ಧರ್ಮಸ್ಥಳ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ಎಲ್ಲೆಲ್ಲೂ ಮದುವೆಯ ಸಂಭ್ರಮ – ಸಡಗರ. ಹಬ್ಬದ ವಾತಾವರಣ. ಸಂಜೆ 6.50 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ವೇದ ಘೋಷ ಮಂತ್ರ ಪಠಣದೊಂದಿಗೆ 127 ಜೋಡಿ ವಧೂ – ವರರು ಒಂದೇ ಚಪ್ಪರದಡಿಯಲ್ಲಿ ಆಯಾ ಜಾತಿ – ಸಂಪ್ರದಾಯದ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡಿದರು.
22ಜೊತೆ ಪರಿಶಿಷ್ಟ ಜಾತಿಯವರು ವಿವಾಹವಾದರೆ, 19 ಜೊತೆ ಅಂತರ್ಜಾತಿಯ ವಿವಾಹವಾಗಿರುವುದು ಈ ಬಾರಿಯ ವಿಶೇಷತೆಯಾಗಿದೆ.
11,925ನೇ ಜೋಡಿಯಾದ ಚಿಕ್ಕಮಗಳೂರಿನ ಮನೋಜ್ ಎ.ಎಸ್. ಮತತು ದಿವ್ಯ ಇವರಿಗೆ ವಿಶೇಷ ವೇದಿಕೆಯನ್ನು ಕಲ್ಪಿಸಲಾಗಿದೆ. ವಧುವಿಗೆ ಕಿವಿ ಕೇಳುವುದಿಲ್ಲ ಹಾಗೂ ಮಾತನಾಡಲು ಆಗುವುದಿಲ್ಲ.
ಶುಕ್ರವಾರ ಬೆಳಿಗ್ಗೆಯಿಂದಲೇ ಹೆಗ್ಗಡೆಯವರು ಬೀಡಿನಲ್ಲಿ ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಕಣ ಮತ್ತು ಮೂಗುತಿ ವಿತರಿಸಿದರು. ಬಳಿಕ ವಧು – ವರರು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾ ಭವನ ಪ್ರವೇಶಿಸಿದರು. ಅಲ್ಲಿ ಗಣ್ಯ ಅತಿಥಿಗಳು ವಧುವಿಗೆ ಮಂಗಳ ಸೂತ್ರ ನೀಡಿದರು.
ವಧೂ – ವರರ ಪ್ರಮಾಣ ವಚನ : ಧರ್ಮಸ್ಥಳದಲ್ಲಿ ಶುಭ ಮುಹೂರ್ತದಲ್ಲಿ ದಂಪತಿಗಳಾಗಿ ಪವಿತ್ರ ಬಾಂಧವ್ಯ ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ ಮತ್ತು ಕಾಮದಲ್ಲಿ ಸಹಚರರಾಗಿ ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಯಾವುದೇ ದುರಭ್ಯಾಸಕ್ಕೆ ಬಲಿಯಾಗದೆ ಸಾರ್ಥಕ ಜೀವನ ನಡೆಸುತ್ತೇವೆ ಎಂದು ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಮತ್ತು ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣವಚನ ಬದ್ಧರಾಗುತ್ತೇವೆ.
ಮದುವೆಯ ಬಳಿಕ ದೇವರ ದರ್ಶನ ಮಾಡಿ, ಅನ್ನಪೂರ್ಣ ಛತ್ರದಲ್ಲಿ ಮದುವೆ ಊಟ ಸ್ವೀಕರಿಸಿ ದಂಪತಿಗಳು ಊರಿಗೆ ತೆರಳಿದರು.
ಜಾತಿ ಪದ್ಧತಿ ನಿವಾರಣೆಗೆ ಅಂತರ್ಜಾತಿಯ ಮದುವೆ ಸಹಕಾರಿಯಾಗಿದೆ :
ಮುಜರಾಯಿ ಸಚಿವ ಮನೋಹರ್ ತಹಶೀಲ್ದಾರ್ ಮಾತನಾಡಿ, ಜಾತಿ ಪದ್ಧತಿ ನಿವಾರಣೆಗೆ ಅಂತರ್ಜಾತಿಯ ಮದುವೆ ಸಹಕಾರಿಯಾಗಿದೆ ಎಂದು ಹೇಳಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸಾಮೂಹಿಕ ವಿವಾಃದಲ್ಲಿ ಮದುವೆಯಾದರೆ ಸರ್ಕಾರದಿಂದ 50 ಸಾವಿರ ರೂ ನೆರವು ನೀಡಲಾಗುವುದು. ಪರಿಶಿಷ್ಠ ಜಾತಿಯ ಮಹಿಳೆ ಅಂತರ್ಜಾತಿಯ ವಿವಾಹವಾದರೆ ಮೂರು ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿಯ ಪುರುಷ ಅಂತರ್ಜಾತಿಯ ವಿವಾಹವಾದರೆ ಎರಡು ಲಕ್ಷ ರೂ. ನೆರವು ನೀಡಲಾಗುವುದು.
ಈಗಾಗಲೇ ಮುಖ್ಯಮಂತ್ರಿಯವರು ಬಜೆಟ್‍ನಲ್ಲಿ ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಟ್ಟಿದ್ದಾರೆ ಎಂದು ಸಚಿವರು ಪ್ರಕಟಿಸಿದರು.
ಧರ್ಮಸ್ಥಳದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹವು ಕಾನೂನು ಬದ್ಧವಾಗಿದ್ದು ಸರ್ಕಾರದ ನಿಯಮದಂತೆ ವಿವಾಹ ನೋಂದಣಿ ಮಾಡಲಾಗುತ್ತದೆ. ಇದರಿಂದ ಮುಂದೆ ದಂಪತಿಗಳು ಸರ್ಕಾರದ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ.
ಧರ್ಮಸ್ಥಳದ ಮಾದರಿಯನ್ನು ಅನೇಕ ಮಠ – ಮಂದಿರಗಳು ಹಾಗೂ ಸೇವಾ ಸಂಸ್ಥೆಗಳು ಅನುಸರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಕ್ರಿಕೆಟ್ ಆಟಗಾರ ಬ್ರಿಜೇಶ್ ಪಟೇಲ್, ಶಾಸಕ ಕೆ. ವಸಂತ ಬಂಗೇರ, ಬಿರ್ಲಾ ಕಂಪೆನಿಯ ಅಧಿಕಾರಿ ಆದಿತ್ಯ ಸರೋಗಿ ಮತ್ತು ಸಂತೋಷ್ ಮೆನನ್ ಶುಭಾಶಂಸನೆ ಮಾಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಸಾಮೂಹಿಕ ವಿವಾಹ ಅಂದರೆ ಸರಳ ವಿವಾಹ. ಬಡವರ ವಿವಾಹ ಎಂಬ ತಪ್ಪು ಕಲ್ಪನೆ ಸಲ್ಲದು ಎಂದು ಹೇಳಿದರು. ಅಂತರ್ಜಾತಿಯ ವಿವಾಹವಾದವರು ಸಮಾನತೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಸಲಹೆ ನೀಢಿದರು.
ಸಾಮೂಹಿಕ ವಿವಾಹಕ್ಕೆ ಪ್ರತಿವರ್ಷ ನೆರವು ನೀಡಿ ಪ್ರೋತ್ಸಾಹಿಸುತ್ತಿರುವ ಕೊಲ್ಕತ್ತಾದ ಬಿರ್ಲಾ ಕಲ್ಯಾಣ ನಿಧಿ ಟ್ರಸ್ಟ್ ಹಾಗೂ ದಾನಿಗಳನ್ನು ಹೆಗ್ಗಡೆಯವರು ಕೃತಜ್ಞತೆಯೊಂದಿಗೆ ಸ್ಮರಿಸಿದರು.
ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.