ದಕ ಜಿಲ್ಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

Spread the love

ದಕ ಜಿಲ್ಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

ಮಂಗಳೂರು: ಕರ್ನಾಟಕವು ಜಿಎಸ್ ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೆ ಸ್ಥಾನದಲ್ಲಿದ್ದರೂ, ಹಣಕಾಸು ಆಯೋಗದಿಂದ ಸಿಗಬೇಕಾದ ಹಣದಲ್ಲಿ ತೀವ್ರ ಕಡಿತವಾಗಿದೆ. ನಮ್ಮ ರಾಜ್ಯದಲ್ಲಿ ತೆರಿಗೆಯನ್ನು ರಾಜ್ಯಕ್ಕೆ ಅನುಕೂಲಕ್ಕೆ ತಕ್ಕಂತೆ ವಿಧಿಸುವ ಅಧಿಕಾರ ಜಿಎಸ್ಪಿಯಿಂದ ಇಲ್ಲವಾಗಿದೆ. ಇದಕ್ಕೆ ಪರಿಹಾರ ರೂಪದಲ್ಲಿ ಸಿಗಬೇಕಾದ ಹಣವೂ ಸಿಕ್ಕಿಲ್ಲ. ಇಂತಹ ಪರಿಸ್ಥಿತಿ ಯಾವ ರಾಜ್ಯಕ್ಕೂ ಬರಬಾರದು. ಕರ್ನಾಟಕ ರಾಜ್ಯೋತ್ಸವದ ಈ ದಿನದಂದು ಇದನ್ನು ನೆನಪಿಸಬೇಕಿದೆ. ನಮ್ಮ ಶ್ರಮದ ಪಾಲನ್ನು ಯಾರೋ ಅನ್ಯಾಯವಾಗಿ ಕಸಿದುಕೊಳ್ಳುತ್ತಿದ್ದಾರೆಂಬ ಭಾವನೆ ರಾಜ್ಯಗಳಿಗೆ ಬರಬಾರದು. ಕರ್ನಾಟಕ ಸರಕಾರ ಇದನ್ನು ಪ್ರಶ್ನಿಸಿದೆ. ರಾಜ್ಯದ ಹಿತಾಸಕ್ತಿ ಪರವಾಗಿ ಗಟ್ಟಿಯಾಗಿ ನಿಂತಿದೆ ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ನಗರದಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂದೇಶ ನೀಡಿದರು.
ಸ್ವಾತಂತ್ರ್ಯ ನಂತರ ಕರ್ನಾಟಕ ಜನಸಂಖ್ಯಾ ನಿಯಂತ್ರಣಕ್ಕೆ ಅವಿರತವಾಗಿ ಶ್ರಮಿಸಿ ಯಶಸ್ಸು ಕಂಡಿದೆ. ಆದರೆ ಶಿಕ್ಷಣದಲ್ಲಿ ಹಿಂದುಳಿದಿರುವ ಮತ್ತು ಜನಸಂಖ್ಯಾ ನಿಯಂತ್ರಣವನ್ನು ಸಮರ್ಪಕವಾಗಿ ಅಳವಡಿಸದೆ ಇರುವ ಹಿಂದಿ ಮಾತನಾಡುವ ಉತ್ತಮ ರಾಜ್ಯಗಳಿಗೆ ಹೆಚ್ಚು ಲೋಕಸಭಾ ಸದಸ್ಯರನ್ನು ನೀಡಿ ಕಡಿಮೆ ಜನಸಂಖ್ಯೆ ಇರುವ ದಕ್ಷಿಣ ರಾಜ್ಯಗಳಿಗೆ ಲೋಕಸಭಾ ಸದಸ್ಯರನ್ನು ಕಡಿಮೆ ಮಾಡಿ ಕೇಂದ್ರ ಮಟ್ಟದಲ್ಲಿ ದಕ್ಷಿಣ ಭಾರತ ಹಾಗೂ ಕರ್ನಾಟಕದ ಜನರ ಪ್ರಾತಿನಿಧ್ಯವನ್ನೇ ಇಲ್ಲವಾಗಿಸುವ ಕ್ರಮವನ್ನು ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಅವರು ಹೇಳಿದರು.

ನಮ್ಮ ಕನ್ನಡ ಸಮೃದ್ಧವಾಗಿದೆ ಎಂದು ನಾವು ಸುಮ್ಮನಿರಲಾಗದು. ರಾಜ್ಯವನ್ನು ಸಮೃದ್ಧ ಕರ್ನಾಟಕ ಮಾಡುವುದೇ ಸರಕಾರದ ಗುರಿಯಾಗಿದ್ದು, ಅನೇಕ ಜನಪರ, ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಏಕೀಕೃತ ಕರ್ನಾಟಕ ರಾಜ್ಯ ಉದ್ಭವವಾದಾಗಿನಿಂದಲೂ ಕೇಳಿಬರುತ್ತಿದ್ದ ಪ್ರಾದೇಶಿಕ ಅಸಮತೋಲನದ ಕೂಗನ್ನು ನಿವಾರಿಸಲು ರಾಜ್ಯ ಸರಕಾರ ಶ್ರಮಿಸುತ್ತಿದ್ದು, ಇತ್ತೀಚೆಗೆ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಸೇರಿ ಆ ಭಾಗದ ಪ್ರಗತಿಗೆ ಅನೇಕ ಯೋಜನೆಗಳನ್ನು ಮತ್ತು ಮಹತ್ವದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ದಿಟ್ಟ ಹೆಜ್ಜೆ ಇಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸಂಸದ ಕಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜಾ, ಮೇಯರ್ ಮನೋಜ್ ಕೋಡಿಕಲ್, ದ.ಕ. ಅಪರ ಜಿಲ್ಲಾಧಿಕಾರಿ ಮುಲೈ ಮುಗಿಲನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಪ್ರವೀಣ್ ಕುಮಾರ್ ಆಳ್ವ ಎ.ಸಿ. ವಿನಯರಾಜ್, ನವೀನ್ ಡಿಸೋಜಾ, ಶಾಹುಲ್ ಹಮೀದ್, ಕಳಸದ ದ.ಕ. ಜಿಲ್ಲಾಧ್ಯಕ್ಷ ಎಂ.ಪಿ.ಶ್ರೀನಾಥ್, ಸದಾಶಿವ ಉಳ್ಳಾಲ್, ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರು, ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಸ್ಪ್ಯಾನಿ ಅಲ್ವಾರಿಸ್, ದೇವಿಪ್ರಸಾದ್ ಶೆಟ್ಟಿ, ಡಾ. ಶಿವಪ್ರಕಾಶ ಮತ್ತಿತರರು ಉಪಸ್ಥಿತರಿದ್ದರು.

ಬೆಳಗ್ಗೆ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದ ವರೆಗೆ ಭುವನೇಶ್ವರಿ ದೇವಿಯ ಭಾವಚಿತ್ರ ಹಾಗೂ ಕುವೆಂಪು ಅವರ ಮೂರ್ತಿಯ ಸ್ತಬ್ಧಚಿತ್ರದೊಂದಿಗೆ ಮೆರವಣಿಗೆ ನಡೆಯಿತು.

ಧ್ವಜಾರೋಹಣದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ತೆರೆದ ವಾಹನದಲ್ಲಿ ಕವಾಯತು ವೀಕ್ಷಿಸಿದರು. ಪಥ ಸಂಚಲದಲ್ಲಿ ಉತ್ತಮ ನಿರ್ವಹಣೆ ತೋರಿದ ಸಂತ ತೆರೆಸಾ ಶಾಲೆಯ ಆರ್ಎಸ್ಪಿ ಬಾಲಕ ಬಾಲಕಿಯರ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು.

ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ದ.ಕ. ಜಿಲ್ಲಾಡಳಿತದ ವತಿಯಿಂದ ನೀಡುವ 2024ನೇ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಪತ್ರಕರ್ತ,ಬ್ಯೂರೋ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್. ಸುಕ್ಪಾಲ್ , ಸಂದೀಪ್ , ರಾಜೇಶ್ ರಾವ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರಶಸ್ತಿ ಪ್ರದಾನ ಮಾಡಿದರು.

ಮಂಗಳೂರಿನ ನೆಹರೂ ಮೈದಾನದಲ್ಲಿ ಇಂದು ಬೆಳಗ್ಗೆ ನಡೆದ ರಾಜ್ಯೋತ್ಸವ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ 57 ಸಾಧಕರಿಗೆ ಹಾಗೂ 24 ಸಾಧಕ ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.


Spread the love