ಧರ್ಮಸ್ಥಳದಲ್ಲಿ ಅಂತರಾಷ್ಟ್ರೀಯ ಯೋಗೋತ್ಸವ: ಯೋಗದ ಬಗ್ಗೆ ಜಾಗೃತಿ ಮೂಡಿಸಲು ದೇಶದೆಲ್ಲೆಡೆ ಯೋಗ ಗ್ರಾಮಗಳು
ಉಜಿರೆ: ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗ್ಗೆ ಜನರಲ್ಲಿ ಅರಿವು, ಜಾಗೃತಿ ಮೂಡಿಸಲು ಈಗಾಗಲೇ ಕೆಲವು ಸ್ಥಳಗಳಲ್ಲಿ ಯೋಗ ಗ್ರಾಮಗಳನ್ನು ರೂಪಿಸಿದ್ದು ಇದನ್ನು ದೇಶದೆಲ್ಲೆಡೆ ವಿಸ್ತರಿಸಲಾಗುವುದು ಎಂದು ಕೇಂದ್ರದ ಆಯುಷ್ ಇಲಾಖಾ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಂತರರಾಷ್ಟ್ರೀಯ ಯೋಗೋತ್ಸವ ಮತ್ತು ಎರಡನೇ ಒಕ್ಕೂಟ ಯೋಗ ಕ್ರೀಡಾ ಕಪ್ ಉದ್ಘಾಟನಾ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.
ಗೋವಾದಲ್ಲಿ ಸದ್ಯದಲ್ಲಿಯೇ ಹೊಸ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆ ಪ್ರಾರಂಭಿಸಲಾಗುವುದು.
ಉಜಿರೆಯಲ್ಲಿರುವ ಎಸ್.ಡಿ.ಎಮ್. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿಗೆ ದೇಶದಲ್ಲಿಯೇ ಪ್ರಥಮ ಉತ್ಕøಷ್ಠತಾ ಕಾಲೇಜು ಎಂದು ಆಯುಷ್ ಸಚಿವಾಲಯದಿಂದ ಮಾನ್ಯತೆ ನೀಡಲಾಗಿದೆ ಎಂದು ಸಚಿವರು ಪ್ರಕಟಿಸಿದರು.
ಮಂಡ್ಯ ಜಿಲ್ಲೆಯ ನಾಗಮಂಗಲ, ಭುವನೇಶ್ವರ ಹಾಗೂ ಪಶ್ಚಿಮ ಬಂಗಾಲದಲ್ಲಿ ಹೊಸ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ.
ಪೂನಾದಲ್ಲಿರುವ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಿ ಅಲ್ಲಿ ಸಂಶೋಧನಾ ಕೇಂದ್ರವನ್ನೂ ಪ್ರಾರಂಭಿಸಲಾಗುವುದು. ದೇಶದೆಲ್ಲೆಡೆ ನೂರು ಯೋಗ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.
ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಬದಲಾಯಿಸಿ ಪ್ರಕೃತಿ ಚಿಕಿತ್ಸಾ ವಿಧಾನ ಮತ್ತು ಯೋಗಾಭ್ಯಾಸದಿಂದ ಆರೋಗ್ಯಪೂರ್ಣ ಜೀವನ ನಡೆಸಬಹುದು ಎಂದು ಸಚಿವರು ತಿಳಿಸಿದರು.
ಯೋಗೋತ್ಸವವನ್ನು ಉದ್ಘಾಟಿಸಿದ ಆಸ್ಟ್ರೀಯಾದ ಮಹಾಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದಜಿ ಮಾತನಾಡಿ ಯೋಗ ಎಂಬುದು ಧರ್ಮ ಅಲ್ಲ. ಅದು ಕಲೆಯೂ, ವಿಜ್ಞಾನವೂ ಆಗಿದೆ. ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಹೊಂದಬಹುದು. ಮನೆಯಲ್ಲಿ ತಾಯಿ-ತಂದೆ ಮಮತೆಯಿಂದ ನೀಡುವ ಶಿಕ್ಷಣ ಮತ್ತು ಸಂಸ್ಕಾರ ಶ್ರೇಷ್ಠವಾಗಿದೆ. ಸರಿಯಾಗಿ ತಿಳಿದುಕೊಂಡು ಯೋಗಾಭ್ಯಾಸ ಮಾಡಬೇಕು. ಯೋಗ ಶಿಕ್ಷಕರು ತಪ್ಪು ಮಾಹಿತಿ ನೀಡಬಾರದು ಎಂದು ಅವರು ಕಿವಿಮಾತು ಹೇಳಿದರು. ಸಸ್ಯಾಹಾರ ಸೇವನೆ ಮಾಡಬೇಕು. ಕೃಷಿಯೇ ಉತ್ತಮ ಸಂಸ್ಕøತಿ. ಯೋಗದಿಂದ ನೈತಿಕವಾಗಿ ಆರೋಗ್ಯಪೂರ್ಣ ಸಮಾಜ ರೂಪುಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಧರ್ಮಸ್ಥಳದ ವತಿಯಿಂದ ಬೆಂಗಳೂರು ಮತ್ತು ದುಬಾೈನಲ್ಲಿ ಸದ್ಯದಲ್ಲಿಯೇ ಹೊಸ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಾರಂಭಿಸಲಾಗುವುದು ಎಂದು ಪ್ರಕಟಿಸಿದರು.
ಆಧುನಿಕ ಜೀವನ ಶೈಲಿ ಮತ್ತು ತಂತ್ರಜ್ಞಾನಕ್ಕೆ ದಾಸರಾಗಿ ನಾವು ಆರೋಗ್ಯ ಭಾಗ್ಯವನ್ನು ಕಳೆದುಕೊಳ್ಳಬಾರದು. ಪಾಶ್ಚಾತ್ಯದ ಭೋಗ ಜಿವನಕ್ಕೆ ಬಲಿಯಾಗದೆ ಭಾರತದ ಯೋಗ ಜೀವನ ಮಾಡಬೇಕು. ವಿಶ್ವದೆಲ್ಲೆಡೆ ಈಗ ಯೋಗ, ಪ್ರಕೃತಿ ಚಿಕಿತ್ಸೆ ಮತ್ತು ಆಯುರ್ವೇದಕ್ಕೆ ಹೆಚ್ಚಿನ ಮಾನ್ಯತೆ ದೊರಕುತ್ತಿದೆ. ನಿತ್ಯವೂ ಯೋಗ, ಧ್ಯಾನ, ಪ್ರಾರ್ಥನೆ ಮಾಡುವುದರಿಂದ ಒತ್ತಡ ನಿವಾರಣೆಯಾಗಿ ಶಕ್ತಿ ವರ್ಧನೆಯೊಂದಿಗೆ ಶಾಂತಿಯಿಂದ ಆರೋಗ್ಯಪೂರ್ಣ ಜೀವನ ನಡೆಸಬಹುದು. ಯುವ ಜನತೆ ಆರೋಗ್ಯ ಭಾಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಯೋಗ ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಅಗರ್‍ವಾಲ್ ಯೋಗೋತ್ಸವದ ಬಗ್ಗೆ ಮಾಹಿತಿ ನೀಡಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಾ. ಪ್ರಶಾಂತ್ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.
ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್‍ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಧನ್ಯವಾದವಿತ್ತರು.
ಯೋಗಪಟುಗಳು ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು.
ಮೂರು ದಿನ ನಡೆಯುವ ಯೋಗೋತ್ಸವದಲ್ಲಿ ದೇಶ-ವಿದೇಶಗಳಿಂದ 500 ಮಂದಿ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.