Home Mangalorean News Kannada News ದೀಪೋತ್ಸವದಲ್ಲಿ ಜನರ ಲಕ್ಷ್ಯ ಸೆಳೆವ ವೇಷಧಾರಿ

ದೀಪೋತ್ಸವದಲ್ಲಿ ಜನರ ಲಕ್ಷ್ಯ ಸೆಳೆವ ವೇಷಧಾರಿ

Spread the love

ದೀಪೋತ್ಸವದಲ್ಲಿ ಜನರ ಲಕ್ಷ್ಯ ಸೆಳೆವ ವೇಷಧಾರಿ

ತಲೆಯ ಮೇಲೊಂದು ಹಗ್ಗದ ಟೋಪಿ, ಅದರ ಮೇಲೆ ಮುಳ್ಳುಹಂದಿಯ ಬ್ಲ್ಯಾಕ್ ಆಂಡ್ ವೈಟ್ ಮುಳ್ಳು. ಹೀಗೆ ವಿಭಿನ್ನ ರೀತಿಯಲ್ಲಿ ಧರ್ಮಸ್ಥಳದ ದೀಪೋತ್ಸವದ ರಥಬೀದಿಯಲ್ಲಿ ತಿರುಗಾಡುತ್ತಾ ಎಲ್ಲರ ಗಮನ ಸೆಳೆಯುತ್ತಿರುವವರು ಚಿತ್ರದುರ್ಗದ ಉಮೇಶ್ ಇಟಗಿ.

1983ರಲ್ಲಿ ಹತ್ತನೇ ತರಗತಿಯಲ್ಲಿ ಕನ್ನಡವೊಂದನ್ನು ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ನಪಾಸಾದ ಉಮೇಶ್ ಬದುಕು ಕಟ್ಟಿಕೊಂಡದ್ದು ಇಲೆಕ್ಟ್ರೀಷಿಯನ್ ಉದ್ಯೋಗದಿಂದ. ಮೊದಲಿನಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಇವರು ತನ್ನನ್ನು ಹವ್ಯಾಸಿ ಕಲೆಗಾರನಾಗಿ ಗುರುತಿಸಿಕೊಳ್ಳುವ ತುಡಿತದಲ್ಲಿದ್ದವರು.

veshadhari-1

ಸಾಮಾನ್ಯ ಕಣ್ಣಿಗೆ ಕಾಣುವ ವಸ್ತುಗಳು ಗಮನಸೆಳೆದಲ್ಲಿ ಅದನ್ನು ದೇಹದ ಮೇಲೆ ಹಾಕುವ ಅಭ್ಯಾಸವನ್ನು ಕ್ರಮೇಣ ರೂಢಿಸಿಕೊಂಡರು. ಮುಂದೆ ಅದೇ ಹವ್ಯಾಸವಾಗಿ ಮುಂದುವರೆದು ತಾವು ಭೇಟಿ ನೀಡುವ ಸ್ಥಳದಲ್ಲೆಲ್ಲಾ ವಿಭಿನ್ನ ರೀತಿಯಲ್ಲಿ ಗುರುತಿಸಿಕೊಳ್ಳಲು ಪ್ರಾರಂಭಿಸಿದರು.

ವೃತ್ತಿಬದುಕು ಒಂದೆಡೆಯಾದರೆ ದೇಶ ಸುತ್ತುವ ಅತೀವ ಆಕಾಂಕ್ಷೆ ಇನ್ನೊಂದೆಡೆ. ಇದೇ ಉದ್ದೇಶದಿಂದಾಗಿ ದೆಹಲಿಯಿಂದ ಕನ್ಯಾಕುಮಾರಿಯವರೆಗೂ ರೈಲಿನಲ್ಲಿ ಪ್ರಯಾಣ ಆರಂಭಿಸಿದರು. ಎಲ್ಲಿ ವಿಶೇಷ ಕಾರ್ಯಕ್ರಮಗಳಿರುತ್ತವೆಯೋ ಅಲ್ಲಿ ವಿಭಿನ್ನ ಕಾಸ್ಟ್ಯೂಮ್‍ನೊಂದಿಗೆ ಪಾಲ್ಗೊಂಡು ತಮ್ಮ ಹವ್ಯಾsಸಿ ಬದುಕಿನ ಪಯಣವನ್ನು ಮುಂದುವರೆಸುತ್ತಿದ್ದಾರೆ. ಇವರ ಈ ಆಸಕ್ತಿಯ ಕುರಿತಾದಂತೆ ಹಲವು ಕಾರ್ಯಕ್ರಮಗಳು ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿವೆ ಎಂಬ ಖುಷಿ ಉಮೇಶರದ್ದು.

ಹಗ್ಗದಲ್ಲೇ ವಿಭಿನ್ನ ರೀತಿಯಲ್ಲಿ ಟೋಪಿ ಮಾಡಿ ದಿನಕ್ಕೊಂದು ರೀತಿ ಕಾಣಿಸುವ 46ರ ಹರೆಯದ ಇಟಗಿಗೆ ಕನ್ನಡ ಭಾಷೆಯ ಮೇಲೆ ಎಲ್ಲಿಲ್ಲದ ಪ್ರೀತಿ. ನಾನು ಕನ್ನಡವನ್ನಲ್ಲದೇ ಇನ್ನಾವ ಭಾಷೆಯನ್ನೂ ಮಾತನಾಡುವುದಿಲ್ಲ ಎನ್ನುವ ಇವರು ಮೊಬೈಲ್ ಫ್ರೀ ಬದುಕು ಸಾಗಿಸುತ್ತಿದ್ದಾರೆ.

ವರದಿ: ಪವಿತ್ರ ಬಿದ್ಕಲ್‍ಕಟ್ಟೆ, ಚಿತ್ರ: ಪೌಲೋಸ್ ಬಿ


Spread the love

Exit mobile version