ಮಂಜುನಾಥ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದ ಮೋದಿ
ಧರ್ಮಸ್ಥಳ: ಪ್ರಧಾನಿ ನರೇಂದ್ರ ಮೋದಿ ಅವರು ಮಂಜುನಾಥ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಸಾಂಪ್ರದಾಯಿಕ ಪಂಚೆ, ಶಲ್ಯ ಧರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. 20 ನಿಮಿಷಗಳ ದೇಗುಲದ ಒಳಗೆ ಇದ್ದರು. ಕೆಲ ನಿಮಿಷಗಳ ಕಾಲ ಮೋದಿ ಧ್ಯಾನವನ್ನೂ ಮಾಡಿದರು.
ಗರ್ಭ ಗುಡಿ ಪ್ರವೇಶಿಸಿದ ಕೂಡಲೇ ಮೊದಿ ಅವರು ದೇವಾಲಯದ ವಸ್ತ್ರಸಂಹಿತೆಯನ್ನು ಪಾಳಿಸಿದರು. ಪಂಚೆ ಮತ್ತು ಶಲ್ಯ ಧರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಇದಕ್ಕೂ ಮೊದಲು ವೇದಘೋಷಗಳೊಂದಿಗೆ ಪ್ರಧಾನಿ ಅವರಿಗೆ ಧರ್ಮಸ್ಥಳದಲ್ಲಿ ಸ್ವಾಗತ ನೀಡಲಾಯಿತು. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಅವರ ಕುಟುಬದ ಸದಸ್ಯರು ಸೇರಿದಂತೆ ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತಕುಮಾರ್ ಅವರು ಸಹ ಪ್ರಧಾನಿ ಜತೆಯಲ್ಲಿದ್ದರು.
ಧರ್ಮಸ್ಥಳದಿಂದ ಮೋದಿ ಅವರು ರಸ್ತೆ ಮಾರ್ಗವಾಗಿ ಉಜಿರೆಗೆ ತೆರಳಿದರು.
ಧರ್ಮಸ್ಥಳಕ್ಕೆ ಆಗಮಿಸಿದ ಪ್ರಧಾನಿ ಮೋದಿ
ಧರ್ಮಸ್ಥಳ: ವಿಶೇಷ ವಾಯುಪಡೆ ಹೆಲಿಕಾಪ್ಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆ 11 ಗಂಟೆ ಸುಮಾರಿಗೆ ಧರ್ಮಸ್ಥಳಕ್ಕೆ ಆಗಮಿಸಿದರು.
ಪ್ರಧಾನಿ ಅವರನ್ನು ಕೇಂದ್ರ ಸಚಿವರುಗಳಾದ ಸದಾನಂದ ಗೌಡ ಮತ್ತು ಅನಂತ್ ಕುಮಾರ್ ಹಾಗೂ ರಾಜ್ಯ ಸರ್ಕಾರದ ಆಹಾರ ಸಚಿವ ಯು.ಟಿ.ಖಾದರ್ ಬರಮಾಡಿಕೊಂಡರು.
ಈ ವೇಳೆ ಮಂಗಳೂರು ಮಹಾನಗರಪಾಳಿಕೆಯ ಮೇಯರ್, ಬಿಜೆಪಿ ಸಂಸದರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಇಲ್ಲಿಂದ ವಿಶೇಷ ಕಾರಿನಲ್ಲಿ ಪ್ರಧಾನಿಗಳು ಮಂಜುನಾಥ ಸ್ವಾಮಿ ದೇವಾಲಯಕ್ಕೆ ತೆರಳಿದರು.