುಗೆ ಏನಿದೆ ಎಂಬ ಪ್ರಶ್ನೆ ಕೇಳಿದರೆ ಉತ್ತರವೇ ಇಲ್ಲ. 1999ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಝ್ಗಾನ್‌ ಡಾಕ್‌ ಅನ್ನು ಮುಂಬೈಗೆ ಸ್ಥಳಾಂತರಿಸಿದ್ದರು. ಈಗ ವಿಜಯ ಬ್ಯಾಂಕ್‌ ವಿಲೀನ ಮಾಡಿದರು. ಇದೇ ಇವರ ಕೊಡುಗೆ ಎಂದು ಟೀಕಿಸಿದರು.

‘ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ತಮ್ಮ ಮುಖ ತೋರಿಸಿ ಮತ ಕೇಳುವ ಶಕ್ತಿಯೇ ಇಲ್ಲ. ಅಭ್ಯರ್ಥಿಯ ಹೆಸರು ಹೇಳಲಾಗದಂತಹ ದಿವಾಳಿ ಸ್ಥಿತಿಗೆ ಬಿಜೆಪಿ ತಲುಪಿದೆ. ಮುಖ ಕಳೆದುಕೊಂಡಿರುವ ನಳಿನ್‌ಕುಮಾರ್‌ ಮೋದಿಯ ಮುಖವಾಡ ಧರಿಸಿ ಜನರ ಮುಂದೆ ಬಂದಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಬರುವ ಶಾಸನಬದ್ಧ ಅನುದಾನವನ್ನೂ ಸೇರಿಸಿ ತನ್ನ ಸಾಧನೆಯ ಲೆಕ್ಕ ಕೊಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಏಕೆ ಪ್ರಶ್ನಿಸಲಿಲ್ಲ?:<ವಿಜಯ ಬ್ಯಾಂಕ್‌ ವಿಲೀನ ‍ಪ್ರಕ್ರಿಯೆಗೆ ಹಿಂದಿನ ಯುಪಿಎ ಸರ್ಕಾರ ಕಾರಣ ಎಂದು ಕೆಲವರು ಆರೋಪಿಸಿದ್ದಾರೆ. ಯುಪಿಎ–2 ಸರ್ಕಾರದ ಅವಧಿಯಲ್ಲಿ ನಳಿನ್‌ಕುಮಾರ್ ಕಟೀಲ್‌ ಬಿಜೆಪಿ ಸಂಸದರಾಗಿದ್ದರು. ಅದು ನಿಜವೇ ಆಗಿದ್ದಲ್ಲಿ ಆಗ ಏಕೆ ಸಂಸತ್ತಿನಲ್ಲಿ ಪ್ರಶ್ನಿಸಲಿಲ್ಲ? ಬ್ಯಾಂಕ್‌ ವಿಲೀನವನ್ನು ಏಕೆ ವಿರೋಧಿಸಲಿಲ್ಲ ಎಂದು ರಮಾನಾಥ ರೈ ಕೇಳಿದರು.

ಲೈಟ್‌ ಹೌಸ್‌ ಹಿಲ್‌ ರಸ್ತೆಗೆ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರನ್ನು ನಾಮಕರಣ ಮಾಡುವ ವಿಷಯದಲ್ಲೂ ಲೋಪವಾಗಿಲ್ಲ. ತಾವು ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಈಗಲೂ ವಿಚಾರ ಸಮಿತಿಯ ಮುಂದಿದೆ. ಕಾಂಗ್ರೆಸ್‌ ಪಕ್ಷದಿಂದ ಯಾವುದೇ ತಪ್ಪು ಆಗಿಲ್ಲ. ಕೆಲವರು ಈಗ ಸುಳ್ಳು ಹೇಳಿ ಜನರ ದಿಕ್ಕುತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಮೋದಿ ಐದು ವರ್ಷಗಳ ಹಿಂದೆ ಚುನಾವಣೆ ವೇಳೆ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಕಾಂಗ್ರೆಸ್‌ ಪಕ್ಷ ಈ ರೀತಿ ಜನರಿಗೆ ಯಾವತ್ತೂ ಅನ್ಯಾಯ ಮಾಡಿಲ್ಲ. ದೇಶದ ಬಡವರಿಗೆ ದ್ರೋಹ ಮಾಡಿಲ್ಲ. ಜನರಿಗೆ ಎಲ್ಲದರ ಅರಿವಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮೋದಿ ಸೇರಿದಂತೆ ಯಾರ ಭಯವೂ ಇಲ್ಲ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ಕುಮಾರ್‌, ರಾಜ್ಯಸಭೆಯ ಮಾಜಿ ಸದಸ್ಯ ಬಿ.ಇಬ್ರಾಹಿಂ, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಜಿಲ್ಲಾ ವಕ್ಫ್‌ ಸಲಹಾ ಮಂಡಳಿ ಅಧ್ಯಕ್ಷ ಕಣಚೂರು ಮೋನು ಪತ್ರಿಕಾಗೋಷ್ಠಿಯಲ್ಲಿದ್ದರು.


Spread the love