Home Mangalorean News Kannada News ದ.ಕ.ಜಿಲ್ಲಾ ಕಾರ್ಯನಿರತ  ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ದ.ಕ.ಜಿಲ್ಲಾ ಕಾರ್ಯನಿರತ  ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

Spread the love

ದ.ಕ.ಜಿಲ್ಲಾ ಕಾರ್ಯನಿರತ  ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಮಂಗಳೂರು:  ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ-2019ಕ್ಕೆ ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಆಟಗಾರ ಸೌಕಿನ್ ಶೆಟ್ಟಿ ಭಾನುವಾರ ನಗರದ ಫುಟ್‍ಬಾಲ್ ಮೈದಾನದಲ್ಲಿ ಚಾಲನೆ ನೀಡಿದರು.

ಈ ಸಂದರ್ಭ ಕರಾವಳಿಯಿಂದಲೇ ತನ್ನ ಕ್ರೀಡಾ ಬೆಳವಣಿಗೆಯನ್ನು ಸ್ಮರಿಸಿದ ಅವರು, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಯಾಗಲು ಸಾಧ್ಯ. ಕರಾವಳಿಯ ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಯನ್ನು ತರುತ್ತಿದ್ದಾರೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಮಾತನಾಡಿ, ಪತ್ರಕರ್ತರದ್ದು ದಿನದ 24 ಗಂಟೆಯೂ ಬಿಡುವಿಲ್ಲದ ಕೆಲಸ. ಇದರ ಮಧ್ಯೆ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಇನ್ನಷ್ಟು ಹುಮ್ಮಸ್ಸು ಹೆಚ್ಚಿಸುವುದು ಒಳ್ಳೆಯ ಕೆಲಸ. ಮಂಗಳೂರಿನ ಪತ್ರಕರ್ತರು ಜಂಟಲ್‍ಮೆನ್‍ಗಳಾಗಿದ್ದು, ಇಲ್ಲಿ ಪೀತ ಪತ್ರಿಕೋದ್ಯಮ ಇಲ್ಲ. ಅಧಿಕಾರಿಗಳು ಮತ್ತು ಪತ್ರಕರ್ತರ ನಡುವಿನ ಬಾಂಧವ್ಯ ಇಲ್ಲಿ ಚೆನ್ನಾಗಿದ್ದು, ಇದು ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಸಮಾಜದ ಏಳಿಗೆಗೆ ನೆರವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಮಾತನಾಡಿ, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ಪತ್ರಕರ್ತರು ಯಾವಾಗಲೂ ಕ್ರಿಯಾಶೀಲರಾಗಿ ಇರಲು ಸಾಧ್ಯವಿದೆ ಎಂದರು.

ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿಣಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಶುಭ ಹಾರೈಸಿದರು.

ಪತ್ರಕರ್ತ ಜಿತೇಂದ್ರ ಕುಂದೇಶ್ವರ ಸ್ವಾಗತಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

ಪತ್ರಕರ್ತರಾದ ಆತ್ಮಭೂಷಣ್, ಭಾಸ್ಕರ ರೈ ಕಟ್ಟ, ವಿಜಯ ಕೋಟ್ಯಾನ್ ಪಡು ವಿವಿಧ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪತ್ರಕರ್ತರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಿತು.


Spread the love

Exit mobile version