ದೇಶಕ್ಕೆ ಪ್ರಧಾನಿ ಮೋದಿಯವರಿಂದ ಭವಿಷ್ಯವಿಲ್ಲ :ಮುಖ್ಯಮಂತ್ರಿ ಕುಮಾರಸ್ವಾಮಿ
ಕುಂದಾಪುರ: ಕಳೆದ ನಾಲ್ಕುವರೆ ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಯುವಕರಿಗೆ ಏನು ಕೊಟ್ಟಿದ್ದಾರೆ ಎಂದು ಆಲೋಚನೆ ಮಾಡಬೇಕು. ಉದ್ಯೋಗಸೃಷ್ಠಿ ಮಾಡುವ ನಿಟ್ಟಿನಲ್ಲಿ ಒಂದು ಪರ್ಸೆಂಟ್ ಕೆಲಸವೂ ಮಾಡಿಲ್ಲ. ಈ ಭಾಗದ ಯುವಕರು ಯಾಕೆ ಮೋದಿ ಭ್ರಮೆಗೆ ಏಕೆ ಒಳಗಾಗುತ್ತಾರೊ ನನಗೆ ಗೊತ್ತಾಗುತ್ತಿಲ್ಲ. ದೇಶಕ್ಕೆ ಪ್ರಧಾನಿ ಮೋದಿಯವರಿಂದ ಭವಿಷ್ಯವಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಕುಂದಾಪುರದ ನೆಹರೂ ಮೈದಾನದಲ್ಲಿ ಬುಧವಾರ ಸಂಜೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರವಾಗಿ ನಡೆದ ಮಹಿಳಾ ಮೀನುಗಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ನಿರ್ದಿಷ್ಠ ಕಾರ್ಯಕ್ರಮವನ್ನು ನೀಡದ ಮೋದಿ ಇನ್ನೊಮ್ಮೆ ಪ್ರಧಾನಿಯಾಗಲು ಸಾಧ್ಯವಿಲ್ಲ. ವಿದ್ಯಾವಂತ ಯುವ ಸಮುದಾಯಕ್ಕೆ ಉದ್ಯೋಗವಿಲ್ಲದಂತೆ ಮಾಡಿದ ಇವರ ಭ್ರಮೆಯ ಮಾತುಗಳಿಗೆ ಯುವ ಜನತೆ ಬಲಿಯಾಗಬಾರದು. ನಾವೆಲ್ಲರೂ ನಿಮ್ಮ ಕುಟುಂಬಕ್ಕೆ ಹತ್ತಿರವಾಗಿರುವವರು. ನಿಮಗೆ ಕಷ್ಟಗಳು ಬಂದಾಗ ನಿಮ್ಮ ಬಳಿ ಓಡಿ ಬರುವವರು ನಾವು. ಎಲ್ಲೋ ಇರುವ ಮೋದಿಯವರನ್ನು ನೋಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಿದರೆ ಈಗಿನ ಪರಿಸ್ಥಿತಿಯೆ ಮುಂದೆ ಬರುತ್ತದೆ. ಹಿಂದೆ ಈ ಕ್ಷೇತ್ರದಲ್ಲಿ ಸಂಸದೆಯಾಗಿದ್ದವರು ಜನರ ಸಂಕಷ್ಟಗಳಿಗೆ ನೆರವಾಗಿಲ್ಲ ಎಂದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನಗಳಿಂದಲೂ ಕೋಟಿಗಟ್ಟಲೆ ಹಣದ ಆಮೀಷವನ್ನು ಒಡ್ಡಿ ಶಾಸಕರ ಖರೀದಿಗೆ ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರ ಬಳಿ ಇರುವ ಕೋಟ್ಯಾಂತರ ರೂಪಾಯಿ ಕಪ್ಪು ಹಣದ ಮೂಲವನ್ನು ತನಿಖೆ ನಡೆಸಲು ಕೇಂದ್ರ ಸರ್ಕಾರದ ಏಜೆನ್ಸಿಗಳಿಗೆ ಯಾಕೆ ಸಾಧ್ಯವಾಗುತ್ತಿಲ್ಲ. 2014 ರ ಚುನಾವಣೆಯ ವೇಳೆಯಲ್ಲಿ ದೇಶದ ಜನರಿಗೆ ಮಾತಿನ ಮೋಡಿಯನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಅಂದು ನೀಡಿದ್ದ ಯಾವುದೆ ಭರವಸೆಗಳನ್ನು ಈಡೇರಿಸಿಲ್ಲ. ನೋಟು ರದ್ದತಿ, ಜಿಎಸ್ಟಿ ಜಾರಿ ಮುಂತಾದ ಅವೈಜ್ಞಾನಿಕ ತೀರ್ಮಾನಗಳಿಂದ ದೇಶದ ಸಾಮಾನ್ಯ ಜನರ ಬದಕನ್ನು ಅತಂತ್ರಗೊಳಿಸಿದ್ದಾರೆ. ಕಪ್ಪು ಹಣದ ನಿರ್ಮೂಲನೆಗಾಗಿ ನೋಟು ರದ್ದತಿ ಎಂದಿದ್ದ ಪ್ರಧಾನಿ ಮೋದಿ ಪರೋಕ್ಷವಾಗಿ ಕಪ್ಪು ಹಣದ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ದೇಶ ಕಾಯುವ ಸೈನಿಕರ ತ್ಯಾಗ, ಬಲಿದಾನಗಳನ್ನು ತಮ್ಮ ಹೆಸರಿನೊಂದಿಗೆ ಸೇರ್ಪಡೆಗೊಳಿಸುವಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ದ ಅವರು ವಾಗ್ದಾಳಿ ನಡೆಸಿದರು.
45 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿರುವ ಸರಕಾರಕ್ಕೆ ಮೀನುಗಾರರ ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳಲ್ಲಿನ ನೂರಾರು ಕೋಟಿ ರೂ. ಸಾಲ ದೊಡ್ಡ ಹೊರೆ ಆಗಲ್ಲ. ಈ ಬಗ್ಗೆ ಇಲ್ಲಿ ಘೋಷಣೆ ಮಾಡಿದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಚುನಾವಣೆಯ ನಂತರ ಒಂದು ದಿನ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮೀನುಗಾರರ ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.
ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ಕೇವಲ ಮಾತಿನ ಭರವಸೆಯನ್ನು ಮಾತ್ರ ನೀಡಿದ್ದಾರೆಯೇ ಹೊರತು ಯುವಕರಿಗಾಗಿ ಯಾವುದೇ ಯೋಜನೆಯನ್ನು ಜಾರಿಗೆ ತಂದಿಲ್ಲ. ಸೈನಿಕರ ಹೆಸರನ್ನು ದುರಪಯೋಗ ಪಡಿಸಿ, ಅವರ ಪ್ರಾಣದ ಜೊತೆ ಚೆಲ್ಲಾಟ ಆಡುವ ಏಕೈಕ ಪ್ರಧಾನಿ ಮೋದಿ. ಬಡವರ ಪರ ಒಂದೇ ಒಂದು ಕಾರ್ಯಕ್ರಮ ಅಥವಾ ಉದ್ಯೋಗ ಸೃಷ್ಟಿಯ ಯಾವುದೇ ಕಾರ್ಯಕ್ರಮಗಳನ್ನು ಇವರು ಮಾಡಿಲ್ಲ. ಆದರೂ ಯುವಕರು ಮೋದಿ ಮೋದಿ ಎಂಬ ಭ್ರಮೆಯಲ್ಲಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಸಮ್ಮಿಶ್ರ ಸರಕಾರ ಆಡಳಿತ ಬಂದ ನಂತರ ಕರಾವಳಿ ಭಾಗದಲ್ಲಿ ಯಾವುದೇ ಗಲಭೆಗಳಿಗೆ ಅವಕಾಶ ಕಲ್ಪಿಸದೆ ಶಾಂತಿ ಹಾಗೂ ನೆಮ್ಮದಿ ವಾತಾವಾರಣವನ್ನು ನಿರ್ಮಾಣ ಮಾಡಲಾಗಿದೆ. ಕರಾವಳಿ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗೆ ಅವಕಾಶ ನೀಡಿ ಯುವಕರಿಗೆ ಉದ್ಯೋಗ ಕೊಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಾಮಾಲ ಮಾತನಾಡಿ, ಈ ಬಾರಿ ಸತ್ಯ ಮತ್ತು ಸುಳ್ಳಿನ ನಡುವಿನ ಚುನಾವಣೆ ಆಗಿದೆ. ಬಿಜೆಪಿ ಐದು ವರ್ಷಗಳ ಕಾಲ ಬರೀ ಸುಳ್ಳು ಹೇಳುತ್ತ ಬಂದಿದೆಯೆ ಹೊರತು ಯಾವುದೇ ಕೆಲಸ ಮಾಡಿಲ್ಲ. ಕೇಂದ್ರ ಸರಕಾರ ಐದು ವರ್ಷಗಳಲ್ಲಿ ಮಹಿಳೆಯರಿಗಾಗಿ ಒಂದೇ ಒಂದು ಯೋಜನೆ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು.
ಸಮಾವೇಶದಲ್ಲಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಎನ್ಡಿಎ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕತೆ ಅಧೋಗತಿಗೆ ತಲುಪಿದೆ. ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೃತ ಮೀನುಗಾರರಿಗೆ ನೀಡುವ ಪರಿಹಾರ ಮೊತ್ತವನ್ನು 6 ಲಕ್ಷಕ್ಕೆ ಏರಿಸುವುದು ಸೇರಿದಂತೆ ಮೀನುಗಾರರಿಗಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈಚೆಗೆ ಕಾಣಿಯಾದ 7 ಮಂದಿ ಮೀನುಗಾರರ ಪತ್ತೆಯ ವಿಚಾರವೂ ಸೇರಿ, ಮೀನುಗಾರರ ಸಂಕಷ್ಟಗಳಿಗೆ ಕೇಂದ್ರದ ಮೋದಿ ಸರ್ಕಾರದಿಂದ ಯಾವುದೆ ರೀತಿಯ ಸ್ಪಂದನೆಗಳು ದೊರಕುತ್ತಿಲ್ಲ. ದೇಶದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಒಂದು ಹೊಸ ಮೈತ್ರಿ ಇತಿಹಾಸವನ್ನು ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷದ ವ್ಯಕ್ತಿ, ಜೆಡಿಎಸ್ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸುತ್ತಿದ್ದಾರೆ. ನನಗೆ ಮತ ನೀಡಿ. ಅತಿಥಿ ಕಲಾವಿದನಾಗಲ್ಲ. ಕ್ಷೇತ್ರದಲ್ಲಿದ್ದುಕೊಂಡೆ ಹಗಲಿರುಳು ನಿಮ್ಮ ಸೇವೆ ಮಾಡುತ್ತೇನೆ. ಎಂದರು.
ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ ಪರೇಶ್ಮೇಸ್ತಾ ಸಾವಿನ ಪ್ರಕರಣದ ನಿಗೂಢತೆಯನ್ನು ಬೇಧಿಸಲು ಸಿಬಿಐ ತನಿಖೆಗೆ ನೀಡಿ ವರ್ಷ ಕಳೆದಿದ್ದರೂ, ಇನ್ನೂ ಪ್ರಕರಣದ ನಿಗೂಢತೆ ಬಯಲಾಗಿಲ್ಲ ಎನ್ನುವುದಕ್ಕೆ ಬಿಜೆಪಿಗರು ರಾಜ್ಯದ ಜನತೆಗೆ ಉತ್ತರ ನೀಡಲಿ. ಓಟು ಅವರಿಗೆ, ಕೆಲಸ ಮಾಡೋದು ಮಾತ್ರ ನಾವುಗಳು. ಈ ಬಾರಿ ಅದು ಆಗೋದಿಲ್ಲ. ಓಟು ಕೊಟ್ಟರೆ ಮಾತ್ರ ನಿಮ್ಮ ಕೆಲಸ ಮಾಡುತ್ತೇವೆ. ಕೆಲಸ ಮಾಡಿಯೂ ಸೋಲನ್ನನುಭವಿಸಿದ ನಮಗೂ ಸಾಕಷ್ಟು ನೋವಿದೆ ಎಂದರು.
ಮಾಜಿ ಶಾಸಕ ಯು ಆರ್ ಸಭಾಪತಿ ಮಾತನಾಡಿ ರಾಮ ಮಂದಿರ ನಿರ್ಮಾಣಕ್ಕಾಗಿ ಭಕ್ತಿಯಿಂದ ಇಟ್ಟಿಗೆ ಹೊತ್ತವರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು. ಮಂದಿರದ ಹೆಸರಿನಲ್ಲಿ ಹಣ ಸಂಗ್ರಹಿಸಿದವರು ಬಿಜೆಪಿ ಹಾಗೂ ಸಂಘಟನೆಯ ಪ್ರಮುಖರು. ಅಂದು ಸಂಗ್ರಹಿಸಿದ ಹಣ ಏನಾಯ್ತು. ಇಟ್ಟಿಗೆ ಎಲ್ಲಿಗೆ ಹೋಯ್ತು ಎನ್ನುವ ಸತ್ಯ ಬಯಲಿಗೆ ಬರಬೇಕು.
ಸಮಾವೇಶದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಬ್ಲೋಸಂ ಫೆರ್ನಾಂಡಿಸ್, ವಿಧಾನಪರಿಷತ್ಸದಸ್ಯ ಎಸ್.ಎಲ್.ಬೋಜೇ ಗೌಡ, ರಾಜ್ಯ ಕಾಂಗ್ರೆಸ್ ಮುಖಂಡ ಎಂ.ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಎರಡು ಪಕ್ಷದ ಮುಖಂಡರಾದ ಮಲ್ಯಾಡಿ ಶಿವರಾಮ್ಶೆಟ್ಟಿ, ವಿಕಾಸ ಹೆಗ್ಡೆ, ದಿನೇಶ್ಪುತ್ರನ್, ನರಸಿಂಹ ಮೂರ್ತಿ, ಬಿ.ಹಿರಿಯಣ್ಣ, ಜ್ಯೋತಿ ಪುತ್ರನ್, ಮಾಣಿ ಗೋಪಾಲ, ಶಂಕರ್ ಕುಂದರ್, ಮದನ್ ಕುಮಾರ್, ಸಬ್ಲಾಡಿ ಮಂಜಯ್ಯ ಶೆಟ್ಟಿ, ಶಾಲಿನಿ ಶೆಟ್ಟಿ, ಹುಸೇನ್ ಹೈಕಾಡಿ, ಕಿಶೋರ್ ಕುಮಾರ್, ಶ್ರೀಕಾಂತ ಅಡಿಗ, ಕೆದೂರು ಸದಾನಂದ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಹರಿಪ್ರಸಾದ್ ಶೆಟ್ಟಿ, ಸಂದೇಶ್ ಭಟ್, ಮನ್ಸೂರು ಇಬ್ರಾಹಿಂ, ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ, ಅನಿತಾ ಶೆಟ್ಟಿ, ದೇವಾನಂದ ಶೆಟ್ಟಿ, ಎಸ್.ರಾಜು ಪೂಜಾರಿ, ಮೋಗವೀರ ಸಂಘಟನೆ ಜಯ ಕೋಟ್ಯಾನ್, ಕೆ.ಕೆ. ಕಾಂಚನ್, ಮೀನುಗಾರರ ಸಂಘದ ರತ್ನಾ ದಿನೇಶ್ ಪುತ್ರನ್, ಕಾಂಗ್ರೆಸ್ ಐಟಿ ಸೆಲ್ನ ಚಂದ್ರಶೇಖರ್ ಶೆಟ್ಟಿ, ಮನೋಜ್, ಚಂದ್ರ ಅಮೀನ್, ಇಚ್ಚಿತಾರ್ಥ ಶೆಟ್ಟಿ ಉಪಸ್ಥಿತರಿದ್ದರು.