Home Mangalorean News Kannada News ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 15410 ವಿದ್ಯಾರ್ಥಿಗಳು

ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 15410 ವಿದ್ಯಾರ್ಥಿಗಳು

Spread the love

ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 15410 ವಿದ್ಯಾರ್ಥಿಗಳು

ಉಡುಪಿ: ಮಾರ್ಚ್ 1 ರಿಂದ 18 ರ ವರೆಗೆ ಪರೀಕ್ಷೆ ನಡೆಯಲಿದ್ದು, ಈ ಸಂಬಂಧ ಪೂರ್ವ ಸಿದ್ದತಾ ಸಭೆ ಮಂಗಳವಾರ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.

ಸಭೆಗೆ ಮಾಹಿತಿ ನೀಡಿದ ಪದವಿ ಪೂರ್ವ ಶಿಕ್ಷಣಾ ಇಲಾಖೆ ಉಪ ನಿರ್ದೇಶಕ ಸುಬ್ರಹ್ಮಣ್ಯ ಜೋಶಿ, ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ 15410 ಮಂದಿ ಹಾಜರಾಗಲಿದ್ದಾರೆ.  ಜಿಲ್ಲೆಯಲ್ಲಿ 27 ಪರೀಕ್ಷಾ ಕೇಂದ್ರಗಳಿವೆ. ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲು 8 ರೂಟ್ ತಂಡಗಳನ್ನು ರಚಿಸಲಾಗಿದೆ. ಪ್ರತೀ ಪರಿಕ್ಷಾ ಕೇಂದ್ರಕ್ಕೆ ಇಬ್ಬರಂತೆ ಬೇರೆ ಜಿಲ್ಲೆಗಳ 54 ಮಂದಿ ಸ್ಕ್ವಾಡ್ ಸದಸ್ಯರನ್ನು ನೇಮಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರಕ್ಕೆ ಆಯಾ ಕಾಲೇಜಿನ ಪ್ರಾಂಶುಪಾಲರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಲಾಗಿದೆ. ಇದಲ್ಲದೆ ಪ್ರತೀ ಪರೀಕ್ಷಾ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಲು ಜಾಗೃತಿ ದಳ ರಚಿಸಲಾಗಿದೆ ಎಂದರು.

ಈಗಾಗಲೇ ಪರೀಕ್ಷೆಗೆ ಸಂಬಂಧಿಸಿದ ಲೇಖನ ಸಾಮಾಗ್ರಿಗಳು ಜಿಲ್ಲೆಗೆ ತಲುಪಿವೆ. ಪ್ರಶ್ನೆ ಪತ್ರಿಕೆಗಳು ಶೀಘ್ರದಲ್ಲೇ ಬರಲಿದ್ದು, ಅವುಗಳನ್ನು ಅತಿ ಭದ್ರತೆಯಲ್ಲಿ ಜಿಲ್ಲಾ ಖಜಾನೆಯ ಸ್ಟ್ರಾಂಗ್ ರೂಂನಲ್ಲಿ ಇಡಲಾಗುವುದು. ಇದಕ್ಕಾಗಿ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳ ಸಮಿತಿ ಇದ್ದು, ಪ್ರಶ್ನೆ ಪತ್ರಿಕೆಗಳನ್ನು ಆಯಾ ಪರೀಕ್ಷಾ ದಿನದಂದೇ ಬೆಳಗ್ಗೆ ಭದ್ರತೆಯಲ್ಲಿ ತಲುಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿದ್ದು, ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾದ ಎಲ್ಲರೂ ದಕ್ಷತೆಯಿಂದ ಮತ್ತುಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಕೊಠಡಿಯಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಸಜ್ಜುಗೊಳಿಸಬೇಕು. ಆಯಾ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪರೀಕ್ಷೆಗೆ ಮುನ್ನವೇ ಪ್ರತೀ ಕೊಠಡಿಗೆ ತೆರಳಿ ಪ್ರತೀ ಡೆಸ್ಕ್, ಬೆಂಚುಗಳು ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.
ಪರೀಕ್ಷಾ ಕೇಂದ್ರದ ಸುತ್ತ ಮುತ್ತ ಸೆಕ್ಷನ್ 144 ಜಾರಿಗೆ ಬರಲ್ಲಿದ್ದು, ಇದು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ಪರೀಕ್ಷಾ ಕೇಂದ್ರಕ್ಕೆ ಅಪರಿಚಿತ ವ್ಯಕ್ತಿಗಳು ಪ್ರವೇಶಿಸದಂತೆ ಸಂಪೂರ್ಣ ನಿರ್ಬಂಧಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಸೇರಿದಂತೆ ಯಾರಿಗೂ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ. ಕೇಂದ್ರದ 200 ಮೀಟರ್ ವ್ಯಾಪ್ತಿಯೊಳಗೆ ವಿದ್ಯಾರ್ಥಿಗಳ ಪಾಲಕರೂ ಪ್ರವೇಶಿಸುವಂತಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ವಿವಿಧ ಇಲಾಖಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.


Spread the love

Exit mobile version