ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿ ವೇದಿಕೆ ಸಜ್ಜು
ಸ್ವಚ್ಛಭಾಷೆ, ಸ್ವಚ್ಛ ಜೀವನ, ಸ್ವಚ್ಛ ಸಮಾಜ, ಸ್ವಚ್ಛ ಭಾರತ ಆಶಯದೊಂದಿಗೆ ಉಜಿರೆ ನೆಲದಲ್ಲಿ ಸುಮಾರು 17 ವರ್ಷಗಳ ನಂತರ ಸಾಹಿತ್ಯ ಕಂಪನ್ನು ಪಸರಿಸುವ ಪ್ರಯತ್ನದಲ್ಲಿದ್ದೇವೆ. ಈ ಸಮ್ಮೇಳನದಲ್ಲಿ ನಮ್ಮವರೇ ಆದ ವಾಗ್ಮಿ, ಚಿಂತಕ, ಜನಪದ ಆಸಕ್ತ ಡಾ.ಕೆ.ಚಿನ್ನಪ್ಪ ಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು 21ನೇ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಪ್ರತಾಪ ಸಿಂಹ ನಾಯಕ್ ತಿಳಿಸಿದರು.
ಉಜಿರೆಯಲ್ಲಿ ಜನವರಿ 27, 28 ಮತ್ತು 29ರಂದು ನಡೆಯುವ 21ನೇ ದ.ಕ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅದ್ಧೂರಿಯಾಗಿ ಸಾಹಿತ್ಯ ಸದಭಿರುಚಿಯನ್ನು ಉಣಬಡಿಸುವ ನಿಟ್ಟಿನಲ್ಲಿ ಸ್ವಯಂ ಸೇವಕರು ಅವಿರತ ಪರಿಶ್ರಮ ಪಡುತ್ತಿದ್ದು, ಸಂಘಟಕರು ಈ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿದ್ದಾರೆ ಎಂದರು.
ಸಾಹಿತ್ಯದ ಮೇಲಿನ ಅಭಿಮಾನಕ್ಕೆ ಶ್ರಮ ಅಗತ್ಯ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ಘಟಕದ ಅಧ್ಯಕ್ಷ ಡಾ.ಬಿ.ಯಶೋವರ್ಮ ಸಲಹೆ ನೀಡಿದರು.
ಕನ್ನಡ ಸಾಹಿತ್ಯವನ್ನು ಎಲ್ಲರಿಗೂ ಮನದಟ್ಟು ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಸುವ್ಯವಸ್ಥಿತವಾಗಿ ಆಯೋಜಿಸಲಾಗಿದ್ದು, ತಂತ್ರಜ್ಞಾನ ಯುಗದಲ್ಲಿ ಈ ರೀತಿಯ ಕಾರ್ಯಕ್ರಮಗಳ ಮೂಲಕ ಮಾಹಿತಿ ರವಾನೆಯ ಪ್ರಯತ್ನ ಯಶಸ್ವಿಯಾಗಿ ನಡೆಯುವ ನಿರೀಕ್ಷೆಯಲ್ಲಿದ್ದೇವೆ. ಅಷ್ಟೇ ಅಲ್ಲದೇ ಎಸ್.ಡಿ.ಎಂ ಕಾಲೇಜಿನ ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋ ಈ ದಿಸೆಯಲ್ಲಿ ನೂತನ ಪ್ರಯತ್ನ ಮಾಡಿದೆ. ಸುವರ್ಣ ಸಂಭ್ರಮಾಚರಣೆಯ ಅಂಗವಾಗಿ ನೂರಕ್ಕೂ ಅಧಿಕ ಹಿರಿಯ ಸಾಹಿತಿಗಳ ಧ್ವನಿಯನ್ನು ಮುದ್ರಣ ಮಾಡಿ ಸುವರ್ಣ ಉಪನ್ಯಾಸ ಮಾಲಿಕೆಯನ್ನು ರಚಿಸಲಾಗಿದ್ದು, ಸಮ್ಮೇಳನದಲ್ಲಿ ಇದರ ಉದ್ಘಾಟನೆ ನಡೆಯಲಿದೆ. ಉದ್ಘಾಟನೆಯ ನಂತರ ಉಪನ್ಯಾಸ ಮಾಲಿಕೆ ಯೂಟ್ಯೂಬ್ನಲ್ಲಿ ಲಭ್ಯವಾಗಲಿದೆ.
ಸಮ್ಮೇಳನದ ಅಂಗವಾಗಿ ತಾಲೂಕಿನ ಶಾಲೆಗಳಿಗೆ ರಜಾ ನೀಡುವ ಕುರಿತು ಮನವಿ ಮಾಡಲಾಗಿದ್ದು, ಮಾತುಕತೆ ಪ್ರಗತಿಯಲ್ಲಿದೆ. ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಂದ 10 ಜನ ವಿದ್ಯಾರ್ಥಿಗಳನ್ನು ಕರೆತರುವ ವ್ಯವಸ್ಥೆ ಈಗಾಗಲೇ ಸಂಪನ್ನವಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ವಿಶೇಷವಾಗಿ ಎಸ್.ಡಿ.ಎಂ. ಕಾಲೇಜಿನ ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣದಲ್ಲಿ 28ರಂದು ನಡೆಯುವ ಮಕ್ಕಳ ಸಾಹಿತ್ಯ ಸಂಭ್ರಮ ಈ ಬಾರಿಯ ವಿಶೇಷ ಆಕರ್ಷಣೆ ಎಂದರು. ಆರ್ಥಿಕ ಕ್ರೋಢಿಕರಣ ದೃಷ್ಟಿಯಿಂದ 250 ರೂಪಾಯಿ ಪ್ರತಿನಿಧಿ ಶುಲ್ಕ ಸ್ವೀಕರಿಸಲಿದ್ದು, ಎಲ್ಲರಿಗೂ ಇದು ಅನಿವಾರ್ಯವಲ್ಲ ಎಂದರು.
ಸಾಹಿತ್ಯದ ಬಗೆಗೆ ಹೆಚ್ಚು ಅರಿವು ಮೂಡಿಸುವ ದೃಷ್ಠಿಯಿಂದ ಗೋಷ್ಠಿಗಳಲ್ಲಿ ಸಾಹಿತ್ಯದ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಸಾಮಾಜಿಕ ಗೊಂದಲಗಳಿಗೆ, ಪ್ರಚಲಿತ ವಿದ್ಯಾಮಾನಗಳ ಕುರಿತಂತೆ ಚರ್ಚೆಗೆ ಬಹಿರಂಗ ಅಧಿವೇಶನದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಇದೇ ನೆಲದಲ್ಲಿ 1979ರಲ್ಲಿ ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, 2001ರಲ್ಲಿ ಅಮೃತ ಸೋಮೇಶ್ವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿದ್ದು, 1994ರಿಂದ ತಾಲೂಕು ಸಮ್ಮೇಳನ ಪರಂಪರೆ ಮೊದಲ ಬಾರಿಗೆ ಕೆ.ಟಿ.ಗಟ್ಟಿ ಅಧ್ಯಕ್ಷತೆಯಲ್ಲಿ ಆರಂಭಗೊಂಡು, ಹಿಂದಿನ ವರ್ಷ ಬೆಳಾಲಿನಲ್ಲಿ 14ನೇ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಸಂಪನ್ನವಾಗಿದೆ. ಇದೀಗ ಮತ್ತೆ ಉಜಿರೆಯ ನೆಲದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ರಂಗು ಪಸರಿಸಿದೆ.
ಸಮ್ಮೇಳನದ ಯಶಸ್ವಿ ನಿರ್ವಹಣೆಗೆ 23 ಸಮಿತಿಗಳು ಕಾರ್ಯೋನ್ಮುಖವಾಗಿದ್ದು ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ಸಂಘಟನೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ವಾಹನ ಚಾಲಕ-ಮಾಲಕರ ಸಂಘ ಹೀಗೆ ಹತ್ತು ಹಲವಾರು ಸಂಘಟನೆಗಳು ಕೈಜೋಡಿಸಿದ್ದು, ಸಾಹಿತಿಗಳು, ಕೃಷಿಕರು ಸೇರಿದಂತೆ ಜಿಲ್ಲೆಯ ಸಮಸ್ತರಿಂದ ವಿಶೇಷ ಸ್ಪಂದನೆ ದೊರೆತಿದೆ. ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
27ರಂದು ಶುಕ್ರವಾರ ಸಂಜೆ 4ಕ್ಕೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ಕನ್ನಡ ಭುವನೇಶ್ವರಿ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ ನಡೆಯಲಿದ್ದು, ಸಂಜೆ 5ರಿಂದ ಜಗದ್ಗುರು ಮಧ್ವಾಚಾರ್ಯ ನಗರದ ಧರ್ಮಸ್ಥಳ ಮಂಜಯ್ಯ ಹೆಗ್ಗಡೆ ವೇದಿಕೆ ಮತ್ತು ಉಜಿರೆ ಕೃಷ್ಣ ಪಡ್ವೆಟ್ನಾಯ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸಮ್ಮೇಳನದಲ್ಲಿ ಸಮ್ಮೇಳನದ ಆಶಯ, ಯಕ್ಷಗಾನ ಸಾಹಿತ್ಯ, ತೌಳವ ನಾಡಿನ ಸಂಸ್ಕøತಿ, ಮಹಿಳೆ-ಸಂಸ್ಕøತಿ-ಸಂವರ್ಧನೆ ಎಂಬ ಪ್ರಮುಖ 4 ವಿಷಯದ ಕುರಿತಾದ ವೈಚಾರಿಕ ಗೋಷ್ಠಿಗಳು ನಡೆಯಲಿದೆ. ರಾಜ್ಯದ ವಿವಿಧೆಡೆಯಿಂದ ಚಿಂತಕರು, ವಿದ್ವಾಂಸರು, ಸಾಹಿತಿಗಳು ಸೇರಿದಂತೆ ಅನೇಕ ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ರಂಗದಲ್ಲಿ ಸಾಧನೆ ಮಾಡಿದ 31 ಸಾಧಕರಿಗೆ, 11 ವಿದ್ವಾಂಸರಿಗೆ, 4 ವಿಶೇಷ ಪುರಸ್ಕಾರವನ್ನು ನೀಡಿ ಗೌರವಿಸುವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನದ ಅಂಗವಾಗಿ 3 ದಿನಗಳ ಕಾಲ ವಿಶೇಷ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದ್ದು ಪುಸ್ತಕ ಮತ್ತು ಮಾರಾಟ ಮಳಿಗೆಗಳು ಸಾಹಿತ್ಯಾಸಕ್ತರ ಪಾಲಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. 3 ದಿನಗಳ ಕಾಲ 10 ಸಾವಿರಕ್ಕೂ ಹೆಚ್ಚು ಸಾಹಿತ್ಯಾಸಕ್ತರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ.
ಸಮ್ಮೇಳನದ ಸಲುವಾಗಿ 60*40 ಅಡಿ ಉದ್ದಗಲದ ವಿಶಾಲವಾದ ವೇದಿಕೆ ಸಿದ್ಧಗೊಂಡಿದ್ದು, ಸುಮಾರು 2 ಸಾವಿರ ಜನಕ್ಕೆ ಆಸನ ವ್ಯವಸ್ಥೆ ಏರ್ಪಡಿಸಲಾಗಿದೆ. ವೈಭವದ ಅದ್ಧೂರಿ ಕಾರ್ಯಕ್ರಮಕ್ಕೆ ಉಜಿರೆಯಲ್ಲೆಡೆ ಹಬ್ಬದ ವಾತಾವರಣ ಸೃಷ್ಠಿಯಾಗಿದ್ದು ನಗರವನ್ನು ವಿದ್ಯುತ್ ದೀಪಾಲಂಕಾರ ಮತ್ತು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.
ವಿಶೇಷ ಭಾಗವಾಗಿ ಮಕ್ಕಳ ಸಾಹಿತ್ಯ ಸಂಭ್ರಮ 28ರಂದು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಒಳಾಂಗಣ ಸಭಾಂಗಣದಲ್ಲಿ ಬೆಳಿಗ್ಗೆ 9ರಿಂದ 1ರವರೆಗೆ ನಡೆಯಲಿದೆ. ಸುಮಾರು 1500 ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಮಕ್ಕಳ ಸಾಹಿತ್ಯ ಸಂಸ್ಕøತಿ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಂದ ಸ್ವರಚಿತ ಕಥೆ/ಕವನ ವಾಚನ, ಭಾವಗೀತೆ/ಮಕ್ಕಳ ಗೀತೆಗಳ ಹಾಡು ಮತ್ತು ಅಭಿವ್ಯಕ್ತಿ, ತಜ್ಞರಿಂದ ಕಥೆ/ಕವನ ರಚನೆಯ ಬಗ್ಗೆ ಮಾಹಿತಿ, ಗ್ರಂಥಾಲಯ ಭೇಟಿ, ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ.
ಹಾಸ್ಯಗೋಷ್ಠಿ, ಕವಿಗೋಷ್ಠಿ, ಕವಿನಮನ, ರಂಗೋಲಿ ಸ್ಫರ್ಧೆ ಮತ್ತು ಚಿತ್ರಕಲೆ ಸ್ಪರ್ಧೆ ಮತ್ತು ಪ್ರದರ್ಶನ, ಉದಯರಾಗ, ಯಕ್ಷಗಾನ ಹಾಗೂ ವಿಶೇಷ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ. ರಥಬೀದಿಯಲ್ಲಿ ಪಾರ್ಕಿಂಗ್, ಮೂಲಸೌಕರ್ಯ ವ್ಯವಸ್ಥೆ, ಹಳೆ ಪುಸ್ತಕ ಸಂಗ್ರಹ ಮತ್ತು ಮಾರಾಟ ಈ ಬಾರಿಯ ವಿಶೇಷ ಆಕರ್ಷಣೆ. ದೇವಸ್ಥಾನದ ಸಮೀಪದ ಶಾರದಾ ಮಂಟಪದಲ್ಲಿ ನಿರಂತರವಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಸಮ್ಮೇಳನದ ಸವಿನೆನಪಿಗಾಗಿ 300 ಪುಟಗಳ ಸ್ಮರಣ ಸಂಚಿಕೆ ರೂಪುಗೊಳ್ಳಲಿದ್ದು, ಸಮ್ಮೇಳನದಲ್ಲಿ ಹೊಸ ಕೃತಿಗಳು ಅನಾವರಣಗೊಳ್ಳಲಿದೆ. ಉಜಿರೆಯ ಪತ್ರಿಕೋದ್ಯಮ ವಿಭಾಗದವರ ವಿಶೇಷ ಪರಿಶ್ರಮದಿಂದ ರಾಜ್ಯದ ದಿಗ್ಗಜ ಹಿರಿಯ ಸಾಹಿತಿಗಳ ವಿಚಾರಗಳನ್ನು ಸಂಗ್ರಹಿಸಿ ರೂಪಿಸಿದ ಸಿ.ಡಿ.ಯ ಲೋಕಾರ್ಪಣೆ ಕಾರ್ಯಕ್ರಮ ವೇದಿಕೆಯಲ್ಲಿ ನಡೆಯಲಿದೆ.
29ರಂದು ಭಾನುವಾರ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಸಮೀಕ್ಷೆ-ಸಂವಾದ ನಡೆಯಲಿದ್ದು, ಮಧ್ಯಾಹ್ನ 2 ಘಂಟೆಯಿಂದ 2:30ರವರೆಗೆ ಬಹಿರಂಗ ಅಧಿವೇಶನ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಸಮ್ಮೇಳನದ ವರದಿಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರ ಕಾರ್ಯನಿರ್ವಹಿಸಲಿದ್ದು, ತುರ್ತು ಪರಿಸ್ಥಿತಿಗೆ ಅನುಕೂಲವಾಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪ್ರಥಮ ಚಿಕಿತ್ಸಾ ಘಟಕವನ್ನು ನಿರ್ಮಿಸಲಾಗಿದೆ. ಒಟ್ಟಿನಲ್ಲಿ ಸಮ್ಮೇಳನಕ್ಕೆ ಯಾವ ಕುಂದು ಕೊರತೆಗಳೂ ಆಗದಂತೆ ಅದ್ಧೂರಿಯಾಗಿ ನಡೆಯುವಂತೆ ಮಾಡುವ ನಿಟ್ಟಿನಲ್ಲಿ ಸ್ವಯಂ ಸೇವಕರು ಅವಿರತ ಪರಿಶ್ರಮ ಪಡುತ್ತಿದ್ದು, ಆಯೋಜಕರು ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ವಿಜಯ ರಾಘವ ಪಡ್ವೇಟ್ನಾಯ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಗೌರವ ಕಾರ್ಯದರ್ಶಿ ತಮ್ಮಯ್ಯ ಮತ್ತಿತ್ತರರು ಸಂಘಟಿಕರು ಉಪಸ್ಥಿತರಿದ್ದರು.