Home Mangalorean News Kannada News ದೇಶದ ಭದ್ರಬುನಾದಿಗೆ ನೆಹರು ಅಡಿಪಾಯ: ಶಾಸಕ ಜೆ.ಅರ್. ಲೋಬೋ 

ದೇಶದ ಭದ್ರಬುನಾದಿಗೆ ನೆಹರು ಅಡಿಪಾಯ: ಶಾಸಕ ಜೆ.ಅರ್. ಲೋಬೋ 

Spread the love

ಮ0ಗಳೂರು : ಸ್ವಾತಂತ್ರ್ಯ ಭಾರತದ ಇಂದಿನ ಪ್ರಗತಿ ಹಾಗೂ ಬದಲಾವಣೆಗೆ ದೇಶದ ಪ್ರಥಮ ಪ್ರಧಾನಿ ಜವಹರ್‍ಲಾಲ್ ನೆಹರು ಅವರು ತಮ್ಮ ಆಡಳಿತವಾಧಿಯಲ್ಲಿ ಕೈಗೊಂಡ ದೂರದೃಷ್ಠಿಯ ಅಭಿವೃದ್ಧಿ ಯೋಜನೆಗಳೇ ಕಾರಣ ಎಂದು ಮಂಗಳೂರು ದಕ್ಷಿಣ ಶಾಸಕ ಜೆ.ಆರ್. ಲೋಬೋ ಅವರು ಹೇಳಿದ್ದಾರೆ.

 ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಬಲ್ಮಠ ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪಂಡಿತ್ ಜವಹರ್‍ಲಾಲ್ ನೆಹರು ಅವರ 125ನೇ ವರ್ಷಾಚರಣೆ ಪ್ರಯುಕ್ತ “ನೆಹರು ಚಿಂತನೆಗಳು- ಭಾರತದ ಅಭಿವೃದ್ಧಿ” ಕುರಿತು ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

lobo

ಯಾವುದೇ ದೇಶದ ಆಡಳಿತವನ್ನು ಆರಂಭದಲ್ಲಿ ನಡೆಸಿದವರು ಮುಂದಾಲೋಚನೆಯಿಂದ ಮುನ್ನೆಡದರೆ ಮಾತ್ರ ಆ ದೇಶದ ಪ್ರಗತಿ ಸಾಧ್ಯ. ಇಂತಹ ದೂರದೃಷ್ಠಿಯನ್ನು ಹೊಂದಿದ್ದ ನೆಹರು, ಅನೇಕ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳನ್ನು ದೇಶದಲ್ಲಿ ಸ್ಥಾಪಿಸುವ ಮೂಲಕ ದೇಶದ ಔದ್ಯೋಗಿಕ ಮುನ್ನೆಡೆಗೆ ಕಾರಣರಾದರು. ಅದೇ ರೀತಿ ಬೃಹತ್ ಅಣೆಕಟ್ಟುಗಳಿಗೆ ಚಾಲನೆ ನೀಡುವ ಮೂಲಕ ದೇಶದ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಬಲ ಬಂತು ಎಂದು ಶಾಸಕರು ಹೇಳಿದರು.

 ಇಂದು ದೇಶದ ಶೇಕಡಾ 65ರಷ್ಟಿರುವ ಯುವಜನತೆ, ಸ್ವಾತಂತ್ರ್ಯ ಹೋರಾಟಗಾರರ ಕಷ್ಟ ತ್ಯಾಗವನ್ನು ಅರಿಯಬೇಕು. ಇತಿಹಾಸವನ್ನು ತಿಳಿದರೆ ಮಾತ್ರ ಹೊಸ ಇತಿಹಾಸವನ್ನು ನಿರ್ಮಿಸಬಹುದು. ಪ್ರಜಾಸತ್ತಾತ್ಮಕವಾಗಿ ಪ್ರಜೆಗಳಿಗೆ ದೊರಕಿರುವ ಸ್ವಾತಂತ್ರ್ಯವನ್ನು ದುರುಪಯೋಗ ಮಾಡುವುದು ಆತಂಕಕಾರಿಯಾಗಿದೆ. ದೇಶದ ಪ್ರಗತಿಯೊಂದಿಗೆ ಮುನ್ನೆಡಯಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶಾಸಕ ಜೆ.ಆರ್. ಲೋಬೋ ಹೇಳಿದರು.

  ವಿಚಾರಸಂಕಿರಣದಲ್ಲಿ ಉಪನ್ಯಾಸ ನೀಡಿದ ಇತಿಹಾಸ ಉಪನ್ಯಾಸಕ ಸಂತೋಷ್ ಸಿ., ಭಾರತದಲ್ಲಿ ನಡೆದ ಅನೇಕ ಸಾಮೂಹಿಕ ಹೋರಾಟಗಳಲ್ಲಿ ನೆಹರೂ ಪಾತ್ರವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆರಂಭದಲ್ಲೇ ಯಶಸ್ಸುಗೊಳಿಸಿದ ಕೀರ್ತಿ ಅವರ ಮೇಲಿದೆ. ಅಸಮಾನತೆಯನ್ನು ಹೋಗಲಾಡಿಸಲು ಶಿಕ್ಷಣವನ್ನೇ ಸಾಧನವನ್ನಾಗಿ ಬಳಸಿದ್ದ ನೆಹರೂ, ದೇಶವನ್ನು ಜಾತ್ಯತೀತ ನೆಲೆಗಟ್ಟಿನಲ್ಲಿ ಮುನ್ನೆಡಿಸದವರು ಎಂದು ಹೇಳಿದರು.

 ಪಂಡಿತ್ ಜವಹರ್‍ಲಾಲ್ ನೆಹರು ಅವರ 125ನೇ ವರ್ಷಾಚರಣೆ ಪ್ರುಕ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

  ಬಲ್ಮಠ ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಪಿ. ಜೋಸೆಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

  ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕ ಕೃಷ್ಣಯ್ಯ ಸ್ವಾಗತಿಸಿ, ಗಣಿತ ಉಪನ್ಯಾಸಕ ಕೆ.ಪಿ. ಶ್ರೀನಿವಾಸ್ ವಂದಿಸಿದರು.


Spread the love

Exit mobile version