ದುರ್ಬಲ ವರ್ಗದ ಹಿತಕ್ಕಾಗಿ ಜಾತಿ ಜನಗಣತಿ : ರಮಾನಾಥ ರೈ
ಮಂಗಳೂರು: ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸುವುದು ಕಾಂಗ್ರೆಸ್ ಪಕ್ಷದ ನಿಲುವು. ಅದರಂತೆ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಜಾತಿ ಜನಗಣತಿ ಜಾರಿಗೆ ಮುಂದಾಗಿದೆ. ಇದಕ್ಕೆ ವಿಪಕ್ಷಗಳಿಂದ ವಿರೋಧ ಸರಿಯಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಆಶಯ ಪ್ರತಿಬಿಂಬಿಸುವ ನಿಟ್ಟಿನಲ್ಲಿ ಕಾಂತರಾಜು ಮತ್ತು ಜಯಪ್ರಕಾಶ್ ಹೆಗ್ಡೆಯವರ ಜಾತಿ ಜನಗಣತಿ ಜಾರಿಗೆ ಪ್ರಯತ್ನ ನಡೆಯುತ್ತಿದೆ. ವರದಿಯ ದತ್ತಾಂಶಗಳಲ್ಲಿ ನ್ಯೂನ್ಯತೆ ಇದ್ದಲ್ಲಿ ಅದನ್ನು ಸರಿಪಡಿಸಬಹುದು. ಆದರೆ ವರದಿ ಜಾರಿಯೇ ಬೇಡವೆನ್ನುವುದು ಸಮಂಜಸವಲ್ಲ ಎಂದವರು ಹೇಳಿದರು.
ಜಯಪ್ರಕಾಶ್ ಹೆಗ್ಡೆ ಆಯೋಗವನ್ನು ಬಿಜೆಪಿ ಇದ್ದಾಗ ನೇಮಕ ಮಾಡಲಾಗಿತ್ತು. ದತ್ತಾಂಶ ಸರಿ ಇಲ್ಲ ಎಂಬ ವಾದಕ್ಕೆ ಈಗಾಗಲೇ ಆಯೋಗದ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ. ಬಹುಜನರಿಗೆ ಅನುಕೂಲ ಆಗುವುದು, ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕಾಗಿರುವುದು ಅತೀ ಅಗತ್ಯ ಎಂದು ಅವರು ಹೇಳಿದರು.
ಪಕ್ಷದ ಸಚಿವರಿಂದಲೇ ವರದಿಗೆ ವಿರೋಧವಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸದ ಅವರು, ಪಕ್ಷದ ನಿರ್ಧಾರಕ್ಕಿಂತ ಯಾವುದೇ ವ್ಯಕ್ತಿ ದೊಡ್ಡವರಲ್ಲ. ಪ್ರಣಾಳಿಕೆಯ ಭರವಸೆಯಂತೆ ವರದಿ ಜಾರಿಗೊಳಿಸಲಾಗುತ್ತಿದ್ದು, ಒಳ ಮೀಸಲಾತಿಗೂ ಸಂಬಂಧಿಸಿ ಸಮಿತಿ ರಚನೆಯಾಗಿದೆ ಮುಂದೆ ಆ ಬಗ್ಗೆಯೂ ಚರ್ಚೆಯಾಗಲಿದೆ ಎಂದರು.
ರಾಜೀವ್ ಗಾಂಧಿಯವರು ಅಧಿಕಾರ ವಿಕೇಂದ್ರೀಕರಣದ ನಿಟ್ಟಿನಲ್ಲಿ 73-74ರಲ್ಲಿ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿಗೂ ವಿಪಕ್ಷದಿಂದ ವಿರೋಧ ವ್ಯಕ್ತವಾಗಿತ್ತು. ಭೂ ಮಸೂದೆ, ಋಣಮುಕ್ತ ಕಾಯಿದೆ, ಜೀತ ಪದ್ಧತಿ, ಬ್ಯಾಂಕ್ ರಾಷ್ಟ್ರೀಕರಣ ಸಂದರ್ಭದಲ್ಲಿಯೂ ವಿರೋಧ ವ್ಯಕ್ತವಾಗಿದ್ದರೂ, ದುರ್ಬಲ ವರ್ಗಗಳಿಗೆ ಉಪಯೋಗುವಾಗುವ ಕಾಯ್ದೆಗಳನ್ನು ಕಾಂಗ್ರೆಸ್ ಒತ್ತು ನೀಡಿ ಜಾರಿಗೊಳಿಸಿದೆ ಎಂದು ಅವರು ಹೇಳಿದರು.
ಜಿಪಂ, ತಾಪಂ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಸರಕಾರ ಆಸಕ್ತಿ ತೋರುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಪಂ ತಾಪಂಗೆ ನಾಲ್ಕು ವರ್ಷಗಳ ವಿಳಂಬ ಮಾಡಿದ್ದು, ಹಿಂದಿನ ಬಿಜೆಪಿ ಸರಕಾರ. ಬಿಬಿಎಂಪಿ ಚುನಾವಣೆಗೂ ಬಿಜೆಪಿ ಆಸಕ್ತಿ ತೋರದ ಕಾರಣ ತಡವಾಗಿದೆ. ಇದೀಗ ಸರಕಾರ ಕ್ರಮ ವಹಿಸುತ್ತಿದ್ದು, ಮನಪಾ ಚುನಾವಣೆ ಯಾವುದೇ ಸಂದರ್ಭದಲ್ಲಾದರೂ ಘೋಷಣೆಯಾಗಬಹುದು ಎಂದು ಹೇಳಿದರು.
ಗೋಷ್ಟಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಇಬ್ರಾಹೀಂ, ಸುಖಿಂದರ್, ಅಬ್ಬಾಸ್ ಅಲಿ, ವಿಕಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.