Home Mangalorean News Kannada News ದೇವರಾಜೇಗೌಡ ಅವರಿಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ: ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್

ದೇವರಾಜೇಗೌಡ ಅವರಿಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ: ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್

Spread the love

ದೇವರಾಜೇಗೌಡ ಅವರಿಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ: ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್

ಹಾಸನ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ, ಜೆಡಿಎಸ್‌ನ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣರ ಮಾಜಿ ಕಾರು ಚಾಲಕ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಪ್ರಜ್ವಲ್‌ ರೇವಣ್ಣರ ಮಾಜಿ ಕಾರು ಚಾಲಕ ಕಾರ್ತಿಕ್ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದು, ಅದರಲ್ಲಿ ‘ನಾನು ಹದಿನೈದು ವರ್ಷದಿಂದ ಪ್ರಜ್ವಲ್‌ ರೇವಣ್ಣ ಹಾಗೂ ಅವರ ಫ್ಯಾಮಿಲಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದೀನಿ. ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದೀನಿ. ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ರು, ಹಿಂಸೆ ಕೊಟ್ಟು ಹಲ್ಲೆ ಮಾಡಿದರು. ಆದ್ದರಿಂದ ಕೆಲಸ ಬಿಟ್ಟು ಅವರ ಮನೆಯಿಂದ ಹೊರಬಂದೆ ಎಂದು ಹೇಳಿದ್ದಾರೆ.

ದೇವರಾಜೇಗೌಡ ಅವರು ದೇವೇಗೌಡರ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು. ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡ ಬಳಿ ಹೋದೆ ಎಂದಿರುವ ಮಾಜಿ ಕಾರ್ ಚಾಲಕ ಕಾರ್ತಿಕ್, ಯಾವುದೇ ಅಶ್ಲೀಲ ವಿಡಿಯೋ ರಿಲೀಸ್ ಮಾಡಬಾರದು ಎಂದು ನನ್ನ ವಿರುದ್ದ ಪ್ರಜ್ವಲ್‌ ರೇವಣ್ಣ ಸ್ಟೇ ತಂದಿದ್ದಾರೆ. ಆಗ ನಿನ್ನ ಬಳಿ ಇರುವ ವಿಡಿಯೋ, ಫೋಟೋಸ್ ನಾನು ಯಾರಿಗೂ ತೋರಿಸಲ್ಲ ಕೊಡು ಎಂದು ದೇವರಾಜೇಗೌಡ ಕೇಳಿದ್ರು. ನಾನು ನಂಬಿ ನನ್ನ ಬಳಿಯಿದ್ದ ವಿಡಿಯೋದ ಒಂದು ಕಾಪಿ ಕೊಟ್ಟೆ. ಅವರು ಅದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋ ಗೊತ್ತಿಲ್ಲ. ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನವರಿಗೆ ನಾನು ವಿಡಿಯೋ ಕೊಟ್ಟಿಲ್ಲ’ ಎಂದಿರುವ ಕಾರ್ತಿಕ್, ಕಾಂಗ್ರೆಸ್ ಅವರ ಮೇಲೆ ನಂಬಿಕೆ ಇಲ್ಲದೆ ದೇವರಾಜೇಗೌಡರ ಹತ್ತಿರ ಕೊಟ್ಟಿದ್ದೆ. ಪೆನ್‌ಡ್ರೈವ್ ಯಾರು ಹಂಚಿದರೋ ಗೊತ್ತಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್ ಅವರಿಗೆ ಕೊಡುವುದಿದ್ದರೆ ದೇವರಾಜೇಗೌಡ ಬಳಿ ಏಕೆ ಹೋಗುತ್ತಿದ್ದೆ ಇವತ್ತು ಎಸ್‌ಐಟಿ ಮುಂದೆ ಹಾಜರಾಗಿ ಎಲ್ಲಾ ಹೇಳಿಕೊಳ್ಳುತ್ತೇನೆ. ನಂತರ ಮಾಧ್ಯಮದ ಮುಂದೆ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ ಎಂದಿದ್ದಾರೆ.

ರೇವಣ್ಣ ಮನೆಯಲ್ಲಿ ಏನೆಲ್ಲಾ ನಡೆದಿದೆ ನಾನು ನೋಡಿದ್ದೇನೆ. ಎಲ್ಲವನ್ನೂ ಎಸ್‌ಐಟಿ ಮುಂದೆ ಹೇಳುತ್ತೇನೆ. ಯಾರಿಗೆ ಅನ್ಯಾಯ ಆಗಿದೆಯೋ ಧೈರ್ಯವಾಗಿ ಮುಂದೆ ಬನ್ನಿ ಎಂದು ಕಾರ್ತಿಕ್ ವಿಡಿಯೊ ಮೂಲಕ ಮನವಿ ಮಾಡಿದ್ದಾರೆ.

ಎಸ್ ಐಟಿ ತಂಡ: ಮೈಸೂರು ಎಸ್ ಪಿ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಿದ್ರೆ, ಎಸ್ ಪಿ ಸುಮನ್ ಡಿ ಪನ್ನೇಕರ್ ನೇತೃತ್ವದಲ್ಲಿ ಇನ್ನೊಂದು ತಂಡವನ್ನು ಸರ್ಕಾರ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತನಿಖೆ ಮಾಡಲು ರಚನೆ ಮಾಡಲಾಗಿದೆ. ಇದರ ಜೊತೆಗೆ ಮತ್ತೊಂದು ತಾಂತ್ರಿಕ ತಂಡವನ್ನು ರಚನೆ ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆ ಮಾಡಿರುವ ಮೂರು ತಂಡಗಳಿಗೆ ಪ್ರತ್ಯೇಕ ಜವಾಬ್ದಾರಿಯನ್ನು ನೀಡಲಾಗಿದ್ದು, ಹಾಸನದಲ್ಲಿ ಸಂತ್ರಸ್ತರನ್ನ ಪತ್ತೆ ಹಚ್ಚಿ, ಮಾಹಿತಿ ಸಂಗ್ರಹಿಸಲು ಒಂದು ತಂಡವನ್ನು ನಿಯೋಜಿಸಲಾಗಿದೆ.


Spread the love

Exit mobile version