ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ ; ದೇವರ ಬಗ್ಗೆ ಭಯ ಇರಬಾರದು. ಭಕ್ತಿ ಇರಬೇಕು

Spread the love

ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ ; ದೇವರ ಬಗ್ಗೆ ಭಯ ಇರಬಾರದು. ಭಕ್ತಿ ಇರಬೇಕು

ಉಜಿರೆ: ದೇವರ ಬಗ್ಗೆ ಭಯ ಇರಬಾರದು. ಭಕ್ತಿ, ಪ್ರೀತಿ ಮತ್ತು ನಂಬಿಕ ಇರಬೇಕು. ದೇವರ ಭಕ್ತಿ ಮಾಡುವಾಗ ಭಯ, ಸಂಶಯ, ಅಪನಂಬಿಕೆ, ಅರೆನಂಬಿಕೆ ಇರಬಾರದು. ಭಕ್ತಿಯಲ್ಲಿ ಬೂಟಾಟಿಕೆ ಸಲ್ಲದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಮಂಗಳವಾರ ಧರ್ಮಸ್ಥಳದಲ್ಲಿ ಶಿವರಾತ್ರಿ ಸಂದರ್ಭ ಆಹೋ ರಾತ್ರಿ ನಡೆಯುವ ಶಿವಪಂಚಾಕ್ಷರಿ ಪಠಣವನ್ನು ಉದ್ಘಾಟಿಸಿ ಮಾತನಾಡಿದರು.

ದೇಹ ಮತ್ತು ಆತ್ಮನ ವ್ಯತ್ಯಾಸವನ್ನು ನಾವು ಅರಿತು ಸತ್ಕಾರ್ಯ, ವ್ರತ – ನಿಯಮಗಳು, ಉಪವಾಸ, ಭಕ್ತಿ, ಪ್ರಾರ್ಥನೆ ಮೊದಲಾದ ಧ್ಯಾನದಿಂದ ನಮ್ಮ ದೋಷಗಳನ್ನೆಲ್ಲ ಕಳೆದು ಆತ್ಮನನ್ನು ಪವಿತ್ರ ಹಾಗೂ ಪರಿಶುದ್ಧವಾಗಿ ಮಾಡಬೇಕು. ದೇವರ ಧ್ಯಾನ ಮತ್ತು ಶುಭ ಚಿಂತನೆಗಳಿಂದ ದೈವತ್ವದೊಂದಿಗೆ ನಮ್ಮಲ್ಲಿ ದಿವ್ಯತೆ, ತೇಜಸ್ಸು ಹಾಗೂ ಆದರ್ಶ ವ್ಯಕ್ತಿತ್ವ ಮೂಡಿಬರುತ್ತದೆ. ದೇವರು ಸರ್ವ ವ್ಯಾಪಿಯಾದರೂ ಆತನನ್ನು ಗುರುತಿಸುವ ಕಣ್ಣು, ಹೃದಯ ನಮ್ಮಲ್ಲಿರಬೇಕು. ಭಗವಂತನ ಸಾನ್ನಿಧ್ಯ ಶಕ್ತಿಯ ಕೇಂದ್ರವಾಗಿದ್ದು ಅಲ್ಲಿ ದೃಢ ಭಕ್ತಿಯಿಂದ ಪ್ರಾರ್ಥನೆ, ಧ್ಯಾನ ಮಾಡಿದಾಗ ದೇವರ ಸ್ಪರ್ಶ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ. ನಮ್ಮ ಸಂಕಷ್ಟಗಳೆಲ್ಲಾ ಪರಿಹಾರವಾಗುತ್ತವೆ.

ತಾಯಿ – ತಂದೆ ನಮ್ಮನ್ನು ಪ್ರೀತಿಸಿ ಸದಾ ರಕ್ಷಿಸುವಂತೆ ದೇವರು ಸದಾ ಭಕ್ತರನ್ನು ಕಾಪಾಡುತ್ತಾರೆ. ಮಾತು ಬಿಡ ಮಂಜುನಾಥ ಎಂಬ ಮಾತು ಸದಾ ನೆನಪಿಡಬೇಕು. ನೇರ ನಡೆ – ನುಡಿ ಇರಬೇಕು. ಮಧುರವಾಣಿ, ನಗುಮೊಗದಿಂದ ನಾವು ಎಲ್ಲರ ಪ್ರೀತಿ – ವಿಶ್ವಾಸಕ್ಕೆ ಪಾತ್ರರಾಗಿ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಹೇಮಾವತಿ ವಿ. ಹೆಗ್ಗಡೆಯವರು ಉಪಸ್ಥಿತರಿದ್ದರು.

ಇಡೀ ರಾತ್ರಿ ಭಕ್ತರು ಶಿವಪಂಚಾಕ್ಷರಿ ಪಠಣ ಮಾಡಿದರು. ದೇವಸ್ಥಾನದಲ್ಲಿ ನಾಲ್ಕು ಜಾವಗಳಲ್ಲಿ ಭಕ್ತರು ದೇವರ ದರ್ಶನ ಮಾಡಿ ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು.


Spread the love