ದುರ್ಬಲ ಗೋವುಗಳನ್ನು ರಕ್ಷಿಸುವುದು ಪುಣ್ಯದ ಕೆಲಸ: ಗಂಟಿಧಾಮ ಉದ್ಘಾಟಿಸಿ ವಿದ್ಯಾಸಾಗರ್ ಅಭಿಮತ
ಕುಂದಾಪುರ: ಗೋವುಗಳು ಸಂತೋಷವಾಗಿದ್ದರೆ ಎಲ್ಲಾ ದೇವತೆಗಳು ಸಂತೋಷಪಡುತ್ತಾರೆ. ವೇದಗಳಲ್ಲಿ ಗೋವನ್ನು ಕೊಲ್ಲಬಾರದು ಎನ್ನುವ ನಿಯಮಗಳಿವೆ. ಗೋವುಗಳು ಜಗತ್ತಿನ ಮಾತೆಗಳು. ದುರ್ಬಲ ಗೋವುಗಳನ್ನು ರಕ್ಷಿಸುವ ಕಾರ್ಯ ಪುಣ್ಯದ ಕೆಲಸ ಎಂದು ಹೃದಯ ವಿದ್ಯಾ ಫೌಂಡೇಶನ್ ನ ಅಧ್ಯಕ್ಷರಾದ ವಿದ್ಯಾಸಾಗರ್ ಅಭಿಮತ ವ್ಯಕ್ತಪಡಿಸಿದರು.
ಶನಿವಾರ ಬೈಂದೂರಿನ ವಸ್ರೆ-ಮೈಕಳದಲ್ಲಿ ನಿರ್ಮಾಣಗೊಂಡ ಅಶಕ್ತ ಗೋವುಗಳ ಪಾಲನಾ ಕೇಂದ್ರ ಗಂಟಿಹೊಳೆಯ ಗಂಟಿಧಾಮವನ್ನು ಗೋಪೂಜೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಶಾಸಕ ಗುರುರಾಜ್ ಗಂಟಿಹೊಳೆ ಓರ್ವ ಜನಪ್ರತಿನಿಧಿಯಾಗಿ ಮಾತ್ರವಲ್ಲದೇ ಈ ದೇಶದ ಹಿಂದೂತ್ವ, ಧರ್ಮ, ಸಂಸ್ಕೃತಿಯ ರಕ್ಷಣೆಯ ಜೊತೆಗೆ ಗೋವಿನ ರಕ್ಷಣೆಯನ್ನು ಮಾಡುತ್ತೇನೆ ಎಂದು ತೋರಿಸಿಕೊಟ್ಟಿದ್ದಾರೆ. ಜಗತ್ತಿನಾದ್ಯಂತ ಗೋವನ್ನು ಪ್ರಾಣಿ ಎಂದು ಕರೆದರೆ ನಾವು ಗೋ ಮಾತೆ ಎನ್ನುತ್ತೇವೆ. ಸಂಪ್ರದಾಯ, ಪರಂಪರೆಗಳಿಗೆ ಆಧಾರ ನಮ್ಮ ದೇಶದ ಗ್ರಾಮಗಳು. ಗ್ರಾಮಗಳಿಗೆ ಆಧಾರ ನಮ್ಮ ದೇಶದ ಕೃಷಿ. ಕೃಷಿಯನ್ನು ನೋಡಿಕೊಳ್ಳುವವರು ರೈತರು. ರೈತರಿಗೆ ಆಧಾರ ಗೋವು. ಹೀಗಾಗಿ ಗೋವು ಇದ್ದ ಕಾರಣದಿಂದಾಗಿ ನಮ್ಮ ದೇಶದಲ್ಲಿ ಗ್ರಾಮಗಳು ಜೀವಂತವಾಗಿದೆ. ಗೋವು ನಾಶವಾದರೆ ಈ ದೇಶದಲ್ಲಿ ಕೃಷಿ ಉಳಿಯೋದಿಲ್ಲ. ಗೋವನ್ನು ಉಳಿಸುವ ಕಾರ್ಯ ನಾವೆಲ್ಲಾ ಸೇರಿ ಮಾಡೋಣ ಎಂದು ಕರೆ ನೀಡಿದರು.
ನಮ್ಮ ದೇಶದಲ್ಲಿ ಗೋವಿಗೆ ವಿಶೇಷವಾದ ಮಹತ್ವನ್ನು ಕೊಟ್ಟಿದ್ದೇವೆ. ಕೇವಲ ಹಾಲು ಕೊಡುವುದಕ್ಕಾಗಿ ಗೋವು ನಮಗೆ ಮಾತೆಯಲ್ಲ. ಆಧ್ಯಾತ್ಮ ಚಿಂತನೆಗಳು, ಹೋಮ-ಹವನ, ಧಾರ್ಮಿಕ ಕಾರ್ಯಕ್ರಮಗಳು ಆಗಬೇಕಾದರೆ ಗೋವು ಇರಲೇಬೇಕು. ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರವಲ್ಲದೇ ಗೋಮೂತ್ರದ ಮೂಲಕ ರೋಗಿಗಳಿಗೆ ಔಷಧವನ್ನು ಹುಡುಕುವ ಕೆಲಸಗಳು ಆಗುತ್ತಿವೆ. ಹೀಗಾಗಿ ಗೋವು ಪೂಜನೀಯ ಮಾತ್ರವಲ್ಲದೇ ನಮ್ಮ ನಿತ್ಯ ಜೀವನದಲ್ಲಿಯೂ ಗೋವಿನ ಪಾತ್ರ ಮಹತ್ವವಾಗಿದೆ. ಗೋವು ಯೋಗಿಗಳಿಗೂ, ರೋಗಿಗಳಿಗೂ ಆಧಾರವಾಗಿದೆ ಎಂದರು.
ಅಪಘಾತಕ್ಕೀಡಾದ ಗೋವುಗಳಿಗೆ ಪಾಲನಾಕೇಂದ್ರ ತೆರದಿರುವುದು ಶ್ರೇಷ್ಠ ಕಾರ್ಯ. ಅವಿಭಜಿತ ದ.ಕ ಜಿಲ್ಲೆಗಳಲ್ಲಿ ಸಾಕಷ್ಟು ಗೋಶಾಲೆಗಳಿವೆ. ಆದರೆ ರಸ್ತೆಯಲ್ಲಿ ಅಪಘಾತಗೊಂಡಂತಹ ಗೋವುಗಳ ರಕ್ಷಣೆಯ ಬಗ್ಗೆ ಯೋಚನೆ ಮಾಡಿರುವುದು ಒಳ್ಳೆಯ ಕಾರ್ಯ. ಅದಕ್ಕಾಗಿ ತಮ್ಮ ತಂದೆಯ ಜಮೀನನ್ನೇ ಬಿಟ್ಟುಕೊಟ್ಟ ಗಂಟಿಹೊಳೆಯವರ ಕಾರ್ಯ ದೇವರು ಕೂಡ ಮೆಚ್ಚುತ್ತಾನೆ ಎಂದರು.
ದೇಶದಲ್ಲಿ ನಿರಂತರವಾಗಿ ಗೋವುಗಳ ಹತ್ಯೆಯಾಗುತ್ತಿದೆ. ಗೋವುಗಳು ಕಟುಕರ ಕೈ ಸೇರುತ್ತಿದೆ. ಬೈಂದೂರಿನಲ್ಲೂ ಗೋವಿನ ತಲೆ ಕಡಿದು ಕಸದ ರಾಶಿಯಲ್ಲಿ ಎಸೆಯುತ್ತಿದ್ದಾರೆ. ಇದರ ವಿರುದ್ದ ನಾವು ಮಾತನಾಡುತ್ತಿಲ್ಲ. ಇಂತಹ ಕೃತ್ಯಗಳನ್ನು ನಾವ್ಯಾರು ಸಹಿಸಬಾರದು. ನಮ್ಮ ಕಣ್ಣೆದುರೇ ಈ ರೀತಿಯ ಘಟನೆಗಳಾದಾಗ ನಾವು ಸುಮ್ಮನ್ನಿದ್ದರೆ ನಾವು ಕೂಡ ಗೋಹತ್ಯೆಗೆ ಬೆಂಬಲ ಕೊಟ್ಟಂತಾಗುತ್ತದೆ. ಹಾಲು ಕೊಡುವುದು ಪ್ರಕೃತಿ, ಗೋವನ್ನು ಪೂಜಿಸುವುದು ಸಂಸ್ಕೃತಿ, ಗೋವನ್ನು ಹತ್ಯೆ ಮಾಡುವುದು ವಿಕೃತಿ. ಅಂತಹ ವಿಕೃತಿಯನ್ನು ಹಿಮ್ಮೆಟ್ಟಿಸಿದ್ದರೆ ಉಳಿಗಾಲವಿಲ್ಲ ಎಂದರು.
ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಬೈಂದೂರು ಕ್ಷೇತ್ರದಲ್ಲಿ 846 ಎಕರೆ ಗೋಮಾಳ ಜಾಗವಿದೆ. ಇದರ ಶೇಕಡಾ ಅರ್ಧದಷ್ಟಾದರೂ ಜಾಗವನ್ನು ಉಳಿಸಲು ಅನೇಕ ಸಭೆಗಳನ್ನು ಕರೆದರೂ ತುದಿ ಮುಟ್ಟಿಸಲು ಸಾಧ್ಯವಾಗಿಲ್ಲ. ಕೆಲವು ಕಡೆಗಳಲ್ಲಿ ಗೋಮಾಳ ಜಾಗವನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದ್ದೇವೆ. ಪ್ರತೀ ಗ್ರಾಮದ ಗೋಮಾಳದಲ್ಲಿ ಗೋಶಾಲೆ ನಿರ್ಮಿಸಿದರೆ ಗೋವುಗಳ ಅಪಘಾತದ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
ಇದೇ ವೇಳೆ ಗಂಟಿಧಾಮ ಗೋವು ಪಾಲನಾ ಕೇಂದ್ರದ ನಿರ್ಮಾಣಕ್ಕೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು.
ಸಮೃದ್ದ ಬೈಂದೂರಿನ ಅಧ್ಯಕ್ಷರಾದ ಬಿ.ಎಸ್ ಸುರೇಶ್ ಶೆಟ್ಟಿ, ಕೃಷಿಪಂಡಿತ ಪುರಸ್ಕೃತ ತಿಮ್ಮಣ್ಣ ಹಾಲಂಬೇರು, ಪಶು ವೈದ್ಯಾಧಿಕಾರಿ ನಾಗರಾಜ್ ಉಪಸ್ಥಿತರಿದ್ದರು.
ಭಾಗೀರಥಿ ಮಯ್ಯ ಪ್ರಾರ್ಥಿಸಿದರು. ಗೋಪಾಲ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್, ಗಜಾನನ ಹೊಳ್ಳರಡಿ ನಿರೂಪಿಸಿದರು.