ದ.ಕದ ಶೈಕ್ಷಣಿಕ ಹಿರಿಮೆಗೆ ಮತ್ತೊಂದು ಗರಿ: ಪಶುವೈದ್ಯಕೀಯ ಕಾಲೇಜಿಗೆ ಅ.3ರಂದು ಸಿಎಂ ಶಿಲಾನ್ಯಾಸ

Spread the love

ದ.ಕದ ಶೈಕ್ಷಣಿಕ ಹಿರಿಮೆಗೆ ಮತ್ತೊಂದು ಗರಿ: ಪಶುವೈದ್ಯಕೀಯ ಕಾಲೇಜಿಗೆ ಅ.3ರಂದು ಸಿಎಂ ಶಿಲಾನ್ಯಾಸ

ಮ0ಗಳೂರು : ಉನ್ನತ ಶಿಕ್ಷಣಕ್ಕೆ ದೇಶದಲ್ಲೇ ಖ್ಯಾತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಮೆಗೆ ಮತ್ತೊಂದು ಗರಿ ಮೂಡಲಿದೆ. ಅದು ಪುತ್ತೂರು ತಾಲೂಕಿನ ಕೊಯಿಲದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಲಿರುವ ನೂತನ ಪಶುವೈದ್ಯಕೀಯ ಕಾಲೇಜು.

veternary-college

ಸಾಕಷ್ಟು ವೈದ್ಯಕೀಯ, ಇಂಜಿನಿಯರಿಂಗ್, ಸ್ನಾತಕೋತ್ತರ ಶಿಕ್ಷಣ, ಮಂಗಳೂರು ವಿಶ್ವವಿದ್ಯಾನಿಲಯ, ಎನ್.ಐ.ಟಿ.ಕೆ, ಮೀನುಗಾರಿಕಾ ಕಾಲೇಜು, ಕೃಷಿ ವಿಜ್ಞಾನ ಕಾಲೇಜು ಸೇರಿದಂತೆ ಶಿಕ್ಷಣದ ವಿವಿಧ ವಿಷಯಗಳಲ್ಲಿ ಹಲವರು ಕಾಲೇಜುಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗ್ರಾಮೀಣ ಸೊಗಡಿನ ಪಶುವೈದ್ಯಕೀಯ ಕಾಲೇಜು ಸ್ಥಾಪನೆಯಾಗಲಿದೆ. ಇದರಿಂದ ಕರಾವಳಿಯ ಹೈನುಗಾರಿಕೆ, ಜಾನುವಾರು ಸಾಕಾಣಿಕೆ, ಪಶು ಉತ್ಪನ್ನಗಳ ತಯಾರಿಕೆ, ಕುರಿ, ಮೇಕೆ, ಕೋಳಿ ಮತ್ತಿತರ ಕ್ಷೇತ್ರಗಳಲ್ಲಿ ಮಹತ್ತರ ಪ್ರಗತಿಗೆ ನಾಂದಿಯಾಗಲಿದೆ. ಕೈಗಾರಿಕಾ ಹಾಗೂ ಸೇವಾ ಕ್ಷೇತ್ರದತ್ತಲೇ ಒಲವು ತೋರುತ್ತಿರುವ ವಿದ್ಯಾರ್ಥಿಗಳು, ಪಾಲಕರನ್ನು ಕೃಷಿ ಕ್ಷೇತ್ರದತ್ತ ಆಕರ್ಷಿಸಲು ಪಶುವೈದ್ಯಕೀಯ ಕಾಲೇಜು ನೆರವಾಗಲಿದೆ.

ಜಿಲ್ಲೆಯ ಗ್ರಾಮಾಂತರ ಪ್ರದೇಶವಾದ ಪುತ್ತೂರು ತಾಲೂಕಿನ ಕೊಯಿಲದಲ್ಲಿ ಈ ಪಶುವೈದ್ಯಕೀಯ ಕಾಲೇಜು ತಲೆ ಎತ್ತಲಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಇದರ ಅಡಿಯಲ್ಲಿ ಪುತ್ತೂರು ತಾಲೂಕಿನ ಕೊೈಲಾದಲ್ಲಿ ರೂ. 142.00 ಕೋಟಿಗಳ ವೆಚ್ಚದಲ್ಲಿ ನೂತನ ಪಶುವೈದ್ಯಕೀಯ ಮಹಾವಿದ್ಯಾಲಯವನ್ನು ಸ್ಥಾಪಿಸಲು ಸರ್ಕಾರದ ಆಡಳಿತಾತ್ಮಕ ಮಂಜೂರಾತಿ ನೀಡಿರುತ್ತದೆ. ಕೊಯಲಾದಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಒಟ್ಟು 247 ಎಕರೆ ಜಮೀನನ್ನು ಪಶುವೈದ್ಯಕೀಯ ಕಾಲೇಜು ಸ್ಥಾಪನೆಗೆ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್‍ಗೆ ವರ್ಗಾಯಿಸಲಾಗಿದೆ. ಈ ನಿಮಿತ್ತ ವಿಶ್ವವಿದ್ಯಾಲಯವು ಪೂರ್ವಭಾವಿ ಸಿದ್ಧತೆಗಾಗಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಡಾ. ವಸಂತ ಶೆಟ್ಟಿ ಅವರನ್ನು ಈಗಾಗಲೇ ನೇಮಿಸಿದೆ.

ಪುತ್ತೂರಿನಲ್ಲಿ ಪಶುವೈದ್ಯಕೀಯ ಕಾಲೇಜು ಘೋಷಣೆಯಾಗಿ ಸಾಕಷ್ಟು ಕಾಲವಾಗಿದ್ದರೂ, ಗಮನಾರ್ಹ ಪ್ರಗತಿಯಾಗಿರಲಿಲ್ಲ. ಒಂದು ಹಂತದಲ್ಲಿ ಈ ಕಾಲೇಜು, ತುಮಕೂರು ಜಿಲ್ಲೆಯ ಶಿರಾ ಎಂಬಲ್ಲಿಗೆ ವರ್ಗಾವಣೆಯಾಗಲಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಅತೀವ ಒತ್ತಡದ ಫಲವಾಗಿ ಪಶುವೈದ್ಯಕೀಯ ಕಾಲೇಜು ಇಲ್ಲಿಯೇ ಸ್ಥಾಪನೆಯಾಗುವಲ್ಲಿ ಯಶಸ್ವಿಯಾಯಿತು. ಅಲ್ಲದೇ, ಹಚ್ಚ ಹಸಿರಿನ ಗ್ರಾಮಾಂತರ ಪ್ರದೇಶದಲ್ಲಿಯೇ ಕಾಲೇಜಿಗೆ ಜಮೀನು ಒದಗಿಸುವಲ್ಲಿಯೂ ಸಚಿವ ರಮಾನಾಥ ರೈ ಸಾಕಷ್ಟು ಮುತುವರ್ಜಿ ವಹಿಸಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನೇ ಕೊಯಿಲಕ್ಕೆ ಕರೆಸಿ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ.

ನೂತನ ಪಶುವೈದ್ಯಕೀಯ, ಮಹಾವಿದ್ಯಾಲಯ ಕಟ್ಟಡ ನಿರ್ಮಿಸುವ ಯೋಜನೆಗೆ ಸಂಬಂಧಿಸಿದಂತೆ ಮೊದಲನೇ ಹಂತವಾಗಿ ಕಾಲೇಜು ಕಟ್ಟಡ, ವೈದ್ಯಕೀಯ ಕಟ್ಟಡ, ಹುಡುಗರ ವಸತಿ ನಿಲಯ, ಮಹಿಳೆಯರ ವಸತಿ ನಿಲಯ, ಗೆಸ್ಟ್ ಹೌಸ್ ಕಾಮಗಾರಿಗಳನ್ನು ಒಟ್ಟು ರೂ. 110.5 ಕೋಟಿಗಳ ಯೋಜನಾ ವೆಚ್ಚದಲ್ಲಿ ಕಾಮಗಾರಿಯ ನಿರ್ವಹಣೆಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ನಾಲ್ಕು ಪಶುವೈದ್ಯ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 290 ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಪ್ರವೇಶಕ್ಕೆ ಅವಕಾಶ ಇದೆ. ಈ ಪೈಕಿ ಬೀದರ್-60, ಬೆಂಗಳೂರು-75, ಹಾಸನ-75 ಹಾಗೂ ಶಿವಮೊಗ್ಗ-80 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇದೆ. ಇದಲ್ಲದೇ ಗದಗ, ಅಥಣಿ ಹಾಗೂ ಪ್ರಸ್ತುತ ಪುತ್ತೂರಿನಲ್ಲಿ ಸ್ಥಾಪನಾ ಹಂತದಲ್ಲಿವೆ.

ಪಶುಪಾಲನಾ ಇಲಾಖೆಯಲ್ಲಿ ಗ್ರಾಮೀಣ ರೈತರಿಗೆ ಸೇವೆ ಒದಗಿಸಲು 692 ಪಶುವೈದ್ಯಾಧಿಕಾರಿ ಮತ್ತು ಅಂದಾಜು 300 ಜನ ಸಹಾಯಕ ನಿರ್ದೇಶಕರ ಹುದ್ದೆ ಖಾಲಿ ಇದ್ದು, ಈ ಹುದ್ದೆಗಳ ಭರ್ತಿಗೆ ಪದವೀಧರ ಪಶುವೈದ್ಯರ ಕೊರತೆ ಇದೆ. ಈ ಹಿನ್ನಲೆಯಲ್ಲಿ ನಾಲ್ಕು ಪಶುವೈದ್ಯ ಕಾಲೇಜುಗಳ ಜೊತೆಗೆ ಪುತ್ತೂರು ಪಶುವೈದ್ಯಕೀಯ ಕಾಲೇಜು ಸೇರಿದಂತೆ ಇನ್ನು 3 ಕಾಲೇಜು ಮಂಜೂರಾಗಿದ್ದು, ಕಾರ್ಯಾರಂಭ ಮಾಡಬೇಕಿದೆ. ಪುತ್ತೂರು ಕಾಲೇಜು ಮೂಲಸೌಕರ್ಯ ಪೂರ್ಣಗೊಂಡು ಕಾರ್ಯಾರಂಭ ಮಾಡಿದಲ್ಲಿ ಪ್ರತಿ ವರ್ಷ 60 ವಿದ್ಯಾರ್ಥಿಗಳಿಗೆ ಪಶುವೈದ್ಯ ಪದವಿಗೆ ಪ್ರವೇಶಾವಕಾಶ ಕಲ್ಪಿಸಬಹುದಾಗಿದೆ.

ರಾಜ್ಯ ಸರಕಾರವು 530 ಖಾಲಿ ಇರುವ ಪಶುವೈದ್ಯರ ಹುದ್ದೆ ಭರ್ತಿ ಮಾಡಲು ನೇರ ನೇಮಕಾತಿಗಾಗಿ ಕ್ರಮ ವಹಿಸಿದೆ. ಪಶು ವೈದ್ಯಕೀಯ ಪದವೀಧರರಿಗೆ ಸರಕಾರಿ ಕ್ಷೇತ್ರವಲ್ಲದೇ, ಹೈನುಗಾರಿಕೆ, ಡೈರಿ, ಸಹಕಾರಿ ಕ್ಷೇತ್ರವಲ್ಲದೇ, ಖಾಸಗಿಯಾಗಿಯೂ ಉನ್ನತವಾದ ಬೇಡಿಕೆಯಿದೆ.

ಪ್ರಗತಿಯತ್ತ ಪಶುಸಂಗೋಪನೆ, ಹೈನುಗಾರಿಕೆ: ರಾಜ್ಯದಲ್ಲಿ ಪಶುಸಂಗೋಪನೆಯು ಗ್ರಾಮೀಣ ಪ್ರದೇಶದಲ್ಲಿ ಬಹುಮುಖ್ಯ ಕಸುಬಾಗಿದ್ದು, ಹಾಲು ಉತ್ಪಾದನೆಯಲ್ಲಿ 9 ನೇ ಸ್ಥಾನದಲ್ಲಿ ಮುಂಚೂಣಿಯಲ್ಲಿದೆ. ಕುರಿ/ಮೇಕೆ ಸಾಕಾಣೆಯಲ್ಲಿ 4 ನೇ ಸ್ಥಾನದಲ್ಲಿದೆ. ಮೊಟ್ಟೆ ಉತ್ಪಾದನೆಯಲ್ಲಿ ರಾಜ್ಯವು 3 ನೇ ಸ್ಥಾನದಲ್ಲಿದೆ. ಮಾಂಸ ಉತ್ಪಾದನೆಯಲ್ಲಿ 7 ನೇ ಸ್ಥಾನದಲ್ಲಿದೆ. ಆದ್ದರಿಂದ ರಾಜ್ಯ ಸರ್ಕಾರವು ಜಾನುವಾರು ಉತ್ಪನ್ನಗಳಾದ ಹಾಲು, ಮೊಟ್ಟೆ, ಮಾಂಸ ಹೆಚ್ಚಳ ಮಾಡಲು ಗ್ರಾಮೀಣ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ಇವುಗಳಲ್ಲಿ ಅತೀ ಮುಖ್ಯವಾದ ಕ್ಷೀರಭಾಗ್ಯ, ಪಶುಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದೆ.

ಹಾಲು ಉತ್ಪಾದಕರಿಗೆ ಸಂಘಗಳ ಮುಖಾಂತರ ನೀಡಿದ ಪ್ರತೀ ಲೀಟರ್ ಹಾಲಿಗೆ ರೂ. 4 ರಂತೆ ಪ್ರೋತ್ಸಾಹಧನ ನೀಡುತ್ತಿದೆ. ಈ ಕಾರ್ಯಕ್ರಮಕ್ಕಾಗಿ ಅಂದಾಜು ಪ್ರತೀ ವರ್ಷ 1 ಸಾವಿರ ಕೋಟಿ ರೂ. ಗಳನ್ನು ಸರ್ಕಾರ ನಿಗದಿಪಡಿಸಿದೆ. ಪಶುಭಾಗ್ಯ ಯೋಜನೆಯಡಿ ರೈತರಿಗೆ ಹಸು, ಎಮ್ಮೆ, ಕುರಿ/ಮೇಕೆ ಸಾಕಾಣೆ ಮಾಡಲು, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ ಮಾಡಲು ಒಟ್ಟಾರೆ ರೂ. 67 ಕೋಟಿಗಳಲ್ಲಿ ಅಂದಾಜು 26,000 ಫಲಾನುಭವಿಗಳಿಗೆ ನೀಡಲು ಕಾರ್ಯಕ್ರಮ ರೂಪಿಸಿದೆ. ಈ ಯೋಜನೆಯಡಿ 2015-16 ನೇ ಸಾಲಿನಲ್ಲಿ ಸುಮಾರು 15,700 ಫಲಾನುಭವಿಗಳು ಈಗಾಗಲೇ ಪ್ರಯೋಜನ ಪಡೆದಿರುತ್ತಾರೆ.

ವರ್ಷಕ್ಕೆ 2 ಬಾರಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಸೇರಿದಂತೆ ಎಲ್ಲಾ ರೋಗಗಳಿಗೆ ಲಸಿಕೆ ಹಾಕುವುದರ ಮುಖಾಂತರ ಜಾನುವಾರುಗಳ ರೋಗ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಲಾಗುತ್ತಿದೆ. ಆಕಸ್ಮಿಕವಾಗಿ ಕುರಿ/ಮೇಕೆಗಳು ಮರಣ ಹೊಂದಿದ್ದಲ್ಲಿ ಕುರಿಗಾರರಿಗೆ ಪ್ರತೀ ಕುರಿಗೆ ರೂ. 5,000 ನೆರವು ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಎಲ್ಲಾ ಯೋಜನೆಗಳು ರಾಜ್ಯದಲ್ಲಿ ಪಶುಸಂಗೋಪನೆ ಕ್ಷೇತ್ರವನು ಸಾಕಷ್ಟು ಆಕರ್ಷಿಸಿ, ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ.

ಕೊಯಿಲ ಕಾಲೇಜಿಗೆ ಶಂಕುಸ್ಥಾಪನೆ: ಪುತ್ತೂರು ತಾ. ಕೊಯಿಲದಲ್ಲಿ ನೂತನ ಪಶುವೈದ್ಯಕೀಯ ಕಾಲೇಜಿಗೆ ಸೋಮವಾರ ಬೆಳಿಗ್ಗೆ 11.30 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅರಣ್ಯ ಸಚಿವ ಬಿ. ರಮಾನಾಥ ರೈ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಎ. ಮಂಜು, ಆಹಾರ ಸಚಿವ ಯು.ಟಿ. ಖಾದರ್ ಅವರು ಉಪಸ್ಥಿತರಿರಲಿದ್ದು, ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸುವರು.


Spread the love