ದೇಶದಾದ್ಯಂತ ಫೆಬ್ರವರಿ 17 ರಂದು ಪಾಪ್ಯುಲರ್ ಫ್ರಂಟ್ 10ನೇ ವರ್ಷಾಚರಣೆ
ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ 10ನೇ ವರ್ಷಾಚರಣೇಯ ಪ್ರಯುಕ್ತ ಫೆಬ್ರವರಿ 17 ರಂದು ಅಪರಾಹ್ನ 2.30 ಗಂಟೆಗೆ ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದಿಂದ ಜಾಥಾ ಮತ್ತು ಸಮಾವೇಶ ನಡೆಯಲಿದೆ ಎಂದು ಪಾಪ್ಯುಲರ್ ಫ್ರಂಟ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದ್ದಾರೆ.
ಸಾಮಾಜಿಕ ರಂಗಗಳಲ್ಲಿ ಕಳೆದ ಒಂದು ದಶಕದಿಂದ ಸಕ್ರಿಯವಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದೀಗ ತನ್ನ 10ನೇ ವರ್ಷಾಚರಣೆಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸುತ್ತಿದೆ. ಸ್ವಾತಂತ್ರ್ಯಾ ನಂತರದ 70 ವರ್ಷಗಳಲ್ಲಿ ಅಲ್ಪಸಂಖ್ಯಾತ, ದಲಿತ, ರೈತ, ಹಿಂದುಳಿದ ವರ್ಗಗಳು ನಿರಂತರವಾಗಿ ಶೋಷಣೆಗೊಳಗಾಗಿ, ಹಕ್ಕುಗಳಿಂದ ವಂಚಿತರಾದ ವೇಳೆ, 80ರ ದಶಕದ ಕೊನೆಯ ಮತ್ತು 90ರ ದಶಕದ ಆದಿಯಲ್ಲಿ ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡ ಸಂಘಟನೆಯು 2007ರ ವೇಳೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಚಳುವಳಿಯ ರೂಪದಲ್ಲಿ ಹೊರಹೊಮ್ಮಿತು.
ದೇಶವನ್ನಾಳಿದ ವಿವಿಧ ಸರಕಾರಗಳು ಮುಸ್ಲಿಮ್ ಸಮುದಾಯದ ಹಿಂದುಳಿವಿಕೆಯ ಬಗ್ಗೆ ಹಲವಾರು ಆಯೋಗಗಳನ್ನು ರಚಿಸಿ ಮುಸ್ಲಿಮರು ಶೈಕ್ಷಣಿಕ, ಔದ್ಯೋಗಿಕ ಮತ್ತು ಅಧಿಕಾರ ಕ್ಷೇತ್ರಗಳಿಂದ ವಂಚಿತರಾಗಿದ್ದಾರೆ ಎಂಬುವುದನ್ನು ಪ್ರಮಾಣೀಕರಿಸಿದೆ. ಈ ವೇಳೆ ಮುಸ್ಲಿಮ್ ಸಮುದಾಯದ ಮಧ್ಯೆ ಪ್ರಜ್ಞಾವಂತಿಕೆಯನ್ನು ಬೆಳೆಸಿ, ಅವರನ್ನು ಸಲೀಕರಣಗೊಳಿಸುವ ಅಜೆಂಡಾದೊಂದಿಗೆ ಪಾಪ್ಯುಲರ್ ಫ್ರಂಟ್ ಮುಂದುವರಿಯುತ್ತಿದೆ. ಆದರೆ ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತ ಮೌಲ್ಯಗಳನ್ನೇ ಪ್ರಶ್ನಿಸುವಂತಹ ಕೋಮುವಾದವು ಕಳೆದ ಮೂರು ದಶಕಗಳಿಂದ ತೀವ್ರಗೊಳ್ಳುತ್ತಿರುವುದು ದೇಶದ ಮುಂದಿರುವ ಬೆದರಿಕೆಯಾಗಿದೆ. ಕೇವಲ ಕೋಮು ಧ್ರುವೀಕರಣವನ್ನು ನಡೆಸಿ ವಿವಿಧ ರಾಜ್ಯಗಳಲ್ಲಿ ಹಾಗೂ ಇದೀಗ ಕೇಂದ್ರದಲ್ಲಿ ಅಧಿಕಾರವನ್ನು ಪಡೆಯುವಲ್ಲಿ ಅವರು ಸಫಲರಾಗಿದ್ದಾರೆ. ಮಾತ್ರವಲ್ಲ ಕೋಮುವಾದದ ಭ್ರಾಂತಿಯು ಈ ದೇಶದ ಧಾರ್ಮಿಕ, ಸಾಂಸ್ಕøತಿಕ, ವೈಚಾರಿಕ ರಂಗಗಳ ಮೇಲೂ ತನ್ನ ಕೆಂಗಣ್ಣನ್ನು ಬೀರಿ ಅಸಹಿಷ್ಣುತೆಯನ್ನು ಮೆರೆದಿದೆ.
ಸಾಂವಿಧಾನಿಕ ಹಕ್ಕುಗಳು ಒಂದೆಡೆ ಸ್ಪಷ್ಟವಾಗಿದ್ದರೂ, ಅಭಿವ್ಯಕ್ತಿ, ಆಹಾರ, ದೇಶಪ್ರೇಮ, ರಾಷ್ಟ್ರೀಯತೆ ಮುಂತಾದ ವಿಚಾರಗಳ ಬಗ್ಗೆ ವಿಲಕ್ಷಣ ವ್ಯಾಖ್ಯಾನವನ್ನು ನೀಡುತ್ತಿರುವ ಸಂಘಪರಿವಾರ ಅದನ್ನು ಪ್ರತಿಯೊಬ್ಬರೂ ಅನುಸರಿಸಲೇ ಬೇಕು ಎಂಬ ದಾಷ್ಟ್ರ್ಯವನ್ನು ತೋರುತ್ತಿದ್ದಾರೆ. ಇದನ್ನು ವಿರೋಧಿಸುವ ವಿಚಾರವಾದಿಗಳು, ಪ್ರಗತಿಪರರು, ಮಾನವಹಕ್ಕುಗಳ ಹೋರಾಟಗಾರರು ಅವಮಾನ, ಹಲ್ಲೆಗೊಳಗಾಗುತ್ತಿದ್ದಾರೆ. ಇನ್ನು ಕೆಲವರು ಹತ್ಯೆಗೊಳಗಾಗುತ್ತಿದ್ದಾರೆ. ಬಡತನದಿಂದ ಕಂಗೆಟ್ಟವರು, ದೇಶದ ಬೆನ್ನಲುಬಾದ ರೈತರು, ಮಧ್ಯಮ ವರ್ಗದವರು ಕೇಂದ್ರ ಸರಕಾರದ ನೋಟು ರದ್ದತಿಯಿಂದ ಆರ್ಥಿಕವಾಗಿ ಸಂಪೂರ್ಣವಾಗಿ ನೆಲಕಚ್ಚಿದ್ದಾರೆ. ದೇಶದ ಒಟ್ಟು ಆರ್ಥಿಕ ಪರಿಸ್ಥಿತಿಯು ಪಾತಾಳದಂಚಿಗೆ ಸರಿದಿದೆಯೆಂದು ಪ್ರಮುಖ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಒಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿಯ ಭೀತಿಯ ವಾತಾವರಣ ದೇಶದ ಮುಂದಿದೆ.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂವಿಧಾನವು ಪ್ರತಿಪಾದಿಸುವ ಪ್ರಜಾತಂತ್ರ, ಜಾತ್ಯತೀತ ಮೌಲ್ಯಗಳನ್ನು ಉಳಿಸಿಕೊಳ್ಳಲು ಮತ್ತು ದೇಶದ ವೈವಿಧ್ಯತೆ ಮತ್ತು ಭ್ರಾತೃತ್ವವನ್ನು ಇನ್ನಷ್ಟು ದೃಢ ಪಡಿಸಲು ಸಂಘಟನೆಯು ತನ್ನ 10ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ದೇಶದ ಜನತೆಯೊಂದಿಗೆ ಮನವಿ ಮಾಡಿಕೊಳ್ಳುತ್ತಿದೆ. ಮತ್ತು ಆ ಮೂಲಕ ಮಾತ್ರವೇ ಸಬಲೀಕೃತ ರಾಷ್ಟ್ರದ ನಿರ್ಮಾಣ ಸಾಧ್ಯ ಎಂದು ದೃಢವಾಗಿ ನಂಬುತ್ತದೆ. ಹಾಗೂ ಈ ದಿಸೆಯಲ್ಲಿ ಸಂಘಟನೆಯು ಎಂದಿನಂತೆ ಮುಂದಿನ ದಿನಗಳಲ್ಲೂ ಸಮಾಜ ಮುಖಿಯಾಗಿ ಮುಂದುವರಿಯಲು ಬಯಸುತ್ತದೆ.