ಧರ್ಮಸ್ಥಳದಲ್ಲಿ 46ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ
ಧರ್ಮಸ್ಥಳ: ನಾಡಿನ ಪವಿತ್ರ ಯಾತ್ರಾಸ್ಥಳವಾದ ಧರ್ಮಸ್ಥಳದಲ್ಲಿ ಗುರುವಾರ ಎಲ್ಲೆಲ್ಲೂ ಮದುವೆಯ ಸಂಭ್ರಮ-ಸಡಗರ. ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ) ಅಮೃತವರ್ಷಿಣಿ ಸಭಾ ಭವನ – ಎಲ್ಲವನ್ನೂ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ಹೆಗ್ಗಡೆಯವರು ಬೀಡಿನಲ್ಲಿ ವಧುವಿಗೆ ಸೀರೆ, ರವಿಕೆ ಕಣ ಹಾಗೂ ವರನಿಗೆ ಧೋತಿ, ಶಾಲು, ಅಂಗಿ ವಿತರಿಸಿದರು.
ಆಯಾ ಜಾತಿ ಪದ್ಧತಿಯ ವಿಧಿ-ವಿಧಾನಗಳೊಂದಿಗೆ ಅಮೃತವರ್ಷಿಣಿ ಸಭಾ ಭವನದಲ್ಲಿ ವೇದ ಮಂತ್ರ ಘೋಷ ಪಠಣದೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ಸಂಹೆ ಗಂಟೆ 6.50 ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 102 ಜೊತೆ ವಧು-ವರರು ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂಧ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಕಿಶೋರ್ ಚಂದ್ರ, ಶಾಸಕರುಗಳಾದ ಕೆ. ವಸಂತ ಬಂಗೇರ ಮತ್ತು ಕೆ. ಅಭಯಚಂದ್ರ ಜೈನ್, ಚಲನಚಿತ್ರ ಕಲಾವಿದರಾದ ಯಶ್ ಮತ್ತು ರಾಧಿಕಾ ಪಂಡಿತ್, ಕೊಲ್ಲತ್ತಾದ ಬಿರ್ಲಾ ನಿಗಮದ ಕಾರ್ಯನಿರ್ವಾಹ ಅಧ್ಯಕ್ಷ ಸಂದೀಪ್ ರಂಜನ್ ಘೋಸ್ ಶುಭಾಶಂಸನೆ ಮಾಡಿದರು.
ಸರಳ ವಿವಾಹವೇ ಸಾಮೂಹಿಕ ಮದುವೆಯ ಉದ್ದೇಶ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂಧ್ರ ಹೆಗ್ಗಡೆಯವರು ಮಾತನಾಡಿ ಗೃಹಸ್ಥನಾದರೆ ವ್ಯಕ್ತಿತ್ವ ಪೂರ್ಣವಾಗುತ್ತದೆ. ಸರಳ ವಿವಾಹವೇ ಸಾಮೂಹಿಕ ಮದುವೆಯ ಉದ್ದೇಶವಾಗಿದೆ ಅಲ್ಲದೆ ಬಡವರಿಗಾಗಿ ಸಾಮೂಹಿಕ ವಿವಾಹ ಏರ್ಪಡಿಸುವುದಿಲ್ಲ ಎಂದು ಹೇಳಿದರು.
ಪಾಶ್ಚಾತ್ಯರು ಹೇಳುವಂತೆ ಮದುವೆ ಎಂಬುದು ಬಂಧನವಲ್ಲ. ಸಾರ್ವಜನಿಕವಾಗಿ ಗುರು-ಹಿರಿಯರ ಮುಂದೆ ಗೃಹಸ್ಥಾಶ್ರಮಕ್ಕೆ ಸೇರುವುದರಿಂದ ಧಾರ್ಮಿಕ ಹೊಣೆಗಾರಿಕೆ ಹಾಗೂ ಜವಾಬ್ದಾರಿ ಹೆಚ್ಚಾಗುತ್ತದೆ. ಯಾವುದೇ ಕಾರಣಕ್ಕೂ ದಾಂಪತ್ಯದಲ್ಲಿ ವಿರಸ ಬರಬಾರದು ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.
ಎಲ್ಲಾ ಕಡೆ ಒಳ್ಳೆಯ ಮಳೆ-ಬೆಳೆಯಾಗಿ ಎಲ್ಲರ ಜೀವನ ಸಮೃದ್ಧವಾಗಲಿ, ಲೋಕಕಲ್ಯಾಣವಾಗಲಿ ಎಂದು ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು.
ಡಾ. ಶ್ರೀಧರ ಭಟ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧನ್ಯವಾದವಿತ್ತರು ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.
ಬಾಕ್ಸ್ ಐಟಮ್:
• 12000ನೇ ಜೋಡಿಯಾದ ಬ್ರಹ್ಮಾವರದ ಕಿರಣ್ ಮತ್ತು ಕಾರ್ಕಳದ ಶ್ರೀದೇವಿ – ಇಬ್ಬರೂ ಮೂಕರಾಗಿದ್ದು ಪ್ರತ್ಯೇಕ ವೇದಿಕೆ ನೀಡಿ ಗೌರವಿಸಲಾಯಿತು.
• 11 ಜೊತೆ ಅಂತರ್ಜಾತೀಯ ವಿವಾಹ ನಡೆಯಿತು. 15 ಜೊತೆ ಪರಿಶಿಷ್ಟ ಜಾತಿಯವರು ಮದುವೆಯಾದರು.
• ನೂತನ ದಂಪತಿಗಳು ದೇವರ ದರ್ಶನ ಮಾಡಿ ಅನ್ನಪೂರ್ಣ ಛತ್ರದಲ್ಲಿ ಭೊಜನ ಸ್ವೀಕರಿಸಿ ಊರಿಗೆ ತೆರಳಿದರು.
• 1972ರಿಂದ ಇಂದಿನ ವರೆಗೆ 12029 ಜೊತೆ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದಾರೆ.