ದೇಶದ ಜನತೆ ಅಚ್ಚೇ ದಿನ್ ನೀಡುವಲ್ಲಿ ಮೋದಿ ಸರಕಾರ ವಿಫಲ; ಗೋಪಾಲ ಭಂಡಾರಿ
ಉಡುಪಿ: ಚುನಾವಣೆಯ ಮೊದಲು ಜನರಿಗೆ ಅಚ್ಚೇ ದಿನ್ ನೀಡುವುದಾಗಿ ಘೋಷಣೆಮಾಡಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬಡವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಾರ್ಕಳ ಮಾಜಿ ಶಾಸಕ, ಕೆಪಿಸಿಸಿ ಕಾರ್ಯದರ್ಶಿ ಗೋಪಾಲ್ ಭಂಡಾರಿ ಹೇಳಿದ್ದಾರೆ.
ಅವರು ಸೋಮವಾರ ಕಾರ್ಕಳದ ಬಸ್ ನಿಲ್ದಾಣದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮತ್ತು ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ದಿನದಿಂದ ದಿನಕ್ಕೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಮೋದಿ ಆಡಳಿತದ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಚುನಾವಣೆಯ ಪೂರ್ವದಿಂದ ಸುಳ್ಳನ್ನು ಹೇಳುತ್ತಾ ಅಧಿಕಾರಕ್ಕೆ ಬಂದ ಮೋದಿಯವರು ಒಂದೂ ಆಶ್ವಾಶನೆಯನ್ನು ಈಡೇರಿಸಲಿಲ್ಲ ಎಂದರು,
ಇದಕ್ಕೆ ಪ್ರತಿಯಾಗಿ ಕಾರ್ಕಳದ ಶಾಸಕರು ಕೂಡ ತಮ್ಮ ಸುಳ್ಳು ಹೇಳುವ ಚಾಳಿಯನ್ನು ಮುಂದುವರೆಸಿಕೊಂಡು ಬಂದಿದ್ದು, ಹುಲಿಯೋಜನೆ ಜಾರಿ ಮಾಡಲು ಕೇಂದ್ರ ಸರಕಾರ ಚಿಂತನೆ ನಡೆಸಿದ್ದು, ಇಲ್ಲಿನ ಸಂಸದೆ, ಶಾಸಕರು ಬಾಯಿಬಿಡುತ್ತಿಲ್ಲ. ಶಾಸಕ ಸುನೀಲ್ ಕುಮಾರ್ ತಮ್ಮ ಸುಳ್ಳು ಹೇಳುವ ಪ್ರವೃತ್ತಿಯನ್ನು ಬಿಟ್ಟು ಸತ್ಯ ಹೇಳುವ ಕೆಲಸ ಮಾಡಲಿ ಎಂದರು.
ರಾಜ್ಯದ ಮುಖ್ಯಮಂತ್ರಿಗಳು ಕಾರ್ಕಳ ನಗರಕ್ಕೆ ಇಂದಿರಾ ಕ್ಯಾಂಟಿನ್ ನೀಡಿದ್ದು ಅದನ್ನು ವಿಫಲಗೊಳಿಸುವ ಯತ್ನ ನಡೆಯುತ್ತಿದೆ. ನಗರದಲ್ಲಿ ನಿರ್ಮಾಣವಾಗಬೇಕಾಗಿದ್ದ ಇಂದಿರಾ ಕ್ಯಾಂಟಿನ್ ನಗರದಿಂದ ನಿರುಪಯುಕ್ತ ಬಂಡಿಮಠ ನಿಲ್ದಾಣಕ್ಕೆ ವರ್ಗಾಯಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರಾದ ಅಮೃತ್ ಶೆಣೈ, ವಿಘ್ನೇಶ್ ಕಿಣಿ, ಮುನಿಯಾಲು ಉದಯ್ ಶೆಟ್ಟಿ, ಶೇಖರ್ ಮಡಿವಾಳ, ನೀರೆ ಕೃಷ್ಣ ಶೆಟ್ಟಿ, ಸುಧಾಕರ ಕೋಟ್ಯಾನ್, ಮೊಹ್ಮದ್ ಅಸ್ಲಾಂ, ಸುಭಿತ್ ಕುಮಾರ್, ವಿನ್ನಿಬೋಲ್ಡ್ ಮೆಂಡೊನ್ಸಾ ಹಾಗೂ ಇತರರು ಉಪಸ್ಥಿತರಿದ್ದರು.