ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Spread the love

ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ 2 ನೇ ಬ್ಲಾಕ್ ನಲ್ಲಿ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತ ಆರೋಪಿಯನ್ನು ಕೃಷ್ಣಾಪುರ ನಿವಾಸಿ ಸಫ್ವಾನ್ @ ಚಪ್ಪು, ಪ್ರಾಯ(23) ಎಂದು ಗುರುತಿಸಲಾಗಿದೆ.

2018 ಜೂನ್ 3 ರಂದು ಮದ್ಯಾಹ್ನ 13-15 ಗಂಟೆಗೆ ಮಂಗಳೂರು ಕಾಟಿಪಳ್ಳ 2 ನೇ ಬ್ಲಾಕ್ ನ ಅಬ್ದುಲ್ ಮಜೀದ್ ಎಂಬವರ ಮನೆಯ ಎದುರು ಅವರ ಮೊಬೈಲ್ ಅಂಗಡಿಯ ಕರೆನ್ಸಿಯ ಹಣವನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ದೀಪಕ್ ರಾವ್ (30) ಎಂಬವನು ಆತನ ಬೈಕ್ ನಂಬ್ರ: ಕೆಎ-19-ಇಹೆಚ್-6518 ರಲ್ಲಿ ಅಬ್ದುಲ್ ಮಜೀದ್ ರವರ ಮನೆಗೆ ಬರುತ್ತಿದ್ದ ಸಮಯ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಬಂದ 4 ಮಂದಿ ಏಕಾಎಕಿ ಕಾರಿನಿಂದ ತಲವಾರಿನೊಂದಿಗೆ ಇಳಿದು ದೀಪಕ್ ರಾವ್ ನ ಬೈಕ್ ನ್ನು ಅಡ್ಡಗಟ್ಟಿ ತಲವಾರಿನಿಂದ ಗಂಭೀರ ಹಲ್ಲೆ ನಡೆಸಿದ್ದು, ಗಾಯಗೊಂಡ ದೀಪಕ್ ರಾವ್ ನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಕೃತ್ಯಕ್ಕೆ ಸಂಬಂಧಪಟ್ಟಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವು ದಾಖಲಾಗಿ ತನಿಖೆಯಲ್ಲಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ 12 ಮಂದಿಯನ್ನು ಈಗಾಗಲೇ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ,

ಪ್ರಕರಣದಲ್ಲಿ ಭಾಗಿಯಾಗಿ ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಸಫ್ವಾನ್ @ ಚಪ್ಪು ಎಂಬಾತನನ್ನು ಈ ದಿನ ಮಂಗಳೂರು ನಗರದ ಸುರತ್ಕಲ್ ಮುಕ್ಕ ಬಳಿ ವಶಕ್ಕೆ ಪಡೆದುಕೊಂಡಿರುತ್ತಾರೆ. ಈತನು ಈ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ರಿಜ್ವಾನ್ @ ರಿಜ್ಜು ಎಂಬಾತನ ಸಹೋದರನಾಗಿರುತ್ತಾನೆ. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಪ್ರಕರಣದ ತನಿಖಾಧಿಕಾರಿಯವರಾದ ಶ್ರೀ ಮಂಜುನಾಥ ಶೆಟ್ಟಿ, ಎಸಿಪಿ, ಸಂಚಾರ ಉಪವಿಭಾಗ ರವರಿಗೆ ಹಸ್ತಾಂತರಿಸಲಾಗಿದೆ.

ಆರೋಪಿಯ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐಯವರಾದ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.


Spread the love