Home Mangalorean News Kannada News ದೆಹಲಿ: ಪ್ರಥಮ ಕನ್ನಡ ಭಾರತಿ ಪ್ರಶಸ್ತಿ ಶ್ರೀ ಎಂ.ವಿ. ನಾರಾಯಣ ರಾವ್ರವರಿಗೆ ವಿತರಣೆ

ದೆಹಲಿ: ಪ್ರಥಮ ಕನ್ನಡ ಭಾರತಿ ಪ್ರಶಸ್ತಿ ಶ್ರೀ ಎಂ.ವಿ. ನಾರಾಯಣ ರಾವ್ರವರಿಗೆ ವಿತರಣೆ

Spread the love

“ದೆಹಲಿಯಂತಹ ದೂರದ ಊರಿನಲ್ಲಿ ‘ಕನ್ನಡ ಭಾರತಿ’ ಎಂಬ ಹವ್ಯಾಸಿ ರಂಗ ಚಟುವಟಿಕೆಗಳ ಕೂಟವನ್ನು ಕಟ್ಟಿ ಹಲವಾರು ಉತ್ತಮ ನಾಟಕಗಳಲ್ಲಿ ನಟಿಸಿ, ಕನ್ನಡದ ಕಂಪನ್ನು ಬೀರಿದ ಹಿರಿಯ ಸಜ್ಜನಿ, ನಟ ಎಂ.ವಿ. ನಾರಾಯಣ ರಾವ್ ಅವರಿಗೆ ದೆಹಲಿ ಕರ್ನಾಟಕ ಸಂಘವು ಪ್ರಥಮ ಕನ್ನಡ ಭಾರತಿ ಪ್ರಶಸ್ತಿ ನೀಡಿ ಗೌರವಿಸುವಂತಹ ಒಂದು ಸೃಜನಶೀಲ ಕಾರ್ಯ ಮಾಡಿರುವುದು ನನಗೆ ಅತ್ಯಂತ ಹೆಮ್ಮೆ ಮತ್ತು ಸಂಭ್ರಮ ತಂದಿದೆ ಎಂದು ಪ್ರಶಸ್ತಿ ಪ್ರದಾನ ಮಾಡಿದ ಸುಪ್ರಸಿದ್ಧ ಚಲನಚಿತ್ರ ನಿರ್ದೇಶಕರು, ಶ್ರೇಷ್ಠ ರಂಗ ತಂತ್ರಜ್ಞರಾಗಿರುವ ಹಾಗು ಕನ್ನಡ ಭಾರತಿ ಸ್ಥಾಪಕ ಅಧ್ಯಕ್ಷರೂ ಆಗಿರುವ ಪದ್ಮಶ್ರೀ ಶ್ರೀ ಎಂ.ಎಸ್. ಸತ್ಯು ಅವರು ನುಡಿದರು”.

aIMG_9209

1960ರ ದಶಕದಲ್ಲಿ ಕೇಂದ್ರ ಸರ್ಕಾರದ ಉದ್ಯೋಗದ ನಿಮಿತ್ತ ದೆಹಲಿಗೆ ಬಂದ ಶ್ರೀ ಎಂ.ವಿ. ನಾರಾಯಣ ರಾವ್ರವರು ದೆಹಲಿಯಲ್ಲಿದ್ದ ಷಾ. ಬಾಲುರಾವ್, ಯು. ಪ್ರಭಾಕರ ರಾವ್, ಎಚ್.ಎಸ್. ಕುಲಕರ್ಣಿ, ಭೀಮರಾವ್ ಮುರಗೋಡ, ಜ್ಯೋತ್ಸ್ನಾರಾವ್, ಎಂ.ವಿ. ಸುಬ್ಬಯ್ಯ, ಡಾ. ಧೀರೇಂದ್ರ ರಾವ್, ಕೆ. ಶ್ರೀನಿವಾಸ ರಾವ್, ಡಿ.ರಮೇಶ್, ವಿ. ರಾಮಮೂರ್ತಿ ಹತ್ತಾರು ಸದಭಿರುಚಿಯ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡ ಭಾರತಿ ಮೂಲಕ ಹಲವಾರು ಶ್ರೇಷ್ಠ ನಾಟಕಗಳನ್ನು ದೆಹಲಿಯ ಕನ್ನಡಿಗರಿಗೆ ನೀಡಿದರು. ಇವರ ಪ್ರಯತ್ನಕ್ಕೆ ಶ್ರೇಷ್ಠ ರಂಗ ನಿರ್ದೇಶಕರುಗಳಾದ ಬಿ.ವಿ. ಕಾರಂತ, ಎಂ.ಎಸ್. ಸತ್ಯು, ಯು. ಪ್ರಭಾಕರ ರಾವ್ ನಿರ್ದೇಶನ ಮಾಡಿದರೆ ನಾಟಕಗಳ ವಸ್ತು ಗಿರೀಶ್ ಕಾರ್ನಾಡ, ಶ್ರೀರಂಗ, ಸಂಸ, ಕೈಲಾಸಂ, ಜಿ.ಬಿ. ಜೋಷಿ, ಆನಂದ ಮೊದಲಾದ ಹೆಸರಾಂತ ಕನ್ನಡ ನಾಟಕಕಾರಿಂದ ಆಯ್ದುಕೊಂಡರು. ಜೊತೆಗೆ ವಿಜಯ್ ತೆಂಡೂಲ್ಕರ್, ಲಲಿತಾ ಸೆಹಗಲ್, ಮೋಹನ್ ರಾಕೇಶ್ ಮೊದಲಾದವರ ಹಿಂದಿ ನಾಟಕಗಳ ಕನ್ನಡ ರೂಪಾಂತರವನ್ನು ರಂಗಪ್ರಯೋಗಕ್ಕೆ ಒಳಪಡಿಸಿದರು. ಕಾರ್ನಾಡರ ತುಘಲಕ್, ಡಿ.ವಿ.ಜಿ. ಅವರ ಮ್ಯಾಕ್ಬೆತ್, ದಾರಿ ಯಾವುದಯ್ಯ ವೈಕುಂಠಕ್ಕೆ, ವಿಜಯ ನಾರಸಿಂಹ, ಮೋಟೇರಾಮನ ಸತ್ಯಾಗ್ರಹ, ಮುದ್ರಾರಾಕ್ಷಸ, ರಂಗಭಾರತ, ಯಯಾತಿ, ಹಯವದನ, ಕುರಿ, ಇಂತಹ ಅನೇಕ ಅದ್ಭುತ ನಾಟಕಗಳನ್ನು ಕನ್ನಡ ಭಾರತಿ ಪ್ರಸ್ತುತಪಡಿಸಿದೆ.

ಕನ್ನಡ ಭಾರತಿ ಪ್ರಥಮ ಪ್ರಶಸ್ತಿಯನ್ನು ಸ್ವೀಕರಿಸಿದ ಶ್ರೀ ಎಂ.ವಿ. ನಾರಾಯಣ ರಾವ್ ಅವರು ‘ಈ ಪ್ರಶಸ್ತಿ ಕನ್ನಡ ಭಾರತಿಯ ಪ್ರತಿಯೊಬ್ಬ ಸದಸ್ಯನಿಗೂ ಸಂದಿದ್ದಾಗಿದ್ದು ಅವರೆಲ್ಲರ ಪ್ರತಿನಿಧಿಯಾಗಿ ನಾನಿದನ್ನು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸುತ್ತಿದ್ದೇನೆ’ ಎಂದರು. ತಮ್ಮ 1960ರ ದಶಕದಿಂದ ಇಂದಿನವರೆಗೆ ನಡೆದು ಬಂದ ರಂಗದ ಮೇಲಿನ ಮತ್ತು ರಂಗದ ಹಿಂದಿನ ಜೀವನ, ಕನ್ನಡ ಭಾರತಿ ಬೆಳೆದು ಬಂದ ಸ್ಥಿತಿಗತಿಗಳು ಹಾಗೂ ಹಲವಾರು ಒಡನಾಡಿಗಳು ತೋರಿದ ಸ್ನೇಹ, ವಿಶ್ವಾಸ ಮತ್ತು ಕಟುಬದ್ಧತೆಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ರಾವ್ ಅವರು ‘ಈ ಪ್ರಶಸ್ತಿಯ ಮೊತ್ತವನ್ನು ಕನ್ನಡ ಭಾರತಿ’ಗೆ ನೀಡಲಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನಾಟಕಕಾರ, ಕವಿ ಮತ್ತು ವಿದ್ವಾಂಸ ಪ್ರೊ. ಎಚ್.ಎಸ್. ಶಿವಪ್ರಕಾಶ್ರವರು ಮಾತನಾಡುತ್ತ ‘ನಾಟಕಗಳ ಮೂಲಕ ನೈಜ ಜೀವನದ ಅನುಭವಗಳನ್ನು ಜೀವಂತವಾಗಿ ಪ್ರೇಕ್ಷಕರಿಗೆ ತೋರಿಸುವ ಅತ್ಯಂತ ಕಷ್ಟದ ಕೆಲಸವನ್ನು ದೂರದ ದೆಹಲಿಯಲ್ಲಿ ಅಂದಿನ ದಿನಗಳಲ್ಲಿ ಶ್ರಮವಹಿಸಿ ದುಡಿದು ಮಾಡಿದ ನಾರಾಯಣ ರಾವ್ ಅವರನ್ನು ಗೌರವಿಸುವುದರ ಮೂಲಕ ದೆಹಲಿ ಕರ್ನಾಟಕ ಸಂಘವು ತನ್ನ ಸಾಂಸ್ಕೃತಿಕ ಚರಿತ್ರೆಯ ಪುಟಗಳಲ್ಲಿ ಒಂದು ಹೊಸ ಅಧ್ಯಾಯವನ್ನೇ ಆರಂಭಿಸಿದೆ ಎಂದರು’.

ಕನ್ನಡ ಭಾರತಿ ಪ್ರಶಸ್ತಿ, ದೆಹಲಿ ಕರ್ನಾಟಕ ಸಂಘವು ಕನ್ನಡ ಭಾರತಿಯು ದೆಹಲಿ ಹಾಗು ದೇಶದ ಕನ್ನಡ ರಂಗಭೂಮಿಗೆ ನೀಡಿದ ವಿಶೇಷ ಕೊಡುಗೆಯನ್ನು ಗುರುತಿಸಿ ಈ ಚಟುವಟಿಕೆಗಳಿಗಾಗಿ ದುಡಿಯುತ್ತಿರುವ ಕನ್ನಡಿಗರೊಬ್ಬರಿಗೆ ವರ್ಷಂಪ್ರತಿ 50,000/- ರೂಪಾಯಿಗಳ ನಗದು, ಫಲಕ ಹಾಗೂ ಪ್ರಯಾಣ ವೆಚ್ಚವನ್ನೊಳಗೊಂಡ ಪ್ರಶಸ್ತಿ ನೀಡಿ ಗೌರವಿಸುವ ಹಾಗು ಅದೇ ಸಂದರ್ಭದಲ್ಲಿ ಸ್ಥಳೀಯ ಕಲಾವಿದರ ಮೂಲಕ ಒಂದು ಉತ್ತಮ ನಾಟಕ ಕೃತಿಯನ್ನು ರಂಗದ ಮೇಲೆ ತರುವ ತೀರ್ಮಾನ ಮಾಡಿದೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಹಲವಾರು ಮಂದಿ ಕನ್ನಡ ಭಾರತಿಯ ಹಿರಿಯ ಸದಸ್ಯರುಗಳು ಹಾಜರಿದ್ದು ಕರ್ನಾಟಕ ಸಂಘದ ಈ ಮಹತ್ವದ ತೀಮರ್ಾನವನ್ನು ಶ್ಲಾಘಿಸಿದರು.

ದೆಹಲಿ ಕರ್ನಾಟಕ ಸಂಘದ ಸಾಂಸ್ಕೃತಿಕ ಸಮುಚ್ಚಯದ ದಶಮಾನೋತ್ಸವ, ಮೈಸೂರು ರಂಗಾಯಣದ ಬೆಳ್ಳಿಹಬ್ಬದ ಸಂದರ್ಭ ಹಾಗೂ ಕನ್ನಡ ಭಾರತಿಯ ಚಿನ್ನದ ಹಬ್ಬದ ಸುಸಂದರ್ಭದಲ್ಲಿ ಆಯೋಜಿಸಲಾಗಿರುವ ಈ ಒಂದು ಮಹತ್ವದ ಕಾರ್ಯಕ್ರಮಕ್ಕೆ ಶಿಖರವಿಟ್ಟಂತೆ ಮೈಸೂರು ರಂಗಾಯಣದ ಪ್ರಸಿದ್ಧ ನಿರ್ಧೇಶಕರು ಮತ್ತು ರಂಗ ತಜ್ಞರೂ ಆದ ಶ್ರೀ ಮಂಜುನಾಥ್ ಬೆಳಕೆರೆಯವರು ದೆಹಲಿಯ ಸ್ಥಳೀಯ ಕನ್ನಡ ಕಲಾವಿದರನ್ನೊಳಗೊಂಡು ನಿರ್ದೇಶಿಸಿ ಪ್ರಸ್ತುತಪಡಿಸಿದ “ಸೇವಂತಿ ಪ್ರಸಂಗ” ನೆರೆದಿದ್ದ ಎಲ್ಲ ಸಭಿಕರ ಮನಸ್ಸನ್ನು ಸೂರೆಗೊಂಡಿತು.

ಸದಾ ನಾಟಕವನ್ನೇ ಉಸಿರಾಗಿಸಿಕೊಂಡಿರುವ ಶ್ರೀ ಎಂ.ಎಸ್. ಸತ್ಯು ಹಾಗು ಶ್ರೀ ಎಚ್.ಎಸ್. ಶಿವಪ್ರಕಾಶ್ ಅವರು ಈ ಸಂದರ್ಭದಲ್ಲಿ ಮುಂಬರುವ ದಿನಗಳಲ್ಲಿ ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ಸ್ಥಳೀಯ ಕಲಾವಿದರ ಮೂಲಕ ನಾಟಕಗಳ ನಿದರ್ೇಶಿಸಲು ಮುಂದಾಗಿರುವುದು ಕರ್ನಾಟಕ ಸಂಘದ ಈ ಕಾರ್ಯಕ್ರಮದ ಯಶಸ್ವಿಗೆ ನಿದರ್ಶನವಾಗಿದೆ.


Spread the love

Exit mobile version