ದಕ ಜಿಲ್ಲೆಯಲ್ಲಿ ಒಂದೇ ದಿನ 84 ಮಂದಿಗೆ ಕೊರೋನ ಪಾಸಿಟಿವ್
ಮಂಗಳೂರು : ದ.ಕ. ಜಿಲ್ಲೆಯಲ್ಲಿ ಗಣನೀಯವಾಗಿ ಕೊರೋನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಬುಧವಾರ ಬರೋಬ್ಬರಿ 84 ಮಂದಿಗೆ ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಇದು ಎರಡನೇ ಬಾರಿ ಅತಿಹೆಚ್ಚು ಪ್ರಕರಣಗಳು ಕಂಡು ಬರುತ್ತಿದ್ದು, ಜೂ.28ರಂದು 97 ಮಂದಿಗೆ ಸೋಂಕು ತಗುಲಿತ್ತು. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 883ಕ್ಕೆ ಏರಿಕೆಯಾಗಿದೆ. ಇದರಲ್ಲಿ 10 ಮಂದಿ ಹೊರಜಿಲ್ಲೆಯವರಾಗಿದ್ದಾರೆ.
ಜಿಲ್ಲೆಯಲ್ಲಿ ಕೊರೋನ ಸೋಂಕು ಗಂಭೀರ ಪರಿಸ್ಥಿತಿಗೆ ತಲುಪುತ್ತಿದೆ. ಮೂಲ ಪತ್ತೆಯಾಗದೇ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವುದು ಕೊರೋನವು ಸಮುದಾಯಕ್ಕೆ ಹಬ್ಬುತ್ತಿರುವ ಲಕ್ಷಣವಾಗಿದೆ. ಇದರಿಂದ ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಕೊರೋನವು ಸರಣಿ ರೂಪದಲ್ಲಿ ವ್ಯಾಪಕಗೊಳ್ಳುತ್ತಿರುವುದು ಸಾರ್ವಜನಿಕ ಕಳವಳಕ್ಕೂ ಕಾರಣವಾಗಿದೆ.
ಸೋಂಕಿತರ ಪೈಕಿ ಶಾರ್ಜಾದಿಂದ ಆರು, ಅಂತರಾಜ್ಯ ಒಂದು, ಐಎಲ್ಐ 28, ಮೂಲ ಪತ್ತೆಯಾಗದ 11, ಪ್ರಾಥಮಿಕ ಸಂಪರ್ಕದಲ್ಲಿದ್ದ 38 ಮಂದಿಗೆ ಸೋಂಕು ತಗುಲಿದೆ. ಎಲ್ಲ ಸೋಂಕಿತರನ್ನು ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.