Home Mangalorean News Kannada News ದುರ್ಬಲರಿಗೆ ಸರ್ವಸ್ವವನ್ನೂ ತ್ಯಾಗ ಮಾಡಿದ ಕುದ್ಮುಲ್ ರಂಗರಾವ್: ಮೇಯರ್

ದುರ್ಬಲರಿಗೆ ಸರ್ವಸ್ವವನ್ನೂ ತ್ಯಾಗ ಮಾಡಿದ ಕುದ್ಮುಲ್ ರಂಗರಾವ್: ಮೇಯರ್

Spread the love

ಮ0ಗಳೂರು: ದೀನದಲಿತರಿಗಾಗಿ ತನ್ನ ಸೇವೆಯನ್ನು ಮುಡಿಪಾಗಿಟ್ಟು, ಸರ್ವಸ್ವವನ್ನೂ ತ್ಯಾಗ ಮಾಡಿದ ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಆಗಿದ್ದಾರೆ ಎಂದು ಮೇಯರ್ ಹರಿನಾಥ್ ಹೇಳಿದ್ದಾರೆ.

image006kudmul-rangarao-birthday-20160628-006

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕುದ್ಮುಲ್ ರಂಗರಾವ್ ಅವರ 157ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಲಿತರು ಸಮಾಜದಲ್ಲಿ ಅತ್ಯಂತ ಕೆಳಸ್ತರದಲ್ಲಿ ಬದುಕು ಸಾಗಿಸುತ್ತಿದ್ದ ಕಾಲದಲ್ಲಿ ಕುದ್ಮುಲ್ ರಂಗರಾವ್ ಅವರು ಸಮಾಜದಲ್ಲಿ ಶೋಷಿತ ವರ್ಗದ ಶ್ರೇಯೋಭಿವೃದ್ಧಿಗಾಗಿ ಸಮರ್ಪಿಸುವುದರ ಮೂಲಕ ಅಪ್ರತಿಮ ಸಾಧಕರಾಗಿದ್ದಾರೆ. ಅವರ ಸೇವೆಯು ನಮಗೆ ಮಾದರಿಯಾಗಬೇಕು. ಅವರ ಹೆಸರು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರಪಾಲಿಕೆಯು ಸೂಕ್ತ ನಿರ್ಧಾರವನ್ನು ಶೀಘ್ರವೇ ಕೈಗೊಳ್ಳಲಿದೆ ಎಂದು ಮೇಯರ್ ತಿಳಿಸಿದರು.
ಕುದ್ಮುಲ್ ರಂಗರಾವ್ ಅವರ ಬಗ್ಗೆ ಉಪನ್ಯಾಸ ನೀಡಿದ ನಿವೃತ್ತ ಸಾರಿಗೆ ಅಧಿಕಾರಿ ಮುಗುಳವಳ್ಳಿ ಕೇಶವ ಧರಣಿ, ಮೈಸೂರು ಪ್ರಾಂತ್ಯದಲ್ಲಿ ಮೀಸಲಾತಿ ವ್ಯವಸ್ಥೆ ಜಾರಿಗೆ ಬರಲು ಮೂಲ ಪ್ರೇರಕರಾಗಿದ್ದವರು ಕುದ್ಮುಲ್ ರಂಗರಾವ್. ಶಿಕ್ಷಣದಿಂದಲೇ ದಲಿತರ ಉದ್ಧಾರ ಸಾಧ್ಯ ಎಂಬುದನ್ನು ಮನಗಂಡಿದ್ದ ಅವರು, ಇದಕ್ಕಾಗಿ ಕರಾವಳಿಯಲ್ಲಿ 20 ಶಾಲೆಗಳನ್ನು ದಲಿತರಿಗಾಗಿ ಸ್ಥಾಪಿಸಿದ್ದರು. ಈ ಮೂಲಕ ದಲಿತರಲ್ಲಿ ಸ್ವಾಭಿಮಾನ ಮತ್ತು ಘನತೆ ಮೂಡಿಸಿದರು. ವಿಧವಾ ವಿವಾಹವನ್ನು ಪ್ರೋತ್ಸಾಹಿಸಿ, ಸಮಾಜ ಸುಧಾರಕರಾದರು. ತನ್ನ ಸೇವೆಗೆ ಸ್ವಜಾತಿ ಬಾಂಧವರಿಂದಲೇ ವಿರೋಧ ಬಂದರೂ, ಅದನ್ನು ಲೆಕ್ಕಿಸದೆ ಮುನ್ನೆಡೆ ಕುದ್ಮುಲ್ ರಂಗರಾವ್, ಜಿಲ್ಲೆಯಲ್ಲಿ ದಲಿತರಿಗೆ ಗೌರವದ ಸ್ಥಾನ ಮೂಡಲು ಕಾರಣರಾದರು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಆಸಕ್ತಿಯಿಂದ ಕುದ್ಮುಲ್ ರಂಗರಾವ್ ಅವರ ಜಯಂತಿ ಕಾರ್ಯಕ್ರಮ ನಡೆಯುತ್ತಿದೆ. ಕುದ್ಮುಲ್ ಅವರು ಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹಧನ ನೀಡುವಿಕೆಯಂತಹ ಕಾರ್ಯಕ್ರಮಗಳು ಇಂದು ರಾಜ್ಯ ಸರಕಾರ ನೀಡುತ್ತಿರುವ ಪ್ರೋತ್ಸಾಹಧನ ನೀಡಿಕೆ ಕಾರ್ಯಕ್ರಮಕ್ಕೆ ಮಾದರಿಯಾಗಿದೆ ಎಂದರು.
ಸಭೆಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಮಾತನಾಡಿದರು. ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್. ಉಮೇಶ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ. ಜಿ. ಸಂತೋಷ್ ಕುಮಾರ್ ಸ್ವಾಗತಿಸಿದರು.


Spread the love

Exit mobile version