ದ. ಕ. ಜಿಲ್ಲೆಯ ಸ್ಥಳೀಯ ಕೃಷಿಕರು ಬೆಳೆದ ಉತ್ಪನ್ನವನ್ನು ಕೊಳ್ಳುವ ಮೂಲಕ ರೈತಾಪಿ ವರ್ಗಕ್ಕೆ ಪ್ರೋತ್ಸಾಹ – ಜೆ.ಆರ್ ಲೋಬೊ
ಮಂಗಳೂರು: ಕೊರೋನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ವೈರಸ್ ನಿಯಂತ್ರಣಕ್ಕಾಗಿ ಹೋರಾಡುವ ದಿಶೆಯಲ್ಲಿ ಮಂಗಳೂರು ದಕ್ಷಿಣದ ಮಾಜಿ ಶಾಸಕರಾದ ಜೆ.ಆರ್ ಲೋಬೋ ರವರ ನೇತೃತ್ವದಲ್ಲಿ ಮಂಗಳೂರಿನ ನೀರುಮಾರ್ಗ ಬಳಿ ಇರುವ ಮೇರ್ಲಪದವು ಎಂಬಲ್ಲಿರುವ ತರಕಾರಿ ಕೃಷಿ ಬೆಳೆಗಾರರ ತೋಟಕ್ಕೆ ತೆರಳಿ ರೈತರು ಬೆಳೆಸಿದ ಸಾವಯವ ಕೃಷಿಯನ್ನು ಕೊಂಡುಕೊಳ್ಳುವ ಮೂಲಕ ಸ್ಥಳೀಯ ಕೃಷಿ ಕಸುಬುದಾರರನ್ನು ಪ್ರೋತ್ಸಾಹಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆಗೆ ಪೂರಕವಾದ ವಾತಾವರಣ ಇಲ್ಲದಿದ್ದರೂ ಇಲ್ಲಿನ ರೈತರು ಕಷ್ಟಪಟ್ಟು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ದೂರದ ಎ.ಪಿ.ಎಂ.ಸಿ ಮಾರುಕಟ್ಟೆಗೆ ಸ್ಥಳಾಂತರ ಮಾಡಿದ್ದು ಅಲ್ಲಿಗೆ ಸಾಗಿಸಲು ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಕೃಷಿ ಕೆಲಸದಲ್ಲಿ ತೊಡಗಿರುವ ರೈತಾಪಿವರ್ಗವನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಈ ಪ್ರಯತ್ನ ಮಾಡಲಾಯಿತು ಎಂದು ಮಾಜಿ ಶಾಸಕರು ತಿಳಿಸಿದರು.
ತೋಟದ ಬೆಳೆಗಳಾದ ಬಸಳೆ, ಅಲಸಂಡೆ, ಬಾಳೆಕಾಯಿ, ಹರಿವೆ ಸೊಪ್ಪು, ಸಿಹಿಕುಂಬಳ, ಬೂದುಕುಂಬಳ ಸೇರಿದಂತೆ ತರಾವರಿ ಬೆಳೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ಕೆಲಸದ ಕಾರ್ಯವೈಖರಿಯನ್ನು ಮೆಚ್ಚಿದ ಸ್ಥಳೀಯ ರೈತ ಲೆಸ್ಲಿ ರೇಗೊ ರವರು ಕೋರೋಣ ವೈರಸ್ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿದರು.
ಈ ಸಂದರ್ಭದಲ್ಲಿ ಟಿ.ಕೆ.ಸುಧೀರ್, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಬಿ. ಸಾಲ್ಯಾನ್, ಕೃತಿನ್ ಕುಮಾರ್, ಉದಯ್ ಕುಮಾರ್, ರಘುರಾಜ್ ಕದ್ರಿ, ರಾಜೇಶ್ ಕದ್ರಿ, ಸಮರ್ಥ್ ಭಟ್, ನಾಗೇಂದ್ರ, ಸಂತೋಷ ನೀರ್ ಮಾರ್ಗ ಮುಂತಾದವರು ಉಪಸ್ಥಿತರಿದ್ದರು. ಬಳಿಕ ಮರೋಳಿ ಎಂಬಲ್ಲಿರುವ ವೈಟ್ ಡೋವ್ಸ್, ಸ್ನೇಹಾಲಯ, ಜಪ್ಪು ಪ್ರಶಾಂತ್ ನಿವಾಸ್ ಮಂಗಳೂರಿನ ಇನ್ನಿತರ ಸೇರಿದಂತೆ ಹಲವು ಅನಾಥಾಲಯಗಳಿಗೆ ತರಕಾರಿಯನ್ನು ಹಂಚಲಾಯಿತು.