ಧರ್ಮಸ್ಥಳದ ‘ಲಕ್ಷದೀಪೂತ್ಸವ’ : ಬದುಕಿನ ಧರ್ಮ ದಿಗ್ದರ್ಶನ

Spread the love

ಧರ್ಮಸ್ಥಳದ ‘ಲಕ್ಷದೀಪೂತ್ಸವ’ : ಬದುಕಿನ ಧರ್ಮ ದಿಗ್ದರ್ಶನ

‘ಭಾವೈಕ್ಯಕ್ಕಾಗಿ ದೇಶದುದ್ದಗಲ ಅಲೆದಾಡುವರೆ, ನಿಂತದ್ದೆ ಹೊಲ ಅಲ್ಲಿ ಬೆಳೆವುದೇ ಫಲವೂ’. ಇದು ಅಡಿಗರ ಕವಿತೆ. ಭಾರತದ ಒಟ್ಟು ಸಂಸ್ಕøತಿಯನ್ನು ಈ ಎರಡೇ ಸಾಲುಗಳು ಧ್ವನಿಸುತ್ತವೆ. ಹೆಚ್ಚೆ ಹೆಚ್ಚೆಗೂ ಇಲ್ಲಿ ರಾಮ ಓಡಾಡಿದ ನೆಲವಿದೆ. ಪಾಂಡವರು, ಕೃಷ್ಣರ ಕಥೆ ನಮ್ಮೂಳಗೆ ಸೇರಿದೆ. ಕಾಲಾನುಕ್ರಮದಲ್ಲಿ ಸಮಾಜದ ಸ್ಥಿತ್ಯಂತರಗಳು. ಜಾತಿ ಪದ್ದತಿ, ಅಮಾನುಷ ಆಚರಣೆಗಳು ಇನ್ನೂ ಹಲವು. ಇವೆಲ್ಲವನ್ನು ದಾಟಿ ಸಮಾಜ ಬೆಳೆದಿದೆ. ಒಂದು ಕಾಲದಲ್ಲಿ ಸಮಾನತೆ ಕೂಗಾಗಿದ್ದರೆ ಈಗ ಹಕ್ಕಾಗಿ ಬದಲಾಗಿದೆ.

dharmastala-laksha-deepotsava2-20161130laksha-deepa

ಇವೆಲ್ಲದರ ನಡುವೆಯೂ ನಾವು ಅಡಿಗರು ಹೇಳಿದಂತೆ ಭಾವೈಕ್ಯತೆಯನ್ನು ಉಳಿಸಿಕೊಂಡು ಬಂದಿದ್ದೇವೆ. ನಮ್ಮ ಎಷ್ಟೋ ಆಚರಣೆಗಳು ಇದನ್ನು ಸಾದರಪಡಿಸುತ್ತವೆ. ಜಾತ್ರೆ, ಉತ್ಸವಗಳು ಮತ್ತು ಇಂತಹ ಅನೇಕ ಆಚರಣೆಗಳು ಮೊದಲಿನಿಂದಲೂ ಸಾಂಸ್ಕøತಿಕವಾಗಿವೂ ಸಾಮಾಜಿಕವಾಗಿಯೂ ಭಾವೈಕ್ಯದ ಸಂಕೇತಗಳಾಗಿವೆ.

ಇಂತಹ ಆಚರಣೆಗಳು ಮೇಲು ನೋಟಕ್ಕೆ ಧಾರ್ಮಿಕವಾಗಿ ಕಂಡರೂ ಅಂತರಾಳದಲ್ಲಿ ಎಲ್ಲರ ಒಗ್ಗೂಡಿಕೆಯ ಆಶಯಗಳನ್ನು ಒಳಗೊಂಡಿವೆ. ನಮ್ಮಲ್ಲೇ ಇರುವ ಇಂತಹ ಏಕತೆಯ ಎಷ್ಟೋ ಉದಾಹರಣೆಗಳನ್ನು ಮೆರೆತು ಇಂದು ಕೋಮುವಾದ ಈ ಎಲ್ಲವನ್ನೂ ತನ್ನ ವಶ ಮಾಡಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ. ಇಂತಿದ್ದರೂ ಸಹ, ವರ್ಷಕ್ಕೊಮ್ಮೆ ನಡೆಯುವ ಇಂತಹ ಉತ್ಸವಗಳು ನಡೆಯುತ್ತಲೇ ಇವೆ. ನಮ್ಮಲ್ಲೇ ಅಡಗಿರುವ ಐಕ್ಯತೆಯನ್ನು ನಾವೇ ಗುರುತಿಸಿಕೊಳ್ಳದ ಸ್ಥಿತಿಗೆ ತಲುಪಿದ್ದರೂ ನಮ್ಮ ‘ಬದುಕು’ ಸದಾ ಅದನ್ನು ಜ್ಞಾಪಿಸುತ್ತದೆ.

dharmastala-laksha-deepotsava1-20161130 dharmastala-laksha-deepotsava-20161130

ಇತ್ತೀಚೆಗೆ ಸಮಾಪ್ತಿಗೊಂಡ ಧರ್ಮಸ್ಥಳದ ‘ಲಕ್ಷದೀಪೂತ್ಸವ’ ಇದನ್ನು ಮತ್ತೆ ನಮ್ಮನ್ನು ಯೋಚನೆಗೆ ಹಚ್ಚಿದೆ. ಇದೊಂದೇ ಅಲ್ಲ. ನಮ್ಮ ನಮ್ಮ ಊರು-ಕೇರಿಗಳಲ್ಲಿ ನಡೆಯುವ ಜಾತ್ರೆಯೂ ಈ ಪಾತ್ರ ನಿರ್ವಹಿಸುತ್ತದೆ. ಈ ಸಂದಿಗ್ಧ ಸ್ಥಿತಿಯಲ್ಲಿ ಯೋಚನೆ ಮಾಡುವುದು ಸೂಕ್ತ ಕೂಡ. ಲಕ್ಷದೀಪೂತ್ಸವದ ವಿಶೇಷ ಏನೆಂದರೆ, ಐದು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಕಡೆಯ ಎರಡು ದಿನ ಕ್ರಮವಾಗಿ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನಗಳು ಜರುಗುತ್ತವೆ. ಇಂತಹ ಸಮ್ಮೇಳನಗಳು ಬೇರೆಯಾವ ದೇವಾಲಯ ಉತ್ಸವಗಳಲ್ಲೂ ನಡೆಯುವುದಿಲ್ಲ. ಧಾರ್ಮಿಕ ಹಸಿವಿನೊಂದಿಗೆ ಜ್ಞಾನದ ಹಸಿವಿಗೂ ಈ ಸ್ಥಳ ಅನ್ನಪೂರ್ಣೇಶ್ವರಿಯಾಗಿದೆ!.

ಇರಲಿ, ಮೊದಲೆ ಚರ್ಚಿಸಿದ ಹಾಗೆ ನಮ್ಮ ಬದುಕು ನಮಗೆ ಧರ್ಮವನ್ನು ಕಲಿಸುತ್ತದೆ. ಹಾಗೆಯೇ ಧರ್ಮ ಕೂಡ. ಆದರೆ ಇಂದು ನಾವು ಬದುಕನ್ನೂ ಧರ್ಮವನ್ನೂ ಕ್ಲಿಷ್ಠವಾಗಿಸಿಕೊಂಡಿದ್ದೇವೆ. ಈಗಿನ ಯುವಪೀಳಿಗೆ ಒಂದೆಡೆ ಜಾಗತೀಕರಣದಿಂದಾದ ಆಧುನಿಕ ಅಪಸವ್ಯಗಳಿಗೆ ತೆರೆದುಕೊಳ್ಳುತ್ತಿದೆ. ‘ಧರ್ಮ’ವೂ ಅಪವ್ಯಾಖ್ಯಾನಕ್ಕೀಡಾಗುತ್ತಿದೆ. ಧರ್ಮವನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದೆ ಬದಲಾವಣೆಗಳಿಗೂ ಒಗ್ಗಿಕೊಳ್ಳದೆ ಡೋಲಾಯಮಾನ ಸ್ಥಿತಿಯಲ್ಲಿದ್ದೇವೆ.

ಈ ಧರ್ಮ ಮತ್ತು ಬದುಕಿನ ತಿಕ್ಕಾಟದಲ್ಲಿ ನಾವು ಇಂದಿನ ಸಮಾಜವನ್ನು ಗಮನಿಸುವುದಾದರೆ ಧರ್ಮವನ್ನೇ ನೆಚ್ಚಿಕೊಳ್ಳುವ, ಅನಗತ್ಯವಾಗಿ ವಿಜೃಂಭಿಸುವ, ಇನ್ನೂಂದು ಸಮುದಾಯಕ್ಕೆ ಸೆಡ್ಡು ಹೊಡೆಯುವ ಯೋಚನೆಯಲ್ಲಿ ಬದುಕು ಸೋಲುತ್ತಿದೆ ಎನಿಸುತ್ತದೆ. ಲಕ್ಷದೀಪೂತ್ಸವದ ಸಾಹಿತ್ಯ ಸಮ್ಮೇಳದಲ್ಲಿ ಉಪನ್ಯಾಸ ನೀಡಿದ ಖ್ಯಾತ ಕಥೆಗಾರ ವಸುದೇಂದ್ರ ಅವರು ಹೇಳುತ್ತಾರೆ, ‘ಧರ್ಮಕಿಂತ ಬದುಕು ದೊಡ್ಡದು. ಬದುಕಿಗೆ ಕಂಟಕವಾಗುದಾದರೆ ಧರ್ಮವನ್ನೂ ದಾಟಬೇಕು’. ಇದು ಅಕ್ಷರಶಃ ನಿಜ.

ಲಕ್ಷದೀಪೂತ್ಸವವನ್ನೇ ಗಮನಿಸುವುದದರೆ, ಲಕ್ಷಾಂತರ ಭಕ್ತಾದಿಗಳು ರಾಜ್ಯದ ಹಾಗೂ ಹೊರ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದಾರೆ. ಅದರಲ್ಲಿ ಎಷ್ಟೂ ಮಂದಿ ರಸ್ತೆಯಲ್ಲಿ ಕೊರೆಯುವ ಚಳಿಯಲ್ಲಿ ಮಲಗಿ ಐದೂ ದಿನಗಳವರೆಗೆ ಇದ್ದರು.

ಧರ್ಮವನ್ನೂ ಎರಡು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಒಂದು ಕರ್ತವ್ಯ ಇನ್ನೂಂದು ಧಾರ್ಮಿಕತೆ. ಹೀಗೆ, ಸಮಾಜ ಈಗ ಯಾವುದುದಾದರೂ ಒಂದನ್ನು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ಬಂದಿದೆ. ಬದುಕನ್ನೇ ಧರ್ಮವಾಗಿಸಿಕೊಂಡು ಬದುಕುವುದು ಅಥವಾ ಧರ್ಮವನ್ನೆ ಬದುಕಾಗಿಸಿಕೊಳ್ಳುವುದು. ಅಥವಾ ಎರಡನ್ನೂ ಸರಿದೂಗಿಸಿಕೊಂಡು ಹೋಗುವುದು. ಆಯ್ಕೆ ನಮ್ಮದು.

ಬರಹ: ಸುಕೃತ


Spread the love