ದುಬೈ ಅನಿವಾಸಿ ಕನ್ನಡಿಗರ ಕೆ. ಎಸ್.ಸಿ.ಸಿ ಎರಡನೇ ಖಾಸಗಿ ಚಾರ್ಟೆಡ್ ವಿಮಾನ ಮಂಗಳೂರಿಗೆ ಆಗಮನ
ಮಂಗಳೂರು : ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್ ನ ಎರಡನೇ ಖಾಸಗಿ ಚಾರ್ಟೆಡ್ ವಿಮಾನವು ದುಬೈ ಮೂಲದ ಅನಿವಾಸಿ ಕನ್ನಡಿಗರನ್ನು ಹೊತ್ತು ಶಾರ್ಜಾ ವಿಮಾನ ನಿಲ್ದಾಣದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗಿನ ಜಾವ 6:00 ಗಂಟೆಗೆ ಬಂದಿಳಿದಿದೆ.
ಯುಎಇ ಯಲ್ಲಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್(KSCC) ದುಬೈ ಕಮ್ಯೂನಿಟಿ ಡೆವಲಪ್ಮೆಂಟ್ ಅಥೋರಿಟಿಯಲ್ಲಿ ನೋಂದಾಯಿತ ಸಾಮಾಜಿಕ ಸಂಸ್ಥೆಯಾಗಿದ್ದು ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಅನಿವಾಸಿ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.
ಅದರಂತೆ ದ್ವಿತೀಯ ವಿಮಾನವು 18 ಗರ್ಭಿಣಿಯರೂ, 3 ನವಜಾತ ಶಿಶು, 9 ಮಕ್ಕಳೂ, 8 ಹಿರಿಯ ನಾಗರಿಕರೂ, 20 ತುರ್ತು ಚಿಕಿತ್ಸಾ ರೋಗಿಗಳೂ ಒಳಗೊಂಡಂತೆ ಸಂದರ್ಶನ ವಿಸಾದಲ್ಲಿ ಉಳಿದುಕೊಂಡವರೂ, ಉದ್ಯೊಗ ಕಳೆದುಕೊಂಡವರೂ, ತಾಯ್ನಾಡಿನಲ್ಲಿ ಮರಣ ಹೊಂದಿದ ವ್ಯಕ್ತಿಯ ರಕ್ತಸಂಬಂಧಿಕರೂ ಸೇರಿದಂತೆ 171 ಪ್ರಯಾಣಿಕರೊಂದಿಗೆ ಶಾರ್ಜಾ ಮೂಲದ ಏರ್ ಅರೇಬಿಯಾ ವಿಮಾನದ ಮೂಲಕ ಶಾರ್ಜಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 1:00 ಗಂಟೆಗೆ ಹೊರಟಿದ್ದು ಜೂನ್ 27 ರಂದು ಬೆಳಗ್ಗೆ ಸುಮಾರು 6:00 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದೆ.
ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಮಾರ್ಗದರ್ಶನದೊಂದಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ KSCC ಯ ಹೆಲ್ಪ್ ಡೆಸ್ಕ್ ತಂಡವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಮಹಮ್ಮದ್ ಇಸ್ಮಾಯಿಲ್ (ಅಧ್ಯಕ್ಷರು, ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್) ಶಾರ್ಜಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದರು.
ಎಲ್ಲಾ ಪ್ರಯಾಣಿಕರಿಗೂ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೋವಿಡ್ 19 ರಾಪಿಡ್ ಟೆಸ್ಟ್ ನಡೆಸಲಾಗಿದ್ದು ಮಂಗಳೂರಿನ ಮೂರು ಹೋಟೇಲ್ ಗಳಲ್ಲಿ ಕ್ವಾರಂಟೈನ್ ಸೌಲಭ್ಯವನ್ನೂ ಮಾಡಲಾಗಿತ್ತು.
ಈ ಸಂಧರ್ಭದಲ್ಲಿ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೇವೆಗಾಗಿ ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್ ನ ಪದಾಧಿಕಾರಿಗಳಾದ ಇಸ್ಮಾಯಿಲ್, ಜಾವೇದ್, ಸಫ್ವಾನ್ ಸೇರಿದಂತೆ ಸಂಸ್ಥೆಯ ಸ್ವಯಂ ಸೇವಕರು ಉಪಸ್ಥಿತರಿದ್ದರು.
ಅನಿವಾಸಿ ಕನ್ನಡಿಗರಿಗೆ ಚಾರ್ಟೆಡ್ ವಿಮಾನ ಸೌಲಭ್ಯವನ್ನು ಒದಗಿಸಲು ಸಹಕರಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ,ಜಿಲ್ಲಾ ಪೋಲೀಸ್ ಕಮಿಷನರ್, ಸಾಮಾಜಿಕ ಕಾರ್ಯಕರ್ತರಾದ ಉಮರ್ ಯು.ಎಚ್, ಅಥಾವುಲ್ಲಾ ಜೋಕಟ್ಟೆಯವರಿಗೂ ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್ ನ ಪರವಾಗಿ ಕೃತಜ್ಞತೆ ಮತ್ತು ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇವೆ.